ಉತ್ತಮ ಆರೋಗ್ಯಕ್ಕಾಗಿ ಸತ್ವಭರಿತ ತರಕಾರಿಗಳ ಸೇವನೆ

Fresh nutrient-rich vegetables arranged for healthy eating
ಉತ್ತಮ ಆರೋಗ್ಯಕ್ಕಾಗಿ ಸತ್ವಭರಿತ ತರಕಾರಿಗಳ ಸೇವನೆ

ನಮ್ಮ ದೈನಂದಿನ ಆಹಾರದಲ್ಲಿ ತರಕಾರಿಗಳು ಅತ್ಯಂತ ಪ್ರಮುಖ ಪಾತ್ರವಹಿಸುತ್ತವೆ. ಪ್ರಕೃತಿಯಲ್ಲಿ ದೊರೆಯುವ ಬಣ್ಣಬಣ್ಣದ ತರಕಾರಿಗಳು ಕೇವಲ ರುಚಿ ಮತ್ತು ಆಕರ್ಷಕತೆಯನ್ನು ಮಾತ್ರ ನೀಡುವುದಲ್ಲ, ಅವುಗಳಲ್ಲಿ ಅಡಗಿರುವ ಉತ್ಕರ್ಷಣ ನಿರೋಧಕಗಳು (Antioxidants) ದೇಹವನ್ನು ಒಳಗಿನಿಂದ ರಕ್ಷಿಸುವ ಶಕ್ತಿಯನ್ನೂ ಹೊಂದಿವೆ. ಇಂದಿನ ಕಲುಷಿತ ವಾತಾವರಣ, ಒತ್ತಡಭರಿತ ಜೀವನಶೈಲಿ ಹಾಗೂ ಅಪೌಷ್ಟಿಕ ಆಹಾರ ಪದ್ಧತಿಗಳ ನಡುವೆ ಉತ್ಕರ್ಷಣ ನಿರೋಧಕಗಳ ಅಗತ್ಯತೆ ದಿನೇದಿನೇ ಹೆಚ್ಚುತ್ತಿದೆ. ವಿವಿಧ ಬಣ್ಣದ ತರಕಾರಿಗಳನ್ನು ನಿಯಮಿತವಾಗಿ ಸೇವಿಸುವುದರಿಂದ ದೇಹದ ಜೀವಕೋಶಗಳು ಹಾನಿಯಿಂದ ರಕ್ಷಿಸಲ್ಪಟ್ಟು ಆರೋಗ್ಯಕರವಾಗಿರುತ್ತವೆ.

ಉತ್ಕರ್ಷಣ ನಿರೋಧಕಗಳು ಎಂದರೆ ದೇಹದಲ್ಲಿ ಉಂಟಾಗುವ ಅಥವಾ ಹೊರಗಿನಿಂದ ಪ್ರವೇಶಿಸುವ ಹಾನಿಕಾರಕ ಮುಕ್ತ ಮೂಲಕಗಳನ್ನು (Free Radicals) ನಿಷ್ಕ್ರಿಯಗೊಳಿಸಿ ಜೀವಕೋಶಗಳನ್ನು ರಕ್ಷಿಸುವ ದ್ರವ್ಯಗಳು. ಇವು ದೇಹದ ಸೂಕ್ಷ್ಮ ಭಾಗಗಳಲ್ಲಿ ಆಮ್ಲಜನಕದಿಂದಾಗುವ ಹಾನಿಯನ್ನು ತಡೆಯುವ ಮೂಲಕ ದೇಹದ ಸಮತೋಲನ ಮತ್ತು ಆರೋಗ್ಯವನ್ನು ಕಾಪಾಡುತ್ತವೆ.

ಉತ್ಕರ್ಷಣ ನಿರೋಧಕಗಳನ್ನು ಎರಡು ಮುಖ್ಯ ವಿಭಾಗಗಳಾಗಿ ವಿಂಗಡಿಸಬಹುದು. ದೇಹವೇ ತಯಾರಿಸುವ ಎಂಜೈಮ್ ಆಧಾರಿತ ಉತ್ಕರ್ಷಣ ನಿರೋಧಕಗಳು ಹಾಗೂ ಆಹಾರದಿಂದ ದೊರೆಯುವ ಎಂಜೈಮ್ ರಹಿತ ಉತ್ಕರ್ಷಣ ನಿರೋಧಕಗಳು. ವಿಟಮಿನ್-ಎ, ವಿಟಮಿನ್-ಸಿ, ವಿಟಮಿನ್-ಇ, ಸೆಲೆನಿಯಮ್, ಜಿಂಕು, ಫ್ಲೇವನಾಯ್ಡ್‌ಗಳು, ಲೈಕೋಪಿನ್, ಕ್ಯಾರೋಟಿನಾಯ್ಡ್‌ಗಳು, ಆಂಥೋಸೈನಿನ್‌ಗಳು ಮುಂತಾದವು ತರಕಾರಿಗಳಲ್ಲಿ ದೊರೆಯುವ ಪ್ರಮುಖ ಉತ್ಕರ್ಷಣ ನಿರೋಧಕಗಳಾಗಿವೆ.

ತರಕಾರಿಗಳಲ್ಲಿನ ಉತ್ಕರ್ಷಣ ನಿರೋಧಕಗಳು ದೇಹದಲ್ಲಿ ಉಂಟಾಗುವ ಹಾನಿಕಾರಕ ಕ್ರಿಯೆಗಳನ್ನು ತಡೆದು ಕೋಶಗಳನ್ನು ರಕ್ಷಿಸುತ್ತವೆ. ಇವು ರಕ್ತವನ್ನು ಶುದ್ಧೀಕರಿಸುವುದರ ಜೊತೆಗೆ ದೇಹದ ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ. ಹಾನಿಗೊಳಗಾದ ಕೋಶಗಳ ಮರುನಿರ್ಮಾಣಕ್ಕೂ ಸಹಕಾರಿಯಾಗುತ್ತವೆ. ಜೊತೆಗೆ ಚರ್ಮದ ತಾಜಾತನ, ಮೆದುಳಿನ ಕಾರ್ಯಕ್ಷಮತೆ ಹಾಗೂ ಜೀರ್ಣಕ್ರಿಯೆ ಸುಧಾರಣೆಯಲ್ಲಿಯೂ ಮಹತ್ವದ ಪಾತ್ರವಹಿಸುತ್ತವೆ.

ಬಣ್ಣ ಆಧಾರಿತ ತರಕಾರಿಗಳಲ್ಲಿ ವಿಭಿನ್ನ ಉತ್ಕರ್ಷಣ ನಿರೋಧಕಗಳು ದೊರೆಯುತ್ತವೆ. ಕೆಂಪು ಬಣ್ಣದ ಟೊಮ್ಯಾಟೊ, ಬೀಟ್ರೂಟ್ ಹಾಗೂ ಕೆಂಪು ಕೋಸಿನಲ್ಲಿ ಲೈಕೋಪಿನ್ ಮತ್ತು ಆಂಥೋಸೈನಿನ್‌ಗಳು ದೊರೆಯುತ್ತವೆ. ಗಜ್ಜರಿ, ಕುಂಬಳಕಾಯಿ ಮತ್ತು ಸಿಹಿಗೆಣಸುಗಳಲ್ಲಿ ಬೀಟಾ-ಕ್ಯಾರೋಟಿನ್ ಹೆಚ್ಚಿರುತ್ತದೆ. ಹಸಿರು ತರಕಾರಿಗಳಾದ ಬಸಳೆಸೊಪ್ಪು, ಬ್ರೊಕೋಲಿ ಮತ್ತು ಬಟಾಣಿಯಲ್ಲಿ ಲುಟೀನ್ ಹಾಗೂ ಝಿಯಾಂಥಿನ್ ದೊರೆಯುತ್ತವೆ. ನೇರಳೆ ಬದನೆಕಾಯಿ ಮತ್ತು ಕೆಂಪು ಕೋಸುಗಳಲ್ಲಿ ಆಂಥೋಸೈನಿನ್‌ಗಳು ಸಮೃದ್ಧವಾಗಿರುತ್ತವೆ. ಬೆಳ್ಳುಳ್ಳಿ ಮತ್ತು ಈರುಳ್ಳಿಯಲ್ಲಿ ಗಂಧಕ ಸಂಯುಕ್ತಗಳು ಹಾಗೂ ಕ್ವೆರ್ಸಿಟಿನ್ ದೊರೆಯುತ್ತವೆ.

ಉತ್ಕರ್ಷಣ ನಿರೋಧಕಗಳ ಪ್ರಮಾಣವನ್ನು ಹೆಚ್ಚಿಸಿಕೊಳ್ಳಲು ಆಹಾರದಲ್ಲಿ ಬಣ್ಣ ವೈವಿಧ್ಯತೆಯ ತರಕಾರಿಗಳನ್ನು ಸೇರಿಸಬೇಕು. ತಾಜಾ ಮತ್ತು ಋತುಮಾನದ ತರಕಾರಿಗಳನ್ನು ಬಳಸುವುದು ಉತ್ತಮ. ತರಕಾರಿಗಳನ್ನು ಅತಿಯಾಗಿ ಬೇಯಿಸದೇ ಹಬೆಯಲ್ಲಿ ಅಥವಾ ಕಡಿಮೆ ಎಣ್ಣೆಯಲ್ಲಿ ಬೇಯಿಸಿದರೆ ಪೋಷಕಾಂಶಗಳು ಉಳಿಯುತ್ತವೆ. ಸಲಾಡ್, ತಂಬುಳಿ ಹಾಗೂ ಕಚ್ಚಾ ತರಕಾರಿಗಳ ಸೇವನೆಯೂ ದೇಹಕ್ಕೆ ಹೆಚ್ಚಿನ ಪ್ರಯೋಜನ ನೀಡುತ್ತದೆ.

ಹೀಗೆ ಬಣ್ಣಬಣ್ಣದ ತರಕಾರಿಗಳು ಕೇವಲ ಆಹಾರವಲ್ಲ, ಆರೋಗ್ಯವನ್ನು ಕಾಪಾಡುವ ನೈಸರ್ಗಿಕ ಔಷಧಿಗಳಂತಿವೆ. ಪ್ರತಿದಿನ ವಿವಿಧ ಬಣ್ಣದ ತರಕಾರಿಗಳನ್ನು ಆಹಾರದಲ್ಲಿ ಸೇರಿಸಿಕೊಳ್ಳುವುದರಿಂದ ದೇಹದ ರೋಗನಿರೋಧಕ ಶಕ್ತಿ ಹೆಚ್ಚುವುದರ ಜೊತೆಗೆ ಆರೋಗ್ಯಕರ ಜೀವನ ನಡೆಸಲು ಸಾಧ್ಯವಾಗುತ್ತದೆ.

Facebook
WhatsApp
Twitter
LinkedIn
Government of Karnataka