ತೆಂಗಿನ ಬೆಳೆಯ ಕೀಟಗಳು ಹಾಗೂ ಅವುಗಳ ನಿರ್ವಹಣೆ

ತೆಂಗಿನ ಬೆಳೆಯ ಕೀಟಗಳು ಹಾಗೂ ಅವುಗಳ ನಿರ್ವಹಣೆ

ಕಲ್ಪವೃಕ್ಷವೆಂದು ಕರೆಯಲಾಗುವ ತೆಂಗು ಅತ್ಯುಪಯುಕ್ತ ತೋಟಗಾರಿಕಾ ಬೆಳೆಯಾಗಿದ್ದು, ಪ್ರಪಂಚದ ಸುಮಾರು 93 ದೇಶಗಳಲ್ಲಿ ಇದನ್ನು ಬೆಳೆಯಲಾಗುತ್ತಿದೆ. ಭಾರತದ 18 ರಾಜ್ಯಗಳಲ್ಲಿ ತೆಂಗನ್ನು ಬೆಳೆಯಲಾಗುತ್ತಿದ್ದು, ಅದರಲ್ಲಿ ಪ್ರಮುಖವಾಗಿ ದಕ್ಷಿಣ ಭಾರತದ ರಾಜ್ಯಗಳಾದ ಕೇರಳ, ಕರ್ನಾಟಕ, ತಮಿಳುನಾಡು ಮತ್ತು ಆಂಧ್ರಪ್ರದೇಶಗಳಲ್ಲಿ ಹೆಚ್ಚಾಗಿ ಬೆಳೆಯಲಾಗುತ್ತಿದೆ. ತೆಂಗು ಬಹುಪಯೋಗಿ ಬೆಳೆ ಆಗಿದ್ದು, ಇದರಿಂದ ಕಾಯಿ, ಕೊಬ್ಬರಿ, ಪಾನೀಯ ಹಾಗೂ ಎಣ್ಣೆ ಮೊದಲಾದ ಆಹಾರ ಪದಾರ್ಥಗಳನ್ನು ಪಡೆಯಬಹುದು. ಜೊತೆಗೆ ಮರದ ದಿಮ್ಮಿ, ಉರುವಲು ವಸ್ತುಗಳು, ನಾರು ಮತ್ತು ನಾರಿನ ಪುಡಿ ಕೈಗಾರಿಕೆಗಳಿಗೆ ಕಚ್ಚಾ ಪದಾರ್ಥಗಳನ್ನು ಒದಗಿಸುತ್ತದೆ.

ಆದರೆ ಇತರೆ ಬೆಳೆಗಳಂತೆ ತೆಂಗಿಗೂ ಹಲವು ಕೀಟಗಳು ಮತ್ತು ರೋಗಗಳು ಬಾಧಿಸುತ್ತವೆ. ಇವುಗಳಿಂದ ರೈತರಿಗೆ ಆರ್ಥಿಕವಾಗಿ ದೊಡ್ಡ ನಷ್ಟ ಉಂಟಾಗುತ್ತದೆ. ಕೆಲವು ಸಂದರ್ಭಗಳಲ್ಲಿ ಸಂಪೂರ್ಣ ಬೆಳೆಯೇ ನಾಶವಾಗುವ ಸಾಧ್ಯತೆಯೂ ಇದೆ. ಆದ್ದರಿಂದ ತೆಂಗಿಗೆ ತಗುಲುವ ಪ್ರಮುಖ ಕೀಟಗಳನ್ನು ಗುರುತಿಸಿ ಅವುಗಳನ್ನು ಸಮರ್ಪಕವಾಗಿ ನಿರ್ವಹಿಸುವುದು ಅತ್ಯವಶ್ಯಕವಾಗಿದೆ.

ರೈನೋಸಿರಸ್ ದುಂಬಿ

ತೆಂಗನ್ನು ಬೆಳೆಯುವ ಎಲ್ಲಾ ಪ್ರದೇಶಗಳಲ್ಲಿ ಕಂಡುಬರುವ ಸಾಮಾನ್ಯ ಕೀಟಗಳಲ್ಲಿ ರೈನೋಸಿರಸ್ ದುಂಬಿ ಪ್ರಮುಖವಾಗಿದೆ. ಪ್ರೌಢ ದುಂಬಿಗಳು ತೆಂಗಿನ ಗಿಡ ಹಾಗೂ ಮರಗಳ ಸುಳಿಯನ್ನು ಮತ್ತು ಗೊಂಚಲಿನ ಕವಚವನ್ನು ಕೊರೆದು ರಂಧ್ರಗಳನ್ನು ಮಾಡುತ್ತವೆ. ಅಂತಹ ರಂಧ್ರಗಳಲ್ಲಿ ಮರದ ನಾರು ಹೊರಬರುತ್ತಿರುವುದನ್ನು ಕಾಣಬಹುದು. ಹಾನಿಗೊಳಗಾದ ಗರಿಗಳು ಸಮನಾಗಿ ಕತ್ತರಿಸಿದಂತಿರುತ್ತವೆ. ಸಸಿಯ ಹಂತದಲ್ಲಿ ಈ ಕೀಟ ಹಾನಿ ಮಾಡಿದರೆ ಗಿಡದ ಬೆಳವಣಿಗೆಗೆ ತೊಂದರೆ ಉಂಟಾಗುತ್ತದೆ.

ಈ ದುಂಬಿಯ ಮರಿಹುಳುಗಳು ಸಾಮಾನ್ಯವಾಗಿ ಕಾಂಪೋಸ್ಟ್ ಗುಂಡಿಗಳು, ಕೊಟ್ಟಿಗೆ ಗೊಬ್ಬರ ಮತ್ತು ಕೊಳೆಯುತ್ತಿರುವ ತೆಂಗಿನ ಮರದ ದಿಮ್ಮಿಗಳಲ್ಲಿ ಬೆಳೆಯುತ್ತವೆ. ಮರಿಹುಳುಗಳು ಇಂಗ್ಲಿಷ್ “C” ಆಕಾರದಲ್ಲಿದ್ದು, ದುಂಬಿಗಳು ದಪ್ಪ ಹಾಗೂ ಕಪ್ಪು ಬಣ್ಣದಲ್ಲಿರುತ್ತವೆ. ಇದರ ಜೀವನ ಚಕ್ರವು ಸುಮಾರು 6 ತಿಂಗಳಲ್ಲಿ ಪೂರ್ಣಗೊಳ್ಳುತ್ತದೆ.

Coconut palm damage by rhinoceros beetle

ನಿರ್ವಹಣೆ: ಕಾಂಪೋಸ್ಟ್ ಗುಂಡಿಗಳಲ್ಲಿ ಜೈವಿಕ ಶಿಲೀಂಧ್ರವಾದ ಮೆಟಾರೈಜಿಯಂ ಅನಿಸೋಪ್ಟ್ರಿಯೆ ಬಳಸಿ ಮರಿಹುಳುಗಳನ್ನು ನಿಯಂತ್ರಿಸಬಹುದು. ಕಾಂಪೋಸ್ಟ್ ತೆಗೆದುಕೊಳ್ಳುವಾಗ ಮರಿಹುಳುಗಳನ್ನು ಆಯ್ದು ನಾಶ ಮಾಡಬೇಕು. ನಾಟಿ ಕೋಳಿಗಳನ್ನು ಗೊಬ್ಬರದ ರಾಶಿಗಳಲ್ಲಿ ಮೇಯಲು ಬಿಡುವುದರಿಂದ ದುಂಬಿಯ ಮೊಟ್ಟೆಗಳನ್ನು ತಿಂದು ನೈಸರ್ಗಿಕ ನಿಯಂತ್ರಣ ಸಾಧ್ಯವಾಗುತ್ತದೆ. ಮೋಹಕ ಬಲೆಗಳನ್ನು ತೆಂಗಿನ ಮರಗಳಿಂದ ಸ್ವಲ್ಪ ದೂರದಲ್ಲಿ ಹಾಕಿ ಬಳಸಬೇಕು ಹಾಗೂ ಅವುಗಳ ಲ್ಯೂರ್‌ಗಳನ್ನು ಪ್ರತಿ 3-4 ತಿಂಗಳಿಗೊಮ್ಮೆ ಬದಲಾಯಿಸಬೇಕು. ಬೇವಿನ ಬೀಜದ ಪುಡಿ ಅಥವಾ ಬೇವಿನ ಹಿಂಡಿಯನ್ನು ಮರಳಿನೊಂದಿಗೆ ಮಿಶ್ರಣ ಮಾಡಿ ಸುಳಿಯ ಎಲೆಗಳ ಬುಡದಲ್ಲಿ ಹಾಕುವುದು ಸಹ ಸಹಾಯಕವಾಗಿದೆ.

ಕೆಂಪು ಮೂತಿ ದುಂಬಿ

ಕೆಂಪು ಮೂತಿ ದುಂಬಿ ತೆಂಗಿನ ಅತ್ಯಂತ ಅಪಾಯಕಾರಿ ಕೀಟಗಳಲ್ಲಿ ಒಂದಾಗಿದೆ. ಸಾಮಾನ್ಯವಾಗಿ 4 ರಿಂದ 10 ವರ್ಷದ ತೆಂಗಿನ ಮರಗಳಿಗೆ ಹೆಚ್ಚು ಹಾನಿ ಮಾಡುತ್ತದೆ. ಬಾಧಿತ ಮರಗಳ ಕಾಂಡದಲ್ಲಿ ರಂಧ್ರಗಳು ಕಾಣಿಸಿಕೊಂಡು ಅದರಿಂದ ರಸ ಮತ್ತು ನಾರು ಹೊರಬರುತ್ತವೆ. ಹೆಣ್ಣು ದುಂಬಿಗಳು ಗಾಯಗೊಂಡ ಕಾಂಡದ ಭಾಗದಲ್ಲಿ ಮೊಟ್ಟೆ ಇಡುತ್ತವೆ. ಮೊಟ್ಟೆ ಒಡೆದು ಬಂದ ಮರಿಹುಳುಗಳು ಕಾಂಡದ ಮೃದು ಭಾಗವನ್ನು ತಿನ್ನುತ್ತಾ ಒಳಗೆ ಪ್ರವೇಶಿಸುತ್ತವೆ. ತೀವ್ರ ಹಾನಿಯಾದರೆ ಗರಿಗಳು ಒಣಗಿ ಮುರಿದು ಬೀಳುತ್ತವೆ ಮತ್ತು ಮರ ಸಾಯುವ ಸಾಧ್ಯತೆಯೂ ಇರುತ್ತದೆ.

ನಿರ್ವಹಣೆ: ಬಾಧಿತ ಮರಗಳನ್ನು ಸುಟ್ಟು ನಾಶ ಮಾಡುವುದು ಉತ್ತಮ ವಿಧಾನವಾಗಿದೆ. ಮರಗಳಿಗೆ ಗಾಯವಾಗದಂತೆ ಎಚ್ಚರವಹಿಸಬೇಕು. ಗಾಯವಾದಲ್ಲಿ ಕ್ಲೋರೊಪೈರಿಫಾಸ್ ಮತ್ತು ಕಾಪರ್ ಆಕ್ಸಿಕ್ಲೋರೈಡ್ ಮಿಶ್ರಣದ ಪೇಸ್ಟ್ ಹಚ್ಚಬೇಕು. ಮೋಹಕ ಬಲೆಗಳನ್ನು ಬಳಸುವುದರಿಂದ ಈ ಕೀಟದ ಪ್ರಮಾಣವನ್ನು ಕಡಿಮೆ ಮಾಡಬಹುದು.

ಗರಿ ತಿನ್ನುವ ಹುಳು

ಇತ್ತೀಚಿನ ದಿನಗಳಲ್ಲಿ ಮಂಡ್ಯ, ಮೈಸೂರು ಮತ್ತು ರಾಮನಗರ ಜಿಲ್ಲೆಗಳಲ್ಲಿ ತೆಂಗಿಗೆ ಗರಿ ತಿನ್ನುವ ಹುಳು ಅಥವಾ ಕಪ್ಪು ತಲೆ ಹುಳಿನ ಬಾಧೆ ಹೆಚ್ಚಾಗಿದೆ. ಈ ಕೀಟವು ಎಲ್ಲಾ ವಯಸ್ಸಿನ ಮರಗಳನ್ನು ಬಾಧಿಸಿ ಇಳುವರಿಯಲ್ಲಿ 45-60 ಶೇಕಡಾ ಕುಸಿತ ಉಂಟುಮಾಡುತ್ತದೆ. ಮರಿಹುಳುಗಳು ಎಲೆಯ ತಳಭಾಗದಲ್ಲಿ ಸುರಂಗಗಳನ್ನು ನಿರ್ಮಿಸಿ ಹಸಿರು ಭಾಗವನ್ನು ತಿನ್ನುತ್ತವೆ. ಹಾನಿ ಹೆಚ್ಚಾದಂತೆ ಮರಗಳು ಸುಟ್ಟಂತೆ ಕಾಣುತ್ತವೆ.

ನಿರ್ವಹಣೆ: ಪರತಂತ್ರ ಜೀವಿಗಳಾದ ಗೋನಿಯೋಜಸ್ ನೆಫಾಂಟಡಿಸ್ ಅಥವಾ ಬ್ರಕಾನ್ ಜೀವಿಗಳನ್ನು ತೋಟದಲ್ಲಿ ಬಿಡುವುದರಿಂದ ಈ ಕೀಟವನ್ನು ನೈಸರ್ಗಿಕವಾಗಿ ನಿಯಂತ್ರಿಸಬಹುದು. ಅಂತರಬೆಳೆಗಳನ್ನು ಬೆಳೆಯುವುದರಿಂದ ತೋಟದ ವಾತಾವರಣ ತಂಪಾಗಿದ್ದು ನೈಸರ್ಗಿಕ ಶತ್ರುಗಳು ಹೆಚ್ಚಾಗುತ್ತವೆ.

ರೂಗೋಸ್ ಸುರುಳಿ ಸುತ್ತುವ ಬಿಳಿನೊಣ

ಇತ್ತೀಚಿನ ವರ್ಷಗಳಲ್ಲಿ ಈ ಕೀಟವು ರಾಜ್ಯದ ಹಲವಾರು ಭಾಗಗಳಲ್ಲಿ ತೆಂಗು ಬೆಳೆಗೆ ಹಾನಿ ಮಾಡುತ್ತಿದೆ. ಇದು ಎಲೆಗಳ ಕೆಳಭಾಗದಿಂದ ರಸವನ್ನು ಹೀರುತ್ತದೆ. ಇದರ ಪರಿಣಾಮವಾಗಿ ಕಪ್ಪು ಶಿಲೀಂಧ್ರವು ಎಲೆಗಳ ಮೇಲೆ ಬೆಳೆಯುತ್ತದೆ ಮತ್ತು ಎಲೆಗಳು ಕಪ್ಪಾಗಿ ಒಣಗುತ್ತವೆ.

ನಿರ್ವಹಣೆ: ಪರಾವಲಂಬಿ ಜೀವಿಗಳನ್ನು ಉತ್ತೇಜಿಸುವುದು ಉತ್ತಮ ವಿಧಾನವಾಗಿದೆ. ಶೇ.1 ಸ್ಟಾರ್ಚ್ ಅಥವಾ ಗಂಜಿ ತಿಳಿಯನ್ನು ಎಲೆಗಳ ಮೇಲೆ ಸಿಂಪಡಿಸಿದರೆ ಕಪ್ಪು ಶಿಲೀಂಧ್ರ ಉದುರುತ್ತದೆ. ಐಸಾರಿಯಾ ಫ್ಯೂಮೋಸೊರೋಸಿಯಂ ಜೈವಿಕ ಕೀಟನಾಶಕವನ್ನು ಅಥವಾ ಅಜಾಡಿರೆಕ್ಟಿನ್ ಇರುವ ಬೇವಿನ ಎಣ್ಣೆಯನ್ನು ನೀರಿನಲ್ಲಿ ಬೆರೆಸಿ ಸಿಂಪಡಿಸಬಹುದು

ತೆಂಗಿನ ನುಸಿ

ತೆಂಗಿನ ನುಸಿಗಳು ಗುಂಪಾಗಿ ಎಳೆಯ ಕಾಯಿಗಳ ತೊಟ್ಟಿನ ಕೆಳಭಾಗದಲ್ಲಿ ರಸ ಹೀರುತ್ತವೆ. ಇದರಿಂದ ಕಾಯಿಗಳ ಮೇಲೆ ತ್ರಿಕೋನಾಕಾರದ ಬಿಳಿ ಮಚ್ಚೆಗಳು ಕಾಣಿಸಿಕೊಳ್ಳುತ್ತವೆ. ಬಾಧೆ ಹೆಚ್ಚಾದರೆ ಕಾಯಿಗಳು ಉದುರಿ ಮಾರುಕಟ್ಟೆ ಮೌಲ್ಯ ಕಡಿಮೆಯಾಗುತ್ತದೆ.

coconut

ನಿರ್ವಹಣೆ: ಸೊಗಬು ಅಥವಾ ಅಲಸಂದೆಯನ್ನು ಅಂತರಬೆಳೆಯಾಗಿ ಬೆಳೆದು ಮಣ್ಣಿಗೆ ಸೇರಿಸಬೇಕು. ಗಿಡಗಳಿಗೆ ಸರಿಯಾದ ಪ್ರಮಾಣದಲ್ಲಿ ನೀರು ಮತ್ತು ಗೊಬ್ಬರ ನೀಡಬೇಕು. ಅಜಾಡಿರೆಕ್ಟಿನ್ ಇರುವ ಬೇವಿನ ಎಣ್ಣೆಯನ್ನು ವರ್ಷಕ್ಕೆ ಮೂರು ಬಾರಿ ಎಳೆಕಾಯಿಗಳ ಮೇಲೆ ಸಿಂಪಡಿಸುವುದು ಸಹ ಪರಿಣಾಮಕಾರಿ.

ಸಾರಾಂಶ

ತೆಂಗಿನ ತೋಟಗಳಲ್ಲಿ ಕೀಟಗಳ ಹಾನಿಯನ್ನು ಕಡಿಮೆ ಮಾಡಲು ತೋಟದ ನೈರ್ಮಲ್ಯವನ್ನು ಕಾಪಾಡಿಕೊಳ್ಳುವುದು ಮತ್ತು ಕೀಟಗಳು ಸಂತಾನೋತ್ಪತ್ತಿ ಮಾಡುವ ಸ್ಥಳಗಳನ್ನು ನಾಶಪಡಿಸುವುದು ಅತ್ಯಗತ್ಯ. ಜೈವಿಕ ನಿಯಂತ್ರಣ ವಿಧಾನಗಳು, ಮೋಹಕ ಬಲೆಗಳ ಬಳಕೆ ಮತ್ತು ಸರಿಯಾದ ನಿರ್ವಹಣಾ ಕ್ರಮಗಳನ್ನು ಅನುಸರಿಸುವುದರಿಂದ ತೆಂಗಿನ ಬೆಳೆಯನ್ನು ರಕ್ಷಿಸಿ ಇಳುವರಿ ನಷ್ಟವನ್ನು ತಡೆಯಲು ಸಾಧ್ಯವಾಗುತ್ತದೆ.

Facebook
WhatsApp
Twitter
LinkedIn
Government of Karnataka