ಹವಾಮಾನ ಆಧಾರಿತ ಕೃಷಿ: ಒಂದು ದಿಕ್ಸೂಚಿ

ಹವಾಮಾನ ಆಧಾರಿತ ಕೃಷಿ: ಒಂದು ದಿಕ್ಸೂಚಿ

ಭಾರತದಲ್ಲಿ ಸುಮಾರು ಶೇಕಡಾ 50-60ರಷ್ಟು ಜನರು ಕೃಷಿಯನ್ನು ಅವಲಂಬಿಸಿಕೊಂಡಿದ್ದಾರೆ. ಆದರೆ ಇತ್ತೀಚಿನ ಹವಾಮಾನ ವೈಪರೀತ್ಯಗಳಿಂದಾಗಿ ಬೆಳೆಗಳು ವಿಫಲವಾಗುತ್ತಿರುವುದು ದೊಡ್ಡ ಸವಾಲಾಗಿ ಪರಿಣಮಿಸಿದೆ. ಸರ್ಕಾರ ರೈತರ ಹಿತಕ್ಕಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದರೂ, ಹವಾಮಾನದ ಅಸ್ಥಿರತೆಯಿಂದಾಗಿ ಅವುಗಳ ಸಂಪೂರ್ಣ ಪ್ರಯೋಜನ ದೊರೆಯುತ್ತಿಲ್ಲ. ಹೀಗಾಗಿ ಪ್ರಸ್ತುತ ಕಾಲದಲ್ಲಿ ಹವಾಮಾನ ಮಾಹಿತಿಯ ಅರಿವು ರೈತರಿಗೆ ಅತ್ಯಂತ ಅಗತ್ಯವಾಗಿದೆ.

ಈ ಹಿನ್ನೆಲೆಯಲ್ಲೇ ಭಾರತೀಯ ಹವಾಮಾನ ಇಲಾಖೆ ಮತ್ತು ಭಾರತೀಯ ಕೃಷಿ ಅನುಸಂಧಾನ ಪರಿಷತ್ ಜಂಟಿಯಾಗಿ 2019ರಿಂದ ದೇಶದಾದ್ಯಂತ ಜಿಲ್ಲಾ ಕೃಷಿ ಹವಾಮಾನ ಘಟಕಗಳನ್ನು ಸ್ಥಾಪಿಸಿ ಕಾರ್ಯನಿರ್ವಹಿಸುತ್ತಿವೆ. ಈ ಘಟಕಗಳು ರೈತರಿಗೆ ಮಂಗಳವಾರದಿಂದ ಶುಕ್ರವಾರದವರೆಗೆ ನಾಲ್ಕು ದಿನಗಳ ಹವಾಮಾನ ಮುನ್ಸೂಚನೆ ಮಾಹಿತಿಯನ್ನು ನೀಡುತ್ತಿವೆ.

ಈ ಮಾಹಿತಿಯ ಮೂಲಕ ಕೃಷಿ ಮತ್ತು ತೋಟಗಾರಿಕೆ ಬೆಳೆಗಳ ತಳಿಗಳ ಆಯ್ಕೆ, ಬಿತ್ತನೆ ಮತ್ತು ಬೆಳವಣಿಗೆಯ ಸಮಯದಲ್ಲಿ ಮಳೆ ಮಾಹಿತಿ, ಪೋಷಕಾಂಶಗಳ ಬಳಕೆ, ರೋಗ ಮತ್ತು ಕೀಟಗಳ ನಿರ್ವಹಣೆ ಹಾಗೂ ಕಟಾವು ಮತ್ತು ಒಕ್ಕಣೆ ಸಮಯದ ಮುನ್ಸೂಚನೆಗಳನ್ನು ರೈತರಿಗೆ ನೀಡಲಾಗುತ್ತಿದೆ. ಈ ಮಾಹಿತಿಯನ್ನು ದಿನಪತ್ರಿಕೆ, ದೂರದರ್ಶನ, ರೇಡಿಯೋ ಹಾಗೂ ವಾಟ್ಸಾಪ್ ಸೇರಿದಂತೆ ವಿವಿಧ ಮಾಧ್ಯಮಗಳ ಮೂಲಕ ತಲುಪಿಸಲಾಗುತ್ತಿದೆ.

ಇದಲ್ಲದೆ, ಹೊರಾಂಗಣ ಮತ್ತು ಒಳಾಂಗಣ ತರಬೇತಿ ಕಾರ್ಯಕ್ರಮಗಳ ಮೂಲಕ ಹವಾಮಾನ ಬದಲಾವಣೆಯ ಪರಿಣಾಮಗಳ ಬಗ್ಗೆ ರೈತರಿಗೆ ಜಾಗೃತಿ ಮೂಡಿಸಲಾಗುತ್ತಿದೆ. ಮೇಘದೂತ್ಮತ್ತು ದಾಮಿನಿಆಪ್‌ಗಳ ಬಳಕೆಯ ಕುರಿತೂ ಅರಿವು ನೀಡಲಾಗುತ್ತಿದೆ. ರೈತರ ದೂರವಾಣಿ ಸಂಖ್ಯೆಯನ್ನು ನೋಂದಾಯಿಸಿ, ವಾಟ್ಸಾಪ್ ಗುಂಪುಗಳ ಮೂಲಕ ತಾಲ್ಲೂಕು ಮಟ್ಟದಲ್ಲಿ ಮಾಹಿತಿಯನ್ನು ಹಂಚಲಾಗುತ್ತಿದೆ

ರೈತ ರಮೇಶ್ ಅವರ ಅನುಭವ

ಈ ಯೋಜನೆಯ ಪ್ರಯೋಜನ ಪಡೆದವರಲ್ಲಿ ರಮೇಶ್ ಕೆ. (ತಮ್ಮಡಿಹಳ್ಳಿ, ಹುಳಿಯಾರು ಹೋಬಳಿ, ಚಿಕ್ಕನಾಯಕನಹಳ್ಳಿ ತಾಲ್ಲೂಕು) ಪ್ರಮುಖರು. ಇವರು ಐದನೇ ತರಗತಿವರೆಗೆ ವಿದ್ಯಾಭ್ಯಾಸ ಮಾಡಿದ್ದು, ತಮ್ಮ 35 ಎಕರೆ ಜಮೀನಿನಲ್ಲಿ ರಾಗಿ, ತೊಗರಿ, ಉದ್ದು, ಹೆಸರು, ಅಲಸಂದೆ, ಬಾಳೆ, ತೆಂಗು, ಟೊಮ್ಯಾಟೊ, ಅಡಿಕೆ, ವಿಳ್ಳೆದೆಲೆ, ಶ್ರೀಗಂಧ, ಮಹಾಗನಿ ಹಾಗೂ ಹೆಬ್ಬೇವು ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಜೊತೆಗೆ ಹೈನುಗಾರಿಕೆಯನ್ನು ಸಹ ಮಾಡುತ್ತಿದ್ದಾರೆ.

2019ರ ಮೊದಲು, ಹವಾಮಾನ ಮುನ್ಸೂಚನೆ ಮತ್ತು ಕೃಷಿ ನಿರ್ವಹಣೆ ಕುರಿತು ಸೂಕ್ತ ಮಾಹಿತಿ ಲಭ್ಯವಿರಲಿಲ್ಲ. ಇದರಿಂದಾಗಿ ಕಟಾವು ಸಮಯದಲ್ಲಿ ಮಳೆ ಬಂದು ಬೆಳೆ ನಷ್ಟವಾಗುವುದು ಸಾಮಾನ್ಯವಾಗಿತ್ತು. ಸುಮಾರು 30–40%ರಷ್ಟು ನಷ್ಟ ಉಂಟಾಗುತ್ತಿದ್ದು, ವಾರ್ಷಿಕ ಆದಾಯವು ಕೇವಲ ರೂ. 2–3 ಲಕ್ಷದಷ್ಟೇ ಇತ್ತು

ಆದರೆ 2019ರ ನಂತರ, ಜಿಲ್ಲಾ ಕೃಷಿ ಹವಾಮಾನ ಘಟಕದ ಮಾಹಿತಿಯನ್ನು ಅನುಸರಿಸಿ ಕೃಷಿ ಚಟುವಟಿಕೆ ನಡೆಸಲು ಆರಂಭಿಸಿದರು. ವಾಟ್ಸಾಪ್ ಮೂಲಕ ನಿಯಮಿತವಾಗಿ ಲಭ್ಯವಾಗುವ ಹವಾಮಾನ ಮುನ್ಸೂಚನೆ ಮತ್ತು ಕೃಷಿ ಸಲಹೆಗಳಿಂದಾಗಿ ಅವರು ಸುಧಾರಿತ ತಳಿಗಳ ಬಳಕೆ, ಜೈವಿಕ ಗೊಬ್ಬರಗಳ ಮೂಲಕ ಬೀಜೋಪಚಾರ, ಜೈವಿಕ ಪೀಡೆನಾಶಕಗಳ ಬಳಕೆ, ಮಣ್ಣು ಪರೀಕ್ಷೆ ಆಧಾರಿತ ರಸಗೊಬ್ಬರ ಬಳಕೆ ಮುಂತಾದ ಕ್ರಮಗಳನ್ನು ಅನುಸರಿಸಲು ಆರಂಭಿಸಿದರು.

ಇದರಿಂದಾಗಿ ಇಳುವರಿಯಲ್ಲಿ 10-15%ರಷ್ಟು ಹೆಚ್ಚಳ ಕಂಡುಬಂದಿದ್ದು, ಕಟಾವು ಸಮಯದಲ್ಲಿ ಬೆಳೆ ನಷ್ಟವೂ ಕಡಿಮೆಯಾಗಿದೆ. ಪರಿಣಾಮವಾಗಿ ಅವರ ವಾರ್ಷಿಕ ಆದಾಯವು ರೂ. 6-7 ಲಕ್ಷದವರೆಗೆ ಏರಿಕೆಯಾಗಿದೆ.

ಸಾರಾಂಶ

ರಮೇಶ್ ಅವರ ಅನುಭವವು ಇತರ ರೈತರಿಗೆ ಸ್ಪೂರ್ತಿದಾಯಕವಾಗಿದೆ. ಜಿಲ್ಲಾ ಕೃಷಿ ಹವಾಮಾನ ಘಟಕದ ಮುನ್ಸೂಚನೆ ಮಾಹಿತಿಯನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ಕೃಷಿ ಚಟುವಟಿಕೆ ನಡೆಸಿದರೆ, ಉತ್ತಮ ಇಳುವರಿ ಮತ್ತು ಹೆಚ್ಚಿನ ಆದಾಯ ಪಡೆಯಬಹುದು ಎಂಬುದನ್ನು ಇದು ಸ್ಪಷ್ಟಪಡಿಸುತ್ತದೆ.

Facebook
WhatsApp
Twitter
LinkedIn
Government of Karnataka