ಸಸ್ಯ ತಳಿ ರಕ್ಷಣೆ ಹಾಗೂ ರೈತರ ಹಕ್ಕುಗಳ ಕಾಯ್ದೆ 2001

Farmers and plant breeders protected under the PPV&FR Act, 2001
ಸಸ್ಯ ತಳಿ ರಕ್ಷಣೆ ಹಾಗೂ ರೈತರ ಹಕ್ಕುಗಳ ಕಾಯ್ದೆ 2001

ಭಾರತದ ಕೃಷಿ ಕ್ಷೇತ್ರದಲ್ಲಿ ಹೊಸ ತಳಿಗಳ ಅಭಿವೃದ್ಧಿ, ರೈತರ ಕೊಡುಗೆಗೆ ಮಾನ್ಯತೆ ಮತ್ತು ತಳಿವರ್ಧಕರ ಹಕ್ಕುಗಳ ರಕ್ಷಣೆಗೆ ಮಹತ್ವದ ಹೆಜ್ಜೆಯಾಗಿ ಸಸ್ಯ ತಳಿ ಸಂರಕ್ಷಣೆ ಮತ್ತು ರೈತರ ಹಕ್ಕುಗಳ ಕಾಯ್ದೆ, 2001 ಜಾರಿಗೊಂಡಿದೆ. ಈ ಕಾಯ್ದೆಯನ್ನು ಅಂತರರಾಷ್ಟ್ರೀಯ ಹೊಸ ಸಸ್ಯ ತಳಿಗಳ ರಕ್ಷಣಾ ಒಕ್ಕೂಟ (UPOV) ನಿಯಮಗಳ ಅನುಸಾರ ರೂಪಿಸಲಾಗಿದ್ದು, ರೈತರು, ಸಂಶೋಧಕರು ಹಾಗೂ ತಳಿವರ್ಧಕರ ಹಿತಾಸಕ್ತಿಯನ್ನು ಸಮತೋಲನದಿಂದ ಕಾಪಾಡುವ ಉದ್ದೇಶ ಹೊಂದಿದೆ.

ಈ ಕಾಯ್ದೆಯ ಪ್ರಮುಖ ಉದ್ದೇಶ ಹೊಸ ಮತ್ತು ಗುಣಮಟ್ಟದ ಸಸ್ಯ ತಳಿಗಳ ಅಭಿವೃದ್ಧಿಯನ್ನು ಉತ್ತೇಜಿಸುವುದರ ಜೊತೆಗೆ, ತಳಿ ಅಭಿವೃದ್ಧಿಯಲ್ಲಿ ರೈತರು ಮತ್ತು ವಿಜ್ಞಾನಿಗಳ ಕೊಡುಗೆಯನ್ನು ಗುರುತಿಸಿ ಅವರಿಗೆ ಕಾನೂನುಬದ್ಧ ರಕ್ಷಣೆ ಒದಗಿಸುವುದಾಗಿದೆ. ಇದರಿಂದ ಕೃಷಿ ಸಂಶೋಧನೆಗೆ ಉತ್ತೇಜನ ದೊರೆಯುವುದಲ್ಲದೆ, ಸಾರ್ವಜನಿಕ ಮತ್ತು ಖಾಸಗಿ ವಲಯಗಳಲ್ಲಿ ಹೂಡಿಕೆ ಹೆಚ್ಚಲು ಸಹಕಾರಿಯಾಗುತ್ತದೆ.

ಕಾಯ್ದೆಯ ಅನುಷ್ಠಾನಕ್ಕಾಗಿ ಭಾರತ ಸರ್ಕಾರವು 2005ರ ನವೆಂಬರ್ 11ರಂದು ಸಸ್ಯ ತಳಿ ಸಂರಕ್ಷಣೆ ಮತ್ತು ರೈತರ ಹಕ್ಕುಗಳ ಪ್ರಾಧಿಕಾರವನ್ನು ಸ್ಥಾಪಿಸಿತು. ಈ ಪ್ರಾಧಿಕಾರವು ತಳಿ ನೋಂದಣಿ, ರೈತರ ಹಕ್ಕುಗಳ ಸಂರಕ್ಷಣೆ ಹಾಗೂ ಸಂಬಂಧಿತ ಚಟುವಟಿಕೆಗಳನ್ನು ನಿರ್ವಹಿಸುತ್ತದೆ.

ತಳಿ ನೋಂದಣಿ ಮತ್ತು ಅದರ ಮಹತ್ವ

ಒಂದು ಹೊಸ ತಳಿಯನ್ನು ನೋಂದಣಿ ಮಾಡಲು ಅದು ಭಿನ್ನತೆ (Distinctness), ಏಕರೂಪತೆ (Uniformity) ಮತ್ತು ದೃಢತೆ (Stability) ಎಂಬ DUS ಪರೀಕ್ಷೆಗಳನ್ನು ಯಶಸ್ವಿಯಾಗಿ ಪೂರೈಸಿರಬೇಕು. ನೋಂದಣಿ ಬಳಿಕ ತಳಿವರ್ಧಕರಿಗೆ ಆ ತಳಿಯ ಬೀಜ ಉತ್ಪಾದನೆ, ಮಾರಾಟ, ವಿತರಣೆ, ರಫ್ತು ಮತ್ತು ಆಮದು ಮಾಡುವ ಹಕ್ಕು ದೊರೆಯುತ್ತದೆ.

ಕಾಯ್ದೆಯಡಿ ದೊರೆಯುವ ಪ್ರಮುಖ ಹಕ್ಕುಗಳು

ತಳಿವರ್ಧಕರ ಹಕ್ಕುಗಳು: ಹೊಸ ತಳಿಯನ್ನು ಅಭಿವೃದ್ಧಿಪಡಿಸಿದ ವ್ಯಕ್ತಿ ಅಥವಾ ಸಂಸ್ಥೆಗೆ ಅದರ ಮೇಲಿನ ಕಾನೂನುಬದ್ಧ ಮಾಲೀಕತ್ವ ನೀಡಲಾಗುತ್ತದೆ.

ಸಂಶೋಧಕರ ಹಕ್ಕುಗಳು: ಸಂಶೋಧನಾ ಉದ್ದೇಶಕ್ಕಾಗಿ ನೋಂದಾಯಿತ ತಳಿಗಳನ್ನು ಬಳಸಲು ಅವಕಾಶ ನೀಡಲಾಗಿದೆ.

ರೈತರ ಹಕ್ಕುಗಳು: ರೈತರು ತಮ್ಮ ಸಾಂಪ್ರದಾಯಿಕ ತಳಿಗಳನ್ನು ಸಂರಕ್ಷಿಸಲು, ನೋಂದಣಿ ಮಾಡಿಸಲು ಹಾಗೂ ತಳಿ ಅಭಿವೃದ್ಧಿಯಲ್ಲಿ ತಮ್ಮ ಕೊಡುಗೆಗೆ ಮಾನ್ಯತೆ ಪಡೆಯಲು ಅರ್ಹರಾಗಿರುತ್ತಾರೆ.

ರೈತರ 9 ಹಕ್ಕುಗಳು
  1. ಬಿತ್ತನೆ ಬೀಜದ ಮೇಲಿರುವ ರೈತರ ಹಕ್ಕುಗಳು
  2. ಸಾಂಪ್ರದಾಯಿಕ ತಳಿಗಳನ್ನು ನೋಂದಣಿ ಮಾಡಲು ರೈತರಿಗೆ ಇರುವ ಹಕ್ಕುಗಳು
  3. ರೈತರ ಕೊಡುಗೆಗಳನ್ನು ಗುರುತಿಸುವ, ಅದನ್ನು ಪುರಸ್ಕರಿಸುವ ವಿಷಯಗಳ ಮೇಲೆ ರೈತರಿಗೆ ಇರುವ ಹಕ್ಕುಗಳು
  4. ನೋಂದಣಿ ಮಾಡಿಸಿದ ರೈತರ ತಳಿಯಿಂದ ಬಂದ ಲಾಭವನ್ನು ಹಂಚಿಕೊಳ್ಳುವ ಹಕ್ಕುಗಳು
  5. ನೋಂದಣಿ ಮಾಡಿದ ತಳಿ ಬೀಜ ಉಪಯೋಗಿಸಿ ಬೆಳೆದ ಬೆಳೆಯಿಂದ ಆದ ನಷ್ಟಕ್ಕೆ ಪರಿಹಾರ ಪಡೆಯಲು ರೈತರಿಗಿರುವ ಹಕ್ಕುಗಳು
  6. ಸಾಂಪ್ರದಾಯಿಕ ತಳಿಗಳನ್ನು ಉಪಯೋಗಿಸುವ ಬಗ್ಗೆ ಮಾಹಿತಿ ನೀಡದೆ ಅವುಗಳನ್ನು ತಳಿ ಅಭಿವೃದ್ಧಿಯಲ್ಲಿ ಉಪಯೋಗಿಸಿ, ಲಾಭ ಪಡೆದಿದ್ದರೆ ಅದರ ವಿರುದ್ಧ ಪರಿಹಾರ ಪಡೆಯುವ ರೈತರ ಹಕ್ಕುಗಳು
  7. ನೋಂದಣಿ ಮಾಡಿದ ತಳಿಗಳ ಬಿತ್ತನೆ ಬೀಜದ ಮೇಲೆ ಇರುವ ರೈತರ ಹಕ್ಕುಗಳು
  8. ಉಚಿತ ಉಚಿತ ಸೇವೆ ಪಡೆಯಲು ರೈತರಿಗಿರುವ ಹಕ್ಕುಗಳು
  9. ಮುಗ್ಧತೆಯಿಂದ ಮಾಡಿದ ತಪ್ಪಿಗೆ ರಕ್ಷಣೆ ಪಡೆಯುವ ರೈತರ ಹಕ್ಕುಗಳು

ಸಸ್ಯ ತಳಿ ಮತ್ತು ರೈತರ ಹಕ್ಕುಗಳ ರಕ್ಷಣೆ ಕಾಯ್ದೆ ಅನ್ವಯ, ತಳಿ ನೋಂದಣಿ ಒಂದು ಕಾನೂನು ಪ್ರಕ್ರಿಯೆ. ತಳಿ ನೋಂದಣಿ ಕ್ರಿಯೆ ನೋಂದಣಿದಾರನಿಗೆ, ತಳಿಯ ಮೇಲೆ ಕಾನೂನು ರೀತ್ಯ ಮಾಲೀಕತ್ವವನ್ನು ನೀಡುತ್ತದೆ. ಈ ಹಕ್ಕು ಆನುವಂಶಿಕವಾಗಿ ವರ್ಗಾವಣೆಯಾಗಬಹುದು. ಇತರರಿಗೆ ಒಪ್ಪಂದದ ಮೇಲೆ ವರ್ಗಾವಣೆ ಅಥವಾ ಮಾರಾಟ ಮಾಡಬಹುದು.

ರೈತರಿಗೆ ದೊರೆಯುವ ವಿಶೇಷ ಸೌಲಭ್ಯಗಳು

ಈ ಕಾಯ್ದೆಯಡಿ ರೈತರಿಗೆ ಹಲವು ವಿಶೇಷ ಹಕ್ಕುಗಳನ್ನು ನೀಡಲಾಗಿದೆ. ಸಾಂಪ್ರದಾಯಿಕ ತಳಿಗಳ ನೋಂದಣಿ, ಲಾಭ ಹಂಚಿಕೆ, ತಳಿ ಬಳಕೆಯಿಂದ ಉಂಟಾಗುವ ನಷ್ಟಕ್ಕೆ ಪರಿಹಾರ, ಉಚಿತ ಸೇವೆಗಳ ಸೌಲಭ್ಯ ಹಾಗೂ ಮುಗ್ಧತೆಯಿಂದ ಮಾಡಿದ ತಪ್ಪುಗಳಿಗೆ ಕಾನೂನು ರಕ್ಷಣೆ ಸೇರಿದಂತೆ ಒಂಬತ್ತು ಪ್ರಮುಖ ಹಕ್ಕುಗಳನ್ನು ಒದಗಿಸಲಾಗಿದೆ.

ಪ್ರಾಧಿಕಾರದ ಪ್ರಮುಖ ಕಾರ್ಯಗಳು

ಪ್ರಾಧಿಕಾರವು Plant Variety Journal of India ಪತ್ರಿಕೆಯನ್ನು ಪ್ರಕಟಿಸುವುದರ ಜೊತೆಗೆ, ವಿವಿಧ ಬೆಳೆಗಳ DUS ಮಾರ್ಗಸೂಚಿಗಳನ್ನು ಹೊರತರುತ್ತದೆ. ಅಲ್ಲದೆ ರೈತರು, ಕೃಷಿ ವಿಜ್ಞಾನಿಗಳು ಮತ್ತು ಕೃಷಿ ಅಧಿಕಾರಿಗಳಿಗೆ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸಿ ಕಾಯ್ದೆಯ ಕುರಿತು ಅರಿವು ಮೂಡಿಸುತ್ತಿದೆ. ಇದರೊಂದಿಗೆ ರಾಷ್ಟ್ರೀಯ ಸಸ್ಯ ವಂಶವಾಹಿ ನಿಧಿ (National Gene Fund) ಸ್ಥಾಪಿಸಿ ಜೀವ ವೈವಿಧ್ಯತೆ ಸಂರಕ್ಷಣೆಗೆ ಸಹಕಾರ ನೀಡುತ್ತಿದೆ.

ಸಾರಾಂಶ

ಸಸ್ಯ ತಳಿ ಸಂರಕ್ಷಣೆ ಮತ್ತು ರೈತರ ಹಕ್ಕುಗಳ ಕಾಯ್ದೆ ಕೃಷಿ ಕ್ಷೇತ್ರದಲ್ಲಿ ನವೀನತೆ, ಸಂಶೋಧನೆ ಮತ್ತು ರೈತರ ಹಿತಾಸಕ್ತಿಯನ್ನು ಸಮಾನವಾಗಿ ರಕ್ಷಿಸುವ ಮಹತ್ವದ ಕಾನೂನು ವ್ಯವಸ್ಥೆಯಾಗಿದೆ. ಇದು ರೈತರ ಸಾಂಪ್ರದಾಯಿಕ ಜ್ಞಾನಕ್ಕೆ ಮಾನ್ಯತೆ ನೀಡುವುದರ ಜೊತೆಗೆ, ಉತ್ತಮ ತಳಿಗಳ ಅಭಿವೃದ್ಧಿಗೆ ಉತ್ತೇಜನ ನೀಡುವ ಮೂಲಕ ದೇಶದ ಕೃಷಿ ಅಭಿವೃದ್ಧಿಗೆ ಬಲ ತುಂಬುತ್ತಿದೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:

ಪ್ರಧಾನ ಕಚೇರಿ: ಡಾ. ತ್ರಿಲೋಚನ್ ಮೊಹಾಪಾತ್ರ, ಅಧ್ಯಕ್ಷರು

ವಿಳಾಸ: ಸಸ್ಯ ತಳಿಗಳ ರಕ್ಷಣೆ ಮತ್ತು ರೈತರ ಹಕ್ಕುಗಳ ಪ್ರಾಧಿಕಾರ, ಭಾರತ ಸರ್ಕಾರ, ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯ, ಕೃಷಿ ಮತ್ತು ಕೃಷಿ ಸಂಶೋಧನಾ ಇಲಾಖೆ, ಸಸ್ಯ ಪ್ರಭೇದಗಳ ಭವನ, DPS ಮಾರ್ಗ, NASC ಸಂಕೀರ್ಣದ ಹತ್ತಿರ, ತೋಡಾಪುರ ಗ್ರಾಮದ ಎದುರು,

ನವದೆಹಲಿ-110012, ದೂರವಾಣಿ ಸಂಖ್ಯೆ: +91-11-25848127, ಫ್ಯಾಕ್ಸ್ :+91-11-25840478, ಇಮೇಲ್ ಅಧ್ಯಕ್ಷರು- ppvfra@nic.in,

ವೆಬ್‌ಸೈಟ್ https://plantauthority.gov.in.

Facebook
WhatsApp
Twitter
LinkedIn
Government of Karnataka