ಸುಸ್ಥಿರ ಕೃಷಿಗಾಗಿ ‘ಕೃಷಿ ಭಾಗ್ಯ’: ಒಂದು ಯಶೋಗಾಥೆ

Krishi Bhagya sustainable farming success
ಸುಸ್ಥಿರ ಕೃಷಿಗಾಗಿ ‘ಕೃಷಿ ಭಾಗ್ಯ’: ಒಂದು ಯಶೋಗಾಥೆ

ರಾಜ್ಯದ ಕೃಷಿ ಬಹುಪಾಲು ಮಳೆಯ ಮೇಲೆ ಅವಲಂಬಿತವಾಗಿದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಹವಾಮಾನ ಬದಲಾವಣೆಯ ಪರಿಣಾಮವಾಗಿ ವಾರ್ಷಿಕವಾಗಿ ಬೀಳಬೇಕಾದ ಮಳೆಯ ಹಂಚಿಕೆ ಸಮನಾಗಿಲ್ಲ. ಕೆಲವೊಮ್ಮೆ ವರ್ಷದ ಮಳೆಯು ಒಂದೆರಡು ಮಳೆಗಳಲ್ಲಿ ಸುರಿದುಬಿಡುತ್ತದೆ. ಈ ಪರಿಸ್ಥಿತಿಯಲ್ಲಿ ಮಳೆ ನೀರನ್ನು ಸಮರ್ಪಕವಾಗಿ ಸಂಗ್ರಹಿಸುವುದು, ಬೆಳೆಗಳ ಸಂಕಷ್ಟದ ಸಮಯದಲ್ಲಿ ರಕ್ಷಣಾತ್ಮಕ ನೀರಾವರಿ ಒದಗಿಸುವುದು ಹಾಗೂ ಮಳೆಯಾಶ್ರಿತ ಕೃಷಿಯನ್ನು ಸುಸ್ಥಿರ ಕೃಷಿಯನ್ನಾಗಿ ರೂಪಿಸುವುದು ಅತ್ಯಂತ ಮುಖ್ಯವಾಗಿದೆ

ಈ ಹಿನ್ನೆಲೆಯಲ್ಲಿಯೇ ರೈತರ ಜೀವನಮಟ್ಟವನ್ನು ಸುಧಾರಿಸುವುದು ಮತ್ತು ಕೃಷಿ ಉತ್ಪಾದಕತೆಯನ್ನು ಹೆಚ್ಚಿಸುವುದು ಎಂಬ ಉದ್ದೇಶದಿಂದ ಕೃಷಿ ಭಾಗ್ಯ ಯೋಜನೆ ಜಾರಿಯಲ್ಲಿದೆ. ಈ ಯೋಜನೆಯ ಸದುಪಯೋಗವನ್ನು ಪಡೆದುಕೊಂಡು ಸಮಗ್ರ ಕೃಷಿಯತ್ತ ಹೆಜ್ಜೆ ಇಟ್ಟಿರುವ ರೈತರಲ್ಲಿ ಚಿಕ್ಕಮಗಳೂರು ಜಿಲ್ಲೆಯ ಒಬ್ಬ ಮಹಿಳಾ ರೈತೆಯ ಯಶೋಗಾಥೆ ಗಮನಾರ್ಹವಾಗಿದೆ.

ಚಿಕ್ಕಮಗಳೂರು ಜಿಲ್ಲೆಯ ಲಕ್ಕವಳ್ಳಿ ಹೋಬಳಿಯ ಬಿಳೇಕೊಲ್ಲಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಸರಪನಹಳ್ಳಿ ಗ್ರಾಮದ ರೈತೆಯಾದ ಶ್ರೀಮತಿ ಸಿದ್ದಮ್ಮ ಕೋಂ ಗೋವಿಂದೇಗೌಡ ಅವರು ಸುಮಾರು 6.12 ಎಕರೆ ಜಮೀನನ್ನು ಹೊಂದಿದ್ದು, ಮಳೆಯಾಶ್ರಿತ ಕೃಷಿ ಮಾಡುತ್ತಿದ್ದಾರೆ. ತಮ್ಮ ಜಮೀನಿನಲ್ಲಿ ತೆಂಗು, ಅಡಿಕೆ, ಜೋಳ, ರಾಗಿ, ಅವರೆ ಹಾಗೂ ಮೆಕ್ಕೆಜೋಳದಂತಹ ವಿವಿಧ ಬೆಳೆಗಳನ್ನು ಬೆಳೆಯುತ್ತಿದ್ದರು.

Krishi Bhagya success story in sustainable farming

2025–26ನೇ ಸಾಲಿನಲ್ಲಿ ಕೃಷಿ ಭಾಗ್ಯ ಯೋಜನೆಯಡಿ ಪ್ಯಾಕೇಜ್ ಮಾದರಿಯಲ್ಲಿ 12×12×3 ಮೀಟರ್ ಅಳತೆಯ ಕೃಷಿ ಹೊಂಡ ನಿರ್ಮಿಸಿಕೊಂಡು ಮಳೆ ನೀರನ್ನು ಸಂಗ್ರಹಿಸುವ ವ್ಯವಸ್ಥೆ ಮಾಡಿದರು. ಈ ನೀರನ್ನು ವಿವಿಧ ಕೃಷಿ ಪೂರಕ ಚಟುವಟಿಕೆಗಳಿಗೆ ಬಳಸಿಕೊಳ್ಳಲು ಆರಂಭಿಸಿದರು. ವಿಶೇಷವಾಗಿ ಕೃಷಿ ಹೊಂಡದಲ್ಲಿ ಮೀನು ಸಾಕಣೆ ಆರಂಭಿಸುವ ಮೂಲಕ ಹೆಚ್ಚುವರಿ ಆದಾಯದ ಮಾರ್ಗವನ್ನು ಕಂಡುಕೊಂಡಿದ್ದಾರೆ.

ಇದರ ಜೊತೆಗೆ ವಾರಕ್ಕೊಮ್ಮೆ ಕೊಯ್ಲು ನೀಡುವ ಸೊಪ್ಪು ಮತ್ತು ತರಕಾರಿಗಳನ್ನು ಬೆಳೆಯುತ್ತಿದ್ದಾರೆ. ಹಾಗೆಯೇ 50 ನಾಟಿ ಕೋಳಿಗಳ ಸಾಕಣೆ ಮತ್ತು ಮೊಟ್ಟೆ ಉತ್ಪಾದನೆ ಮಾಡುತ್ತಿದ್ದಾರೆ. ಇನ್ನೂ 8 ಹಸುಗಳನ್ನು ಸಾಕುತ್ತಿದ್ದು, ಪ್ರತಿದಿನ ಸರಾಸರಿ 40 ಲೀಟರ್ ಹಾಲು ಉತ್ಪಾದನೆ ಮಾಡುತ್ತಿದ್ದಾರೆ. ಹಸುಗಳಿಗೆ ಬೇಕಾಗುವ ಮೇವು ಬೆಳೆಗಳನ್ನು ತಮ್ಮ ಹೊಲದಲ್ಲೇ ಬೆಳೆಸಿ, ಹಸುಗಳಿಂದ ದೊರೆಯುವ ಸಗಣಿಯಿಂದ ಕಾಂಪೋಸ್ಟ್ ಗೊಬ್ಬರವನ್ನು ತಯಾರಿಸಿ ತಮ್ಮ ಜಮೀನಿನಲ್ಲಿ ಬಳಸುತ್ತಿದ್ದಾರೆ. ಇದರಿಂದ ಹೊರಗಿನಿಂದ ಗೊಬ್ಬರವನ್ನು ಖರೀದಿಸುವ ಅವಶ್ಯಕತೆ ಕಡಿಮೆಯಾಗಿ ಕೃಷಿ ವೆಚ್ಚವನ್ನು ತಗ್ಗಿಸಿಕೊಳ್ಳಲು ಸಾಧ್ಯವಾಗಿದೆ.

Krishi Bhagya project in farming

ಪ್ರಸ್ತುತ ಅವರು ಸುಮಾರು 80 ಕುರಿಗಳನ್ನು ಸಾಕಲು ಶೆಡ್ ನಿರ್ಮಿಸಿಕೊಂಡಿದ್ದು, ಕುರಿಮರಿಗಳನ್ನು ಖರೀದಿಸುವ ಯೋಜನೆಯಲ್ಲಿದ್ದಾರೆ. ಕೃಷಿ, ಪಶುಸಂಗೋಪನೆ ಮತ್ತು ಪೂರಕ ಚಟುವಟಿಕೆಗಳನ್ನು ಸಮನ್ವಯಗೊಳಿಸಿ ಸಮಗ್ರ ಕೃಷಿ ಪದ್ಧತಿಯನ್ನು ಅನುಸರಿಸುವ ಮೂಲಕ ತಮ್ಮ ಕುಟುಂಬದ ಆರೋಗ್ಯ ಮತ್ತು ಆರ್ಥಿಕ ಸ್ಥಿರತೆಯನ್ನು ಬಲಪಡಿಸುತ್ತಿದ್ದಾರೆ.

ಈ ಎಲ್ಲ ಸಾಧನೆಗಳಿಗೆ ಕೃಷಿ ಭಾಗ್ಯ ಯೋಜನೆಯೇ ಪ್ರಮುಖ ಕಾರಣ ಎಂದು ಶ್ರೀಮತಿ ಸಿದ್ದಮ್ಮ ಅವರು ಹೆಮ್ಮೆಯಿಂದ ಹೇಳುತ್ತಾರೆ. ಅವರ ಈ ಪ್ರಯತ್ನವು ಮಳೆಯಾಶ್ರಿತ ಕೃಷಿಯಲ್ಲಿಯೂ ಸುಸ್ಥಿರ ಹಾಗೂ ಲಾಭದಾಯಕ ಕೃಷಿ ಸಾಧ್ಯವೆಂಬುದಕ್ಕೆ ಉತ್ತಮ ಉದಾಹರಣೆಯಾಗಿದೆ.

Facebook
WhatsApp
Twitter
LinkedIn
Government of Karnataka