ಸಮಗ್ರ ಕೃಷಿ ಮತ್ತು ಮೌಲ್ಯವರ್ಧನೆಯ ಸಿರಿಧಾನ್ಯಗಳ ಸಿರಿವಂತೆ: ಶ್ರೀಮತಿ ಸೂರ್ಯ

Mrs. Surya showcasing integrated farming and millet value-added products
ಸಮಗ್ರ ಕೃಷಿ ಮತ್ತು ಮೌಲ್ಯವರ್ಧನೆಯ ಸಿರಿಧಾನ್ಯಗಳ ಸಿರಿವಂತೆ: ಶ್ರೀಮತಿ ಸೂರ್ಯ

ಕೃಷಿಯಲ್ಲಿ ಎಷ್ಟು ಮಾಡಿದರೂ ಸಾಲದು, ಪ್ರತಿದಿನವೂ ಹೊಸದಾಗಿ ಕಲಿಯಲು ಅವಕಾಶವಿರುತ್ತದೆ” ಎಂಬ ನಂಬಿಕೆಯನ್ನು ಜೀವನದಲ್ಲಿ ಅಳವಡಿಸಿಕೊಂಡು ಯಶಸ್ಸಿನ ಹಾದಿಯಲ್ಲಿ ಸಾಗುತ್ತಿರುವವರು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ವಾಣಿವಿಲಾಸಪುರ ಗ್ರಾಮದ ಶ್ರೀಮತಿ ಸೂರ್ಯ ಶಂಕರ್‌ ಸೂರ್ಯ. ಕೃಷಿ ಉತ್ಪನ್ನಗಳಿಗೆ ಮೌಲ್ಯವರ್ಧನೆ ಮಾಡಿ ಉತ್ತಮ ಆದಾಯ ಗಳಿಸುವ ಮೂಲಕ ಅವರು ಇತರ ರೈತ ಮಹಿಳೆಯರಿಗೆ ಮಾದರಿಯಾಗಿದ್ದಾರೆ.

ನಗರ ಜೀವನದಲ್ಲಿ ಆರೋಗ್ಯ ಹಾಳುಮಾಡಿಕೊಳ್ಳುವುದಕ್ಕಿಂತ ನೈಸರ್ಗಿಕ ವಾತಾವರಣದಲ್ಲಿ ಸಾವಯವ ಕೃಷಿ ಮಾಡುವುದು ದೇಹಕ್ಕೂ ಮನಸ್ಸಿಗೂ ಆರೋಗ್ಯಕರ ಎನ್ನುವುದು ಅವರ ಅಭಿಪ್ರಾಯ. ಕೃಷಿಯಿಂದ ಕುಟುಂಬದ ಎಲ್ಲ ಸದಸ್ಯರೂ ಉತ್ತಮ ಆದಾಯ ಪಡೆದು ನೆಮ್ಮದಿಯ ಜೀವನ ನಡೆಸಬಹುದು. ಕೃಷಿಯಲ್ಲಿಯೇ ಮಕ್ಕಳಿಗೆ ಉತ್ತಮ ಭವಿಷ್ಯ ರೂಪಿಸಬಹುದು ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸುತ್ತಾರೆ.

ಮೂಲತಃ ಕೃಷಿಕ ಕುಟುಂಬದವರಾದ ಶ್ರೀಮತಿ ಸೂರ್ಯ ಅವರು ಕಳೆದ 20 ವರ್ಷಗಳಿಂದ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಪತಿ ಶಂಕರ್‌, ಅತ್ತೆ ಹಾಗೂ ಇಬ್ಬರು ಮಕ್ಕಳು ಇವರ ಕೃಷಿ ಚಟುವಟಿಕೆಗಳಿಗೆ ಬೆಂಬಲವಾಗಿದ್ದಾರೆ. 10 ಎಕರೆ ಜಮೀನಿನಲ್ಲಿ ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಂಡು, ವೈವಿಧ್ಯಮಯ ಬೆಳೆಗಳನ್ನು ಬೆಳೆಸಿ ಸ್ವಾವಲಂಬಿ ಬದುಕು ಕಟ್ಟಿಕೊಂಡಿದ್ದಾರೆ.

ತಮ್ಮ ಜಮೀನಿನಲ್ಲಿ ಅಡಿಕೆ, 400 ತೆಂಗಿನ ಮರಗಳ ಜೊತೆಗೆ ರಾಗಿ, ಹುರಳಿ, ಅಲಸಂದೆ ಮತ್ತು ಜೋಳ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ತೆಂಗು ಮತ್ತು ಅಡಿಕೆ ತೋಟಗಳಲ್ಲಿ ಬಾಳೆ, ನಿಂಬೆ, ಸೀಬೆ, ಪಪ್ಪಾಯಿ, ಮಾವು, ಡ್ರ್ಯಾಗನ್ ಫ್ರೂಟ್, ನುಗ್ಗೆ ಸೇರಿದಂತೆ 26ಕ್ಕೂ ಹೆಚ್ಚು ವಿವಿಧ ಬೆಳೆಗಳನ್ನು ಬೆಳೆಸುತ್ತಿದ್ದಾರೆ. ಜಮೀನಿನ ಸುತ್ತ ತೇಗ, ಬೇವು, ಹೊಂಗೆ ಮತ್ತು ಅಗಸೆ ಮರಗಳನ್ನು ಬೆಳೆಸಿ ಅರಣ್ಯ ಕೃಷಿಯಲ್ಲಿಯೂ ತೊಡಗಿಸಿಕೊಂಡಿದ್ದಾರೆ. ಜೊತೆಗೆ ಬೆಂಡೆಕಾಯಿ, ಬದನೆಕಾಯಿ, ಚವಳಿ, ಮೆಂತೆ, ಪಾಲಕ್ ಮತ್ತು ಕೊತ್ತಂಬರಿ ಮುಂತಾದ ತರಕಾರಿ ಹಾಗೂ ಸೊಪ್ಪುಗಳನ್ನು ಬೆಳೆಸಿ ಉತ್ತಮ ಆದಾಯ ಗಳಿಸುತ್ತಿದ್ದಾರೆ.

ಸಮಗ್ರ ಕೃಷಿಯ ಭಾಗವಾಗಿ 3 ನಾಟಿ ಹಸುಗಳು, 10 ಕುರಿಗಳು ಮತ್ತು 30 ನಾಟಿ ಕೋಳಿಗಳನ್ನು ಸಾಕುತ್ತಿದ್ದಾರೆ. ಹಾಲು, ಮೊಟ್ಟೆ ಹಾಗೂ ಕೋಳಿ ಮಾರಾಟದಿಂದ ನಿರಂತರ ಆದಾಯ ಪಡೆಯುತ್ತಿದ್ದಾರೆ. ಜಾನುವಾರುಗಳಿಂದ ದೊರೆಯುವ ಸಗಣಿ ಮತ್ತು ಗಂಜಲವನ್ನು ಕಾಂಪೋಸ್ಟ್ ಗೊಬ್ಬರವಾಗಿ ಪರಿವರ್ತಿಸಿ ಜಮೀನಿಗೆ ಬಳಸುತ್ತಿದ್ದಾರೆ. ತೆಂಗು ಹಾಗೂ ಅಡಿಕೆ ತ್ಯಾಜ್ಯಗಳನ್ನು ಸಹ ಗೊಬ್ಬರವಾಗಿ ಬಳಸಿ ಸಾವಯವ ಕೃಷಿಗೆ ಒತ್ತು ನೀಡಿದ್ದಾರೆ. ಹನಿ ನೀರಾವರಿ, ಕೃಷಿಹೊಂಡ ಮತ್ತು ಇಂಗುಗುಂಡಿಗಳ ಮೂಲಕ ನೀರು ಮತ್ತು ಮಣ್ಣಿನ ಸಂರಕ್ಷಣೆಯನ್ನೂ ಮಾಡುತ್ತಿದ್ದಾರೆ.

ಮೌಲ್ಯವರ್ಧನೆಯಲ್ಲಿ ಶ್ರೀಮತಿ ಸೂರ್ಯ ಅವರು ಅಪಾರ ಸಾಧನೆ ಮಾಡಿದ್ದಾರೆ. “ಆಪ್ತ” ಬ್ರಾಂಡ್‌ನಡಿ ಸಿರಿಧಾನ್ಯ ಮಾಲ್ಟ್, ರಾಗಿ ಮೊಳಕೆ, ರಸಂ ಪೌಡರ್, ಕರಿಬೇವು ಪೌಡರ್, ನುಗ್ಗೆ ಸೊಪ್ಪಿನ ಪೌಡರ್, ಲಾಡು, ಕುಕೀಸ್, ಚಕ್ಕಲಿ, ನಿಪ್ಪಟ್ಟು, ಹೆಲ್ತ್ ಮಿಕ್ಸ್ ಸೇರಿದಂತೆ ಹಲವಾರು ಆರೋಗ್ಯಕರ ಉತ್ಪನ್ನಗಳನ್ನು ತಯಾರಿಸಿ ಮಾರುಕಟ್ಟೆಗೆ ಪರಿಚಯಿಸಿದ್ದಾರೆ.

ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆಯಡಿ ಶೇಂಗಾವನ್ನು ಆಯ್ಕೆ ಮಾಡಲಾಗಿದ್ದು, ಅದರ ಮೂಲಕ ಶೇಂಗಾ ಚಿಕ್ಕಿ, ಪೀನಟ್ ಬಟರ್, ಶೇಂಗಾ ಮಸಾಲ ಮುಂತಾದ ಮೌಲ್ಯವರ್ಧಿತ ಉತ್ಪನ್ನಗಳನ್ನು ತಯಾರಿಸಿ ಯಶಸ್ಸು ಕಂಡಿದ್ದಾರೆ. ಕೃಷಿ ವಿಜ್ಞಾನಿಗಳ ಮಾರ್ಗದರ್ಶನ ಹಾಗೂ ಸರ್ಕಾರದ ಯೋಜನೆಗಳ ನೆರವಿನಿಂದ ಕೃಷಿಯಲ್ಲಿ ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತಾ ಇಂದು ಯಶಸ್ವಿ ರೈತ ಮಹಿಳೆಯಾಗಿ ಹೊರಹೊಮ್ಮಿದ್ದಾರೆ.

Facebook
WhatsApp
Twitter
LinkedIn
Government of Karnataka