ಸೋರೆಕಾಯಿಯ ಔಷಧೀಯ ಗುಣಗಳು

ಸೋರೆಕಾಯಿಯ ಔಷಧೀಯ ಗುಣಗಳು

ಮಾನವನ ದೇಹಕ್ಕೆ ಆಹಾರವು ಕೇವಲ ಪೋಷಕಾಂಶಗಳನ್ನು ಮಾತ್ರ ನೀಡುವುದಲ್ಲದೆ ಅನೇಕ ಔಷಧೀಯ ಗುಣಗಳನ್ನು ಹೊಂದಿದೆ. ದೇಹಕ್ಕೆ ಅಗತ್ಯವಾದ ಪೋಷಕಾಂಶಗಳು, ಖನಿಜಗಳು, ಲವಣಗಳು ಮತ್ತು ಜೀವಸತ್ವಗಳನ್ನು ನೀಡುವಲ್ಲಿ ತರಕಾರಿಗಳು ಮಹತ್ವದ ಪಾತ್ರವಹಿಸುತ್ತವೆ. ತರಕಾರಿಗಳ ನಿಯಮಿತ ಸೇವನೆಯಿಂದ ದೀರ್ಘಕಾಲದ ಅನೇಕ ರೋಗಗಳನ್ನು ತಡೆಯಲು ಮತ್ತು ನಿಯಂತ್ರಿಸಲು ಸಹ ಸಾಧ್ಯವಾಗುತ್ತದೆ. ಇಂತಹ ಔಷಧೀಯ ಗುಣಗಳನ್ನು ಹೊಂದಿರುವ ತರಕಾರಿಗಳಲ್ಲಿ ಸೋರೆಕಾಯಿ ಪ್ರಮುಖವಾದದ್ದು. ಇದರ ವೈಜ್ಞಾನಿಕ ಹೆಸರು ಲಾಗೆನೇರಿಯಾ ಸಿಸೆರೇರಿಯಾ ಎಂದು ಕರೆಯಲಾಗುತ್ತದೆ.

ವರ್ಷಪೂರ್ತಿ ಬೆಳೆಯಬಹುದಾದ ಈ ತರಕಾರಿ ಬಹುಪಯೋಗಿ. ಇದು ಆಹಾರದಲ್ಲಿ ಶೀಷೆ ಯ ಆಕಾರವನ್ನು ಹೋಲುವುದರಿಂದ ಇಂಗ್ಲಿಷ್‌ನಲ್ಲಿ ಇದನ್ನು “ಬಾಟಲ್ ಗಾರ್ಡ್” ಎಂದು ಕರೆಯುತ್ತಾರೆ. ಸೋರೆಕಾಯಿ ಕುಂಬಳ ಜಾತಿಗೆ ಸೇರಿದ್ದು, ಇದರ ಮೂಲ ಸ್ಥಾನ ಆಫ್ರಿಕಾ ದೇಶವಾಗಿದೆ.

ಅನಾದಿಕಾಲದಿಂದಲೂ ಸೋರೆಕಾಯಿಯನ್ನು ಮಾನವನ ಅನೇಕ ರೋಗಗಳಿಗೆ ಉತ್ತಮ ಔಷಧಿಯೆಂದು ಪರಿಗಣಿಸಲಾಗಿದೆ. ಪ್ರತಿನಿತ್ಯ ಸೋರೆಕಾಯಿ ಆಹಾರವಾಗಿ ಸೇವಿಸಿದರೆ ಹೃದಯ ಸಂಬಂಧಿತ ರೋಗಗಳು, ಮಲಬದ್ಧತೆ, ಇರುಳುಗಣ್ಣು, ಕಫ, ಕಾಮಾಲೆ, ಕ್ಷಯ ರೋಗ, ರಕ್ತದೊತ್ತಡ ಹಾಗೂ ಮೂಲವ್ಯಾಧಿ ಮುಂತಾದ ಅನೇಕ ದೀರ್ಘಕಾಲಿಕ ರೋಗಗಳನ್ನು ನಿಯಂತ್ರಿಸಲು ಸಹಾಯಕವಾಗುತ್ತದೆ. ಈ ತರಕಾರಿ ಸೇವನೆಯಿಂದ ಕೆಲವು ರೋಗಗಳನ್ನು ನಿವಾರಿಸಿಕೊಳ್ಳಬಹುದಾಗಿದೆ.

Bottle gourd health benefits
ಪ್ರಮುಖ ಉಪಯೋಗಗಳು
1. ಜೀರ್ಣಶಕ್ತಿ ಒದಗಿಸುವ ಸೋರೆಕಾಯಿ

ಜೀರ್ಣಶಕ್ತಿ ಕೊರತೆಯಿಂದ ಬಳಲುವವರು ಸೋರೆಕಾಯಿ ರಸಕ್ಕೆ ಸ್ವಲ್ಪ ಉಪ್ಪನ್ನು ಸೇರಿಸಿ ಕುಡಿಯುವುದರಿಂದ ಜೀರ್ಣಶಕ್ತಿಯನ್ನು ಬಲಪಡಿಸಬಹುದು.

2. ಮಲಬದ್ಧತೆಯನ್ನು ನಿಯಂತ್ರಿಸುತ್ತದೆ

ಸತತವಾಗಿ ಸೋರೆಕಾಯಿ ಸೇವನೆಯಿಂದ ಮಲಬದ್ಧತೆಯನ್ನು ನಿವಾರಿಸಬಹುದು. ಬೆಳಗಿನ ಜಾವದಲ್ಲಿ ಸೋರೆಕಾಯಿ ರಸಕ್ಕೆ ಉಪ್ಪು ಸೇರಿಸಿ ಕುಡಿದರೆ ಮಲವಿಸರ್ಜನೆ ಸರಾಗವಾಗುತ್ತದೆ.

3. ಕ್ಷಯರೋಗ ನಿವಾರಣೆಗೆ ರಾಮಬಾಣ

ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೋರೆಕಾಯಿ ಸಣ್ಣ ಹೋಳುಗಳನ್ನು ಹಾಲಿನಲ್ಲಿ ಬೇಯಿಸಿ ಸೇವಿಸಿದರೆ ಕ್ಷಯ ರೋಗ ಕಡಿಮೆಯಾಗುತ್ತದೆ.

4. ಮೂತ್ರ ಸಮಸ್ಯೆ ಮತ್ತು ಮೂಲವ್ಯಾಧಿ ನಿವಾರಣೆ

ಅನೇಕ ಖನಿಜಗಳನ್ನು ಹೊಂದಿರುವ ಸೋರೆಕಾಯಿ ಸೇವನೆಯಿಂದ ಮೂತ್ರ ಸಂಬಂಧಿತ ಸಮಸ್ಯೆಗಳನ್ನು ಕಡಿಮೆ ಮಾಡಬಹುದು. ಹಾಗೆಯೇ ಸೋರೆಕಾಯಿ ಮತ್ತು ಬೆಲ್ಲದ ಮಿಶ್ರಣವನ್ನು ಮೂಲವ್ಯಾಧಿಯ ನೋವಿನ ಸ್ಥಳಕ್ಕೆ ಲೇಪಿಸಿದರೆ ನೋವು ಶಮನವಾಗುತ್ತದೆ.

5. ಉದರ ಬೇನೆಗೆ ರಾಮಬಾಣ

ಸೋರೆಕಾಯಿ ರಸ ಅಥವಾ ಕಚ್ಚನ್ನು ಪ್ರತಿದಿನ ಸೇವಿಸಿದರೆ ಹೊಟ್ಟೆ ನೋವು, ಕರುಳು ಹುಣ್ಣು, ಉರಿ ಹಾಗೂ ನೋವು ಕಡಿಮೆಯಾಗುತ್ತದೆ. ಇದರಿಂದ ಹೊಟ್ಟೆಗೆ ತಂಪು ಅನುಭವ ದೊರೆಯುತ್ತದೆ.

6. ಗರ್ಭಿಣಿಯರಿಗೆ ಗರ್ಭರಕ್ಷಣೆ

ನಿಯಮಿತವಾಗಿ ಸೋರೆಕಾಯಿ ಸೇವನೆಯಿಂದ ಗರ್ಭದಲ್ಲಿ ಮಗುವಿನ ಆರೋಗ್ಯ ಉತ್ತಮವಾಗುತ್ತದೆ. ತಾಯಿ ಮತ್ತು ಮಗುವಿನ ದುರ್ಬಲತೆಯನ್ನು ಕಡಿಮೆ ಮಾಡಿ ಮಗುವಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ.

7. ಸೌಂದರ್ಯ ವರ್ಧಕ ಸೋರೆಕಾಯಿ

ಬೇಸಿಗೆ ಕಾಲದಲ್ಲಿ ಸೋರೆಕಾಯಿ ತಿರುಳನ್ನು ಮುಖಕ್ಕೆ ಲೇಪಿಸಿ ಒಂದು ಗಂಟೆ ನಂತರ ತೊಳೆದರೆ ವ್ರಣಗಳು ಮಾಯವಾಗಿ ಚರ್ಮದ ಕಾಂತಿ ಹೆಚ್ಚುತ್ತದೆ. ಹಾಗೆಯೇ ಸೋರೆಕಾಯಿ ರಸವನ್ನು ಬಳಸುವುದರಿಂದ ಕೂದಲಿನ ಹೊಳಪು ಹೆಚ್ಚಾಗಿ, ಕೂದಲು ನಯವಾಗಿ ಮತ್ತು ಆರೋಗ್ಯಕರವಾಗಿ ಬೆಳೆಯುತ್ತದೆ.

8. ದೇಹದ ತೂಕ ಮತ್ತು ಉಷ್ಣತೆ ನಿಯಂತ್ರಣ

ದೇಹದ ಉಷ್ಣತೆ ಹೆಚ್ಚಾದಾಗ ಸೋರೆಕಾಯಿ ರಸಕ್ಕೆ ಸ್ವಲ್ಪ ಎಲಕ್ಕಿ ಪುಡಿ ಸೇರಿಸಿ ಕುಡಿದರೆ ದೇಹದ ಉಷ್ಣತೆ ಕಡಿಮೆಯಾಗುತ್ತದೆ ಹಾಗೂ ತಂಪಾದ ಅನುಭವ ನೀಡುತ್ತದೆ.

ಸಾರಾಂಶ

ಹೀಗೆ ಸೋರೆಕಾಯಿಯು ಅನೇಕ ಔಷಧೀಯ ಗುಣಗಳನ್ನು ಹೊಂದಿರುವ ಪ್ರಮುಖ ತರಕಾರಿ. ದಿನೇ ದಿನೇ ಎದುರಾಗುತ್ತಿರುವ ಆರೋಗ್ಯ ಸಮಸ್ಯೆಗಳನ್ನು ನಿಯಂತ್ರಿಸುವಲ್ಲಿ ಇದರ ಪಾತ್ರ ಮಹತ್ವದ್ದು. ಇಂತಹ ಬೆಳೆಗಳನ್ನು ಗುರುತಿಸಿ ಜನರು ತರಕಾರಿಗಳನ್ನು ಬೆಳೆಯುವುದು ಮತ್ತು ಆಹಾರದಲ್ಲಿ ಬಳಸುವುದರಿಂದ ಆರೋಗ್ಯಕರ ಜೀವನವನ್ನು ಅನುಭವಿಸಬಹುದು.

Facebook
WhatsApp
Twitter
LinkedIn
Government of Karnataka