ಅಡಿಕೆ ಬೆಳೆಯು ಮುಖ್ಯವಾಗಿ ಮಲೆನಾಡು, ಕರಾವಳಿ ಹಾಗೂ ಮೈದಾನ ಪ್ರದೇಶಗಳ ಪ್ರಮುಖ ವಾಣಿಜ್ಯ ಬೆಳೆಯಾಗಿದ್ದು, ಈ ಭಾಗದ ರೈತರ ಜೀವನಾಡಿಯಾಗಿದೆ. ಅಡಿಕೆಗೆ ದೊರೆಯುತ್ತಿರುವ ಹೆಚ್ಚಿನ ಮೌಲ್ಯ ಮತ್ತು ಉತ್ತಮ ಮಾರುಕಟ್ಟೆ ವ್ಯವಸ್ಥೆಯಿಂದಾಗಿ ಹೆಚ್ಚು ಹೆಚ್ಚು ರೈತರು ಅಡಿಕೆ ಕೃಷಿಯತ್ತ ಒಲವು ತೋರಿಸುತ್ತಿದ್ದಾರೆ.
ಪ್ರಸ್ತುತ ಭಾರತದಲ್ಲಿ ಸುಮಾರು 7.30 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಅಡಿಕೆ ಬೆಳೆಯಲಾಗುತ್ತಿದ್ದು, ವರ್ಷಕ್ಕೆ 9.02 ಲಕ್ಷ ಟನ್ ಉತ್ಪಾದನೆ ಆಗುತ್ತಿದೆ. ಭಾರತದಲ್ಲಿ ಅತೀ ಹೆಚ್ಚು ಅಡಿಕೆಯನ್ನು ಕರ್ನಾಟಕ ರಾಜ್ಯದಲ್ಲಿ (ಶೇ. 65) ಬೆಳೆಯಲಾಗುತ್ತಿದ್ದು, ನಂತರದ ಸ್ಥಾನದಲ್ಲಿ ಕೇರಳ ಮತ್ತು ಅಸ್ಸಾಂ ರಾಜ್ಯಗಳಿವೆ.
ಆದರೆ, ಅಡಿಕೆ ಬೆಳೆಯು ಹಲವಾರು ರೋಗಗಳಿಗೆ ತುತ್ತಾಗುತ್ತಿದೆ. ಹಿಂದೆ ಕಡಿಮೆ ಪ್ರಮಾಣದಲ್ಲಿ ಕಂಡುಬಂದಿದ್ದ ಕೆಲವು ರೋಗಗಳು ಇತ್ತೀಚಿನ ವರ್ಷಗಳಲ್ಲಿ ವಾತಾವರಣದ ವ್ಯತ್ಯಾಸಗಳಿಂದಾಗಿ ವೇಗವಾಗಿ ಹರಡಿ ಹೆಚ್ಚಿನ ಹಾನಿಯನ್ನು ಉಂಟುಮಾಡುತ್ತಿವೆ. ಅವುಗಳಲ್ಲಿ ಎಲೆ ಚುಕ್ಕೆ ರೋಗ ಪ್ರಮುಖವಾಗಿದ್ದು, ವಿಶೇಷವಾಗಿ ಮಲೆನಾಡು ಪ್ರದೇಶದಲ್ಲಿ ವ್ಯಾಪಕವಾಗಿ ಕಾಣಿಸಿಕೊಳ್ಳುತ್ತಿದೆ.
ಈ ರೋಗದಿಂದ ಇಳುವರಿ ಕುಂಠಿತವಾಗುತ್ತದೆ. ಆದರೆ ಸರಿಯಾದ ಸಮಯದಲ್ಲಿ ಸಮರ್ಪಕ ನಿರ್ವಹಣಾ ಕ್ರಮಗಳನ್ನು ಅನುಸರಿಸಿದರೆ, ರೋಗದ ತೀವ್ರತೆ ಮತ್ತು ಹರಡುವಿಕೆಯನ್ನು ನಿಯಂತ್ರಿಸಬಹುದು.
ರೋಗಕ್ಕೆ ಪೂರಕವಾದ ಅಂಶಗಳು
- ಶಿಲೀಂಧ್ರವು ರೋಗಗ್ರಸ್ತ ಗರಿಗಳಲ್ಲಿ ವಾಸಿಸುತ್ತದೆ.
- ಮಳೆಹನಿಗಳ ಚಿಮ್ಮುವಿಕೆಯಿಂದ ಶಿಲೀಂಧ್ರ ಕಣಗಳು ಗಾಳಿಯಲ್ಲಿ ಹರಡಿ ಹೊಸ ಗರಿಗಳನ್ನು ಸೋಂಕುಮಾಡುತ್ತವೆ.
- ತೇವಾಂಶಯುಕ್ತ ವಾತಾವರಣ
- ಕಡಿಮೆ ಉಷ್ಣಾಂಶ (18°–24°C)
- ಹೆಚ್ಚಿನ ಆರ್ದ್ರತೆ (85% ಕ್ಕಿಂತ ಹೆಚ್ಚು)
ರೋಗವು ವರ್ಷಪೂರ್ತಿ ಕಂಡುಬಂದರೂ, ಮಾರ್ಚ್‌ನಿಂದ ಸೆಪ್ಟೆಂಬರ್ ವರೆಗೆ ಹೆಚ್ಚು ತೀವ್ರವಾಗಿರುತ್ತದೆ.
ರೋಗದ ಲಕ್ಷಣಗಳು
ರೋಗದ ಆರಂಭದಲ್ಲಿ ಎಲೆಗಳ ಮೇಲೆ ಹಳದಿ ಅಥವಾ ಕಪ್ಪು ಬಣ್ಣದ ಸಣ್ಣ ಚುಕ್ಕೆಗಳು ಕಾಣಿಸಿಕೊಳ್ಳುತ್ತವೆ. ಕೆಲವೊಮ್ಮೆ ಬೂದಿ ಮಿಶ್ರಿತ ಬಿಳಿ ಚುಕ್ಕೆಗಳು ಕಂಡುಬಂದು, ಅವುಗಳ ಅಂಚು ಕಂದು ಅಥವಾ ಕಪ್ಪು ಬಣ್ಣದಲ್ಲಿರುತ್ತದೆ. ಈ ಚುಕ್ಕೆಗಳು ಮೊದಲಿಗೆ ಕೆಳಗಿನ ಎಲೆಗಳಲ್ಲಿ ಕಾಣಿಸಿಕೊಂಡು, ನಂತರ ಕ್ರಮೇಣ ಮೇಲಿನ ಎಲೆಗಳಿಗೆ ಹರಡುತ್ತವೆ.
ಚುಕ್ಕೆಗಳು ಒಂದಕ್ಕೊಂದು ಸೇರಿಕೊಂಡು ಸಂಪೂರ್ಣ ಎಲೆಯನ್ನು ಆವರಿಸಿದಾಗ ಎಲೆಗಳು ಒಣಗಲು ಪ್ರಾರಂಭಿಸುತ್ತವೆ. ರೋಗ ಉಲ್ಬಣಗೊಂಡಲ್ಲಿ ಒಣಗಿದ ಗರಿಗಳು ಕಾಂಡಕ್ಕೆ ಜೋತುಬಿದ್ದು ಮರದ ಶಕ್ತಿಯನ್ನು ಕುಗ್ಗಿಸಿ ಇಳುವರಿಯನ್ನು ಕಡಿಮೆ ಮಾಡುತ್ತದೆ.
ನಿರ್ವಹಣಾ ಕ್ರಮಗಳು
ಎಲೆ ಚುಕ್ಕೆ ರೋಗವನ್ನು ನಿಯಂತ್ರಿಸಲು ಸಮಗ್ರ ನಿರ್ವಹಣೆ ಅಗತ್ಯವಾಗಿದೆ. ಮೊದಲನೆಯದಾಗಿ, ರೋಗಬಾಧಿತ ಮತ್ತು ಒಣಗಿದ ಗರಿಗಳನ್ನು ಕತ್ತರಿಸಿ ತೋಟದಿಂದ ದೂರ ನಾಶಪಡಿಸಬೇಕು. ತೋಟದಲ್ಲಿ ಸೂರ್ಯಕಿರಣಗಳು ಚೆನ್ನಾಗಿ ಬೀಳುವಂತೆ ಅಂತರ ಬೆಳೆಗಳ ಹೆಚ್ಚುವರಿ ರೆಂಬೆಗಳನ್ನು ಕತ್ತರಿಸುವುದು ಸಹಕಾರಿ.
ಮರಗಳ ಆರೋಗ್ಯ ಕಾಪಾಡಲು ಶಿಫಾರಸು ಮಾಡಿದ ಪ್ರಮಾಣದಲ್ಲಿ ಪೋಷಕಾಂಶಗಳನ್ನು ನೀಡುವುದು ಮುಖ್ಯ. ಪ್ರತಿ ಮರಕ್ಕೆ 50 ಗ್ರಾಂ ಸಾರಜನಕ, 20 ಗ್ರಾಂ ರಂಜಕ ಮತ್ತು 70 ಗ್ರಾಂ ಪೊಟಾಶ್ ಅನ್ನು ವರ್ಷಕ್ಕೆ ಎರಡು ಬಾರಿ (ಮೇ–ಜೂನ್ ಮತ್ತು ಸೆಪ್ಟೆಂಬರ್–ಅಕ್ಟೋಬರ್) ಕೊಟ್ಟಿಗೆ ಗೊಬ್ಬರದೊಂದಿಗೆ ನೀಡಬೇಕು.
ರೋಗದ ಪ್ರಾರಂಭಿಕ ಲಕ್ಷಣಗಳು ಕಂಡುಬಂದಾಗ ಮ್ಯಾಂಕೋಜೆಬ್ (2.5 ಗ್ರಾಂ/ಲೀಟರ್) ಅಥವಾ ಸಾಫ್ (2 ಗ್ರಾಂ/ಲೀಟರ್) ಅಂಟು ದ್ರಾವಣದೊಂದಿಗೆ ಸಿಂಪಡಿಸಬಹುದು. ಪರ್ಯಾಯವಾಗಿ 1% ಬೋರ್ಡೋ ಮಿಶ್ರಣ, 0.3% ತಾಮ್ರ ಆಕ್ಸಿಕ್ಲೋರೈಡ್ ಅಥವಾ ಹೆಕ್ಟಾಕೊನಜೋಲ್/ಪ್ರೊಪಿಕೋನಜೋಲ್ (1 ಮಿ.ಲೀ./ಲೀಟರ್) ಬಳಸಬಹುದು. ರೋಗ ಮರುಕಳಿಸಿದಲ್ಲಿ 20–25 ದಿನಗಳ ಅಂತರದಲ್ಲಿ ಸಿಂಪಡಣೆ ಪುನರಾವರ್ತಿಸಬೇಕು. ಅಡಿಕೆ ತೋಟದಲ್ಲಿ ಅಂತರ ಬೆಳೆ ಆಗಿರುವ ಕಾಳುಮೆಣಸಿಗೂ ಸಹ ಸಿಂಪಡಣೆ ಮಾಡುವುದು ಅಗತ್ಯ.
ರೈತರಿಗೆ ಪ್ರಮುಖ ಸೂಚನೆ
ಅಡಿಕೆಯಲ್ಲಿ ಎಲೆ ಚುಕ್ಕೆ ರೋಗವು ಇತ್ತೀಚಿನ ವರ್ಷಗಳಲ್ಲಿ ಹೆಚ್ಚು ತೀವ್ರವಾಗುತ್ತಿದೆ. ಆದರೆ ಸರಿಯಾದ ಸಮಯದಲ್ಲಿ ರೋಗ ಲಕ್ಷಣಗಳನ್ನು ಗುರುತಿಸಿ, ಸಾಂಸ್ಕೃತಿಕ ಹಾಗೂ ರಾಸಾಯನಿಕ ನಿಯಂತ್ರಣ ಕ್ರಮಗಳನ್ನು ಅನುಸರಿಸಿದರೆ, ರೋಗದ ಹರಡುವಿಕೆಯನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಿ ಉತ್ತಮ ಇಳುವರಿ ಪಡೆಯಬಹುದು.








