ಭತ್ತದಲ್ಲಿ ಜೈವಿಕ ಬಲವರ್ಧಿತ ತಳಿ ಸ್ಫೂರ್ತಿ(ಜಿ.ಎನ್.ವಿ 1906) ಉತ್ಪಾದನಾ ತಾಂತ್ರಿಕತೆಗಳು

ಭತ್ತದಲ್ಲಿ ಜೈವಿಕ ಬಲವರ್ಧಿತ ತಳಿ ಸ್ಫೂರ್ತಿ(ಜಿ.ಎನ್.ವಿ 1906) ಉತ್ಪಾದನಾ ತಾಂತ್ರಿಕತೆಗಳು

ಕರ್ನಾಟಕ ರಾಜ್ಯದಲ್ಲಿ ಭತ್ತವನ್ನು ಸುಮಾರು 13 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗುತ್ತಿದ್ದು, ವಾರ್ಷಿಕವಾಗಿ ಸುಮಾರು 50 ಲಕ್ಷ ಟನ್ ಉತ್ಪಾದನೆಯಾಗುತ್ತಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಭತ್ತದ ಬೇಸಾಯ ವೆಚ್ಚ ಹೆಚ್ಚಾಗುತ್ತಿರುವುದು ಹಾಗೂ ಇಳುವರಿ ಕುಂಠಿತವಾಗುತ್ತಿರುವುದು ರೈತರಲ್ಲಿ ಆತಂಕ ಉಂಟುಮಾಡಿದೆ. ಕಾರ್ಮಿಕರ ಕೊರತೆ, ಸಕಾಲದಲ್ಲಿ ನಾಟಿ ಮಾಡದಿರುವುದು, ಪೋಷಕಾಂಶಗಳ ಸಮರ್ಪಕ ನಿರ್ವಹಣೆಯ ಕೊರತೆ, ಕೀಟ ಮತ್ತು ರೋಗ ನಿಯಂತ್ರಣ ಕ್ರಮಗಳನ್ನು ಸರಿಯಾಗಿ ಅನುಸರಿಸದಿರುವುದು ಸೇರಿದಂತೆ ಹಲವು ಕಾರಣಗಳಿಂದ ಭತ್ತದ ಕೃಷಿ ಅಷ್ಟಾಗಿ ಲಾಭದಾಯಕವಾಗಿಲ್ಲ ಎಂಬ ಅಭಿಪ್ರಾಯ ಕೇಳಿಬರುತ್ತಿದೆ. ಆದರೂ ವೈಜ್ಞಾನಿಕ ಪದ್ಧತಿಗಳನ್ನು ಅಳವಡಿಸಿಕೊಂಡರೆ ಭತ್ತದಲ್ಲಿ ಉತ್ತಮ ಇಳುವರಿ ಪಡೆಯುವುದು ಸಾಧ್ಯ.

ಈ ನಿಟ್ಟಿನಲ್ಲಿ ಅಂತರಾಷ್ಟ್ರೀಯ ಭತ್ತದ ಸಂಶೋಧನಾ ಸಂಸ್ಥೆ, ಭಾರತೀಯ ಕೃಷಿ ಅನುಸಂಧಾನ ಪರಿಷತ್ ಹಾಗೂ ಕೃಷಿ ವಿಶ್ವವಿದ್ಯಾಲಯ ರಾಯಚೂರು ಸಂಯುಕ್ತವಾಗಿ ಅಭಿವೃದ್ಧಿಪಡಿಸಿದ “ಸ್ಪೂರ್ತಿ (ಜಿ.ಎನ್.ವಿ 1906)” ಜೈವಿಕ ಬಲವರ್ಧಿತ ಭತ್ತದ ತಳಿ ರೈತರಿಗೆ ಉತ್ತಮ ಆಯ್ಕೆಯಾಗಿದೆ. ಈ ತಳಿಯಲ್ಲಿ 26 ಪಿ.ಪಿ.ಎಂ. ಜಿಂಕ್ ಅಂಶವಿದ್ದು, ಸಾಮಾನ್ಯ ಭತ್ತದ ತಳಿಗಳಿಗಿಂತ ಹೆಚ್ಚು ಪೌಷ್ಟಿಕಾಂಶ ಹೊಂದಿದೆ. ವಿಶೇಷವಾಗಿ ಮಹಿಳೆಯರು, ಮಕ್ಕಳು ಮತ್ತು ವೃದ್ಧರಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಜಿಂಕ್ ಪ್ರಮುಖ ಪಾತ್ರವಹಿಸುತ್ತದೆ. ಇದು ಮೆದುಳಿನ ಬೆಳವಣಿಗೆ, ನೆನಪಿನ ಶಕ್ತಿ ಹಾಗೂ ಆರೋಗ್ಯಕರ ಗರ್ಭಧಾರಣೆಗೆ ಸಹ ಸಹಾಯಕವಾಗಿದೆ.

“ಸ್ಪೂರ್ತಿ” ತಳಿಯು ಮಧ್ಯಮಾವಧಿಯ ಭತ್ತದ ತಳಿಯಾಗಿದ್ದು, 125 ರಿಂದ 130 ದಿನಗಳಲ್ಲಿ ಕಟಾವಿಗೆ ಬರುತ್ತದೆ. ಗಿಡದ ಎತ್ತರವು 115 ರಿಂದ 120 ಸೆ.ಮೀ.ವರೆಗೆ ಇರುತ್ತದೆ. ಉದ್ದ ಹಾಗೂ ದಪ್ಪವಾದ ಕಾಳುಗಳನ್ನು ಹೊಂದಿರುವ ಈ ತಳಿ ಉತ್ತಮ ಗುಣಮಟ್ಟದ ಅಕ್ಕಿ ನೀಡುತ್ತದೆ. ಹೆಕ್ಟೇರಿಗೆ ಸರಾಸರಿ 53 ಕ್ವಿಂಟಲ್ ಕಾಳಿನ ಇಳುವರಿ ನೀಡುವ ಸಾಮರ್ಥ್ಯವನ್ನು ಹೊಂದಿದ್ದು, ಇತರೆ ಕೆಲವು ಪ್ರಸಿದ್ಧ ತಳಿಗಳಿಗಿಂತ ಹೆಚ್ಚು ಉತ್ಪಾದನೆ ನೀಡುತ್ತದೆ.

ಭತ್ತದಲ್ಲಿ ಉತ್ತಮ ಇಳುವರಿ ಪಡೆಯಲು ಸೂಕ್ತ ತಳಿಗಳ ಆಯ್ಕೆ, ಗುಣಮಟ್ಟದ ಬೀಜೋಪಚಾರ, ಸರಿಯಾದ ಭೂಮಿ ಸಿದ್ಧತೆ ಹಾಗೂ ಸಮರ್ಪಕ ನೀರಾವರಿ ನಿರ್ವಹಣೆ ಬಹಳ ಮುಖ್ಯ. ಗದ್ದೆಯನ್ನು ಚೆನ್ನಾಗಿ ಉಳುಮೆ ಮಾಡಿ, ಹಸಿರೆಲೆ ಗೊಬ್ಬರ ಅಥವಾ ಕೊಟ್ಟಿಗೆ ಗೊಬ್ಬರವನ್ನು ಸೇರಿಸಿ ನಾಟಿ ಮಾಡಿದರೆ ಸಸಿಗಳು ಉತ್ತಮವಾಗಿ ಬೆಳೆಯುತ್ತವೆ. ಬಿತ್ತನೆಗೆ ಮೊದಲು ಬೀಜಗಳನ್ನು ಕಾರ್ಬೆಂಡೆಜಿಂ ಬಳಸಿ ಉಪಚರಿಸುವುದರಿಂದ ಶಿಲೀಂಧ್ರ ರೋಗಗಳನ್ನು ನಿಯಂತ್ರಿಸಬಹುದು

ಜೈವಿಕ ಗೊಬ್ಬರಗಳಾದ ಅಜೋಸ್ಪೀರಿಲಂ ಬಳಕೆ ಮಾಡಿದರೆ ಮಣ್ಣಿನ ಫಲವತ್ತತೆ ಹೆಚ್ಚುವುದರ ಜೊತೆಗೆ ರಾಸಾಯನಿಕ ಗೊಬ್ಬರಗಳ ಅವಲಂಬನೆಯೂ ಕಡಿಮೆಯಾಗುತ್ತದೆ. ಸಾಲಿನಿಂದ ಸಾಲಿಗೆ ಹಾಗೂ ಗಿಡದಿಂದ ಗಿಡಕ್ಕೆ ಸರಿಯಾದ ಅಂತರ ಕಾಪಾಡಿ ನಾಟಿ ಮಾಡಿದರೆ ಉತ್ತಮ ತೆಂಡೆಗಳ ಬೆಳವಣಿಗೆ ಸಾಧ್ಯವಾಗುತ್ತದೆ.

ನೀರಿನ ಸಮರ್ಪಕ ನಿರ್ವಹಣೆ ಭತ್ತದಲ್ಲಿ ಅತ್ಯಂತ ಮುಖ್ಯವಾಗಿದೆ. ವಿಶೇಷವಾಗಿ ತೆನೆ ಬರುವ ಹಾಗೂ ಕಾಳು ತುಂಬುವ ಸಮಯದಲ್ಲಿ ತೇವಾಂಶ ಕಾಪಾಡುವುದು ಅಗತ್ಯ. ಮಣ್ಣಿನಲ್ಲಿ ಬಿರುಕು ಕಾಣಿಸಿಕೊಂಡರೆ ಇಳುವರಿ ಶೇಕಡಾ 8 ರಿಂದ 10 ರಷ್ಟು ಕಡಿಮೆಯಾಗುವ ಸಾಧ್ಯತೆ ಇದೆ. ಆದ್ದರಿಂದ ನೀರಿನ ನಿರ್ವಹಣೆಯನ್ನು ವೈಜ್ಞಾನಿಕವಾಗಿ ಮಾಡುವುದು ಸೂಕ್ತ

ರಾಸಾಯನಿಕ ಹಾಗೂ ಸಾವಯವ ಗೊಬ್ಬರಗಳನ್ನು ಮಣ್ಣು ಪರೀಕ್ಷೆಯ ಆಧಾರದಲ್ಲಿ ಬಳಸುವುದರಿಂದ ಉತ್ತಮ ಫಲಿತಾಂಶ ಪಡೆಯಬಹುದು. ಜೊತೆಗೆ ಯಾಂತ್ರೀಕೃತ ನಾಟಿ ಹಾಗೂ ಡ್ರಂ ಸೀಡರ್ ಬಳಕೆ ಮಾಡಿದರೆ ಕಾರ್ಮಿಕ ವೆಚ್ಚ ಕಡಿಮೆಯಾಗುತ್ತದೆ.

ಹೀಗೆ ವೈಜ್ಞಾನಿಕ ಕ್ರಮಗಳನ್ನು ಅನುಸರಿಸಿ “ಸ್ಪೂರ್ತಿ (ಜಿ.ಎನ್.ವಿ 1906)” ತಳಿಯನ್ನು ಬೆಳೆಯುವುದರಿಂದ ಉತ್ತಮ ಇಳುವರಿಯ ಜೊತೆಗೆ ಪೌಷ್ಟಿಕಾಂಶಯುಕ್ತ ಅಕ್ಕಿಯನ್ನು ಉತ್ಪಾದಿಸಿ ರೈತರು ಹೆಚ್ಚಿನ ಲಾಭ ಪಡೆಯಬಹುದು.

Facebook
WhatsApp
Twitter
LinkedIn
Government of Karnataka