ಬಿದಿರು ಆಧಾರಿತ ಕೃಷಿ ಅರಣ್ಯ ಪದ್ಧತಿ: ರೈತರಿಗೆ ವರದಾನ

Top Agricultural University
ಬಿದಿರು ಆಧಾರಿತ ಕೃಷಿ ಅರಣ್ಯ ಪದ್ಧತಿ: ರೈತರಿಗೆ ವರದಾನ
- ಸಿದ್ದಪ್ಪ ಕನ್ನೂರ್, ಸುಪ್ರಿಯಾ ಸಾಲಿಮಠ ಮತ್ತು ರಶ್ಮಿಕಾ ಎಚ್. ಆರ್., ಕೃಷಿ ವಿಜ್ಞಾನಗಳ ಮಹಾವಿದ್ಯಾಲಯ, ಇರುವಕ್ಕಿ

ಬಿದಿರು ವೇಗವಾಗಿ ಬೆಳೆಯುತ್ತಿರುವ ಮತ್ತು ನವೀಕರಿಸಬಹುದಾದ ಇಂಧನ ಸಂಪನ್ಮೂಲವಾಗಿದೆ. ಇದು ವಿವಿಧ ಉಪಯೋಗಗಳಿಗೆ ಸಮರ್ಥವಾಗಿದ್ದು, ಇದರ ಕ್ಷಿಪ್ರ ಬೆಳವಣಿಗೆಯು ಕಟ್ಟಿಗೆಗೆ ಒಂದು ಪರಿಸರ ಸ್ನೇಹಿ ಪರ್ಯಾಯವಾಗಿದೆ. ಬಿದಿರು ವಿವಿಧ ಕೈಗಾರಿಕೆಗಳಿಗೆ ಬಳಕೆಯಾಗುವ ಅಮೂಲ್ಯವಾದ ಸಂಪನ್ಮೂಲವಾಗಿದೆ. ಇದನ್ನು ಪೀಠೋಪಕರಣಗಳು, ಕರಕುಶಲ ವಸ್ತುಗಳು ಮತ್ತು ಇತರ ಮಾರುಕಟ್ಟೆ ಉತ್ಪನ್ನಗಳ ಉತ್ಪಾದನೆಯಲ್ಲಿ ಬಳಸಲಾಗುತ್ತದೆ. ಬಿದಿರಿನ ವ್ಯಾಪಕವಾದ ಬೇರಿನ ವ್ಯವಸ್ಥೆಯು ಮಣ್ಣಿನ ಸವೆತವನ್ನು ತಡೆಗಟ್ಟುವ ಮೂಲಕ ಭೂಸಂರಕ್ಷಣೆಗೆ ನೆರವಾಗುತ್ತದೆ.

ಕರ್ನಾಟಕದಲ್ಲಿ ಸಾಂಪ್ರದಾಯಿಕ ಮನೆಗಳು, ದೇವಾಲಯಗಳು ಮತ್ತು ವಿವಿಧ ಸಾಂಸ್ಕೃತಿಕ ಕಲಾಕೃತಿಗಳ ನಿರ್ಮಾಣದಲ್ಲಿ ಇದನ್ನು ಹೆಚ್ಚಾಗಿ ಬಳಸಲಾಗುತ್ತದೆ. ಬಿದಿರು-ಆಧಾರಿತ ಕರಕುಶಲ ವಸ್ತುಗಳು ರಾಜ್ಯದ ಕಲಾತ್ಮಕ ಪರಂಪರೆಯ ಅವಿಭಾಜ್ಯ ಅಂಗವಾಗಿ ಬಳಕೆಯಾಗುತ್ತಿದೆ.

ಬಿದಿರಿನ ವಿಧಗಳು
  1. ಗಡುವಾ ಬಿದಿರು (ಗಡುವಾ ಅಂಗುಸ್ಟಿಫೋಲಿಯಾ): ಹೆಚ್ಚಿನ ಮಳೆ ಹಾಗೂ ಆದ್ರ್ರ ಉಷ್ಣವಲಯಗಳಲ್ಲಿ ಉತ್ತಮವಾಗಿ ಬೆಳೆಯುವ ಈ ಬಿದಿರನ್ನು ನಾವು ಕೇರಳ ಹಾಗೂ ಕರ್ನಾಟಕ ಭಾಗಗಳಲ್ಲಿ ಕಾಣಬಹುದು. ಕಾಗದ ಹಾಗೂ ಪೀಠೋಪಕರಣ ತಯಾರಿಕೆ, ಕಟ್ಟಡ ಸಾಮಗ್ರಿಗಳಿಗೆ ಬಳಸಲಾಗುವ ಈ ಬಿದಿರು ವಿವಿಧೋದ್ದೇಶದ ಬಿದಿರು ಎಂದೇ ಹೆಸರಾಗಿದೆ. ಅತ್ಯಂತ ವೇಗವಾಗಿ ಬೆಳೆಯುವ ಬಿದಿರಿನ ಚಿಗುರುಗಳನ್ನು ಖಾದ್ಯವಾಗಿ ಕೂಡ ಬಳಸಲಾಗುತ್ತದೆ.
  2. ಟುಲ್ದಾ ಬಿದಿರು (ಬಾಂಬುಸಾ ಟುಲ್ಲಾ): ಸುಮಾರು 20ಮೀ. ಎತ್ತರ ಹಾಗೂ 8 ಸೇಂ.ಮೀ. ವ್ಯಾಸವನ್ನು ಹೊಂದಿರುವ ಈ ಬಿದಿರು ಉತ್ತಮ ಮಳೆ ಹಾಗೂ ತೇವಾಂಶವುಳ್ಳ ಮೆಕ್ಕಲು ಮಣ್ಣು ಇರುವ ಪ್ರದೇಶಗಳಲ್ಲಿ ಕಂಡುಬರುತ್ತದೆ. ಕಾಂಡಗಳನ್ನು ಸಾಮಾನ್ಯವಾಗಿ ನಿರ್ಮಾಣ, ಸ್ಕ್ಯಾಫೋಲ್ಡಿಂಗ್, ಪೀಠೋಪಕರಣಗಳು, ಪೆಟ್ಟಿಗೆಗಳು, ಬುಟ್ಟಿಗಳು, ಚಾಪೆಗಳು, ಮನೆಯ ಪಾತ್ರೆಗಳು, ಕರಕುಶಲ ವಸ್ತುಗಳು ಮತ್ತು ಕಾಗದದ ತಿರುಳಿಗೆ ಕಚ್ಚಾ ವಸ್ತುವಾಗಿ ಬಳಸಲಾಗುತ್ತದೆ. ಥೈಲ್ಯಾಂಡ್‌ನಲ್ಲಿ ಈ ಬಿದಿರಿನಿಂದ ಮಾಡಿದ ಕರಕುಶಲ ವಸ್ತುಗಳು, ಎಳೆಯ ಬಿದಿರು ಎಣ್ಣೆ ಮತ್ತು ಓಲಿಯೊರೆಸಿನ್ ಮಿಶ್ರಣದಿಂದ ಪಾಲಿಶ್ ಮಾಡಲಾದ ವಸ್ತುಗಳು ಪ್ರಸಿದ್ಧವಾಗಿವೆ.
  1. ಆಸ್ಟರ್ ಬಿದಿರು (ಡೆಂಡ್ರಕಲಾಮಸ್ ಆಸ್ಟರ್) : ಸುಮಾರು 20-30 ಮೀ. ಎತ್ತರ ಹಾಗೂ 20 ಸೆಂ. ಮೀ. ವ್ಯಾಸವನ್ನು ಹೊಂದಿರುವ ಈ ಸಸ್ಯವು ಅತ್ಯಂತ ಉದ್ದ ಹಾಗೂ ಬಾಳಿಕೆ ಬರುವ ಬಿದಿರಿನ ಜಾತಿ ಎಂದು ಹೆಸರಾಗಿದೆ. ಭಾರತದ ಈಶಾನ್ಯ ರಾಜ್ಯಗಳಲ್ಲಿ ಕಂಡುಬರುವ ಈ ವಿದೇಶಿ ಬಿದಿರಿನ ಸಸ್ಯವು ಉಷ್ಣವಲಯದ ಹವಾಮಾನದಲ್ಲಿ ಬೆಳೆಯುತ್ತದೆ. ಖಾದ್ಯಗಳಿಗಾಗಿ ಚಿಗುರುಗಳನ್ನು ಬೆಳೆಸಲು ನೆಡುತೋಪು ಮಾಡುವುದಾದರೆ ಸಸಿಗಳನ್ನು 4 ಮೀ. X 4 ಮೀ. ಅಂತರದಲ್ಲಿ ನೆಡಬೇಕು. ಆಸ್ಟರ್ ಬಿದಿರು ಕಾಂಡಗಳನ್ನು ಮನೆಗಳು ಮತ್ತು ಸೇತುವೆಗಳ ನಿರ್ಮಾಣಕ್ಕಾಗಿ ಕಟ್ಟಡ ಸಾಮಗ್ರಿ ಮತ್ತು ರಚನಾತ್ಮಕ ಮರವಾಗಿ ಬಳಸಲಾಗುತ್ತದೆ. ಈ ಬಿದಿರನ್ನು ಲ್ಯಾಮಿನೇಟೆಡ್ ಬೋರ್ಡ್‌ಗಳು, ಪೀಠೋಪಕರಣಗಳು, ಸಂಗೀತ ವಾದ್ಯಗಳು, ಚಾಪ್‌ಸ್ಟಿಕ್‌ಗಳು, ಮನೆಯ ಪಾತ್ರೆಗಳು ಮತ್ತು ಕರಕುಶಲ ವಸ್ತುಗಳನ್ನು ತಯಾರಿಸಲು ಸಹ ಬಳಸಲಾಗುತ್ತದೆ. ಎಳೆಯ ಚಿಗುರುಗಳು ಸಿಹಿಯಾಗಿರುತ್ತವೆ ಮತ್ತು ರುಚಿಕರವಾದ ತರಕಾರಿ ಎಂದು ಪರಿಗಣಿಸಲಾಗುತ್ತದೆ.
  1. ಬರ್ಮಾ ಬಿದಿರು (ಡೆಂಡ್ರಕಲಾಮಸ್ ಬ್ರಾಂಡಿಸೈ): ಬರ್ಮಾ ಬಿದಿರು ಇದು ಒಂದು ಹುಲ್ಲು ಜಾತಿಯ ವರ್ಗಕ್ಕೆ ಸೇರಿದ ಸಸ್ಯವಾಗಿದ್ದು, ಸ್ಥಳೀಯ ಬಿದಿರಿಗಿ೦ತ ವಿಭಿನ್ನವಾಗಿದೆ. ಸದರಿ ಬಿದಿರನ್ನು ಸಾಂಪ್ರದಾಯಿಕ ಉಪಯೋಗಗಳಾದ ಏಣಿ, ಬುಟ್ಟಿ, ನೇಯ್ದೆ ಇತ್ಯಾದಿಗಳಲ್ಲಿ ಬಳಸುತ್ತಾರೆ. ಬರ್ಮಾ ಬಿದಿರು 13-30 ಸೆಂ.ಮೀ. ಸುತ್ತಳತೆ ಹೊಂದಿದ್ದು ಸುಮಾರು 20 ಮೀ. ಎತ್ತರದವರೆಗೆ ಬೆಳೆಯುತ್ತದೆ.
  2. ಸೀಮೆ ಬಿದಿರು (ಡೆನ್‌ಡೋಕಲಾಮಸ್ ಸ್ಟೋಕ್ಸ್): ಕರ್ನಾಟಕದಲ್ಲಿ ಸೀಮೆ ಬಿದಿರು ಎಂದು ಕರೆಯಲಾಗುವ ಈ ಬಿದಿರಿನ ಜಾತಿಯು ಅತ್ಯಂತ ವಿಭಿನ್ನ ಬಳಕೆಯನ್ನು ಹೊಂದಿರುವ ಸಸ್ಯವಾಗಿದೆ. ತನ್ನ ಕಾಂಡದ ಮೇಲೆ ಮುಳ್ಳನ್ನು ಹೊಂದಿರದ ಈ ಬಿದಿರು ಮಧ್ಯಮ ಗಾತ್ರವಾಗಿದ್ದು, 30-35 ಸೆಂ. ಮೀ. ಸುತ್ತಳತೆ ಹೊಂದುವ ಸಾಮರ್ಥ್ಯ ಪಡೆದಿದೆ. ನೆಡುತೋಪಿನಲ್ಲಿ ಉತ್ತಮ ನಿರ್ವಹಣೆ ಮಾಡಿದಲ್ಲಿ 5ನೇ ವರ್ಷದಿಂದ, ರೈತರು ಒಂದು ವರ್ಷಕ್ಕೆ, ಒಂದು ಬಿದಿರಿನ ಹಿಂಡಿನಿಂದ ಸುಮಾರು 15 ಗಳ ಕಟಾವು ಮಾಡಬಹುದು. ಸರಾಸರಿ ಒಂದು ಬಿದಿರಿನ ಹಿಂಡಿನಿಂದ ರೂ. 1200/- ರಂತೆ ಪ್ರತಿ ವರ್ಷಕ್ಕೆ ಒಂದು ಎಕರೆಗೆ ರೂ. 3,00,000/- ಪಡೆಯಬಹುದಾಗಿದ್ದು, ಸುಮಾರು 40 ವರ್ಷಗಳ ಕಾಲ ನಿರಂತರವಾಗಿ ಆದಾಯಗಳಿಸಬಹುದು.

ಬಿದಿರು ವೇಗವಾಗಿ ಬೆಳೆಯುವ ಸಸ್ಯವಾಗಿದ್ದು, ಇತರ ಅನೇಕ ಬೆಳೆಗಳಿಗೆ ಹೋಲಿಸಿದರೆ ಕನಿಷ್ಠ ನೀರು, ಕೀಟನಾಶಕಗಳು ಮತ್ತು ರಸಗೊಬ್ಬರಗಳ ಅಗತ್ಯವಿರುತ್ತದೆ. ಇದರ ಕೃಷಿಯು ಕೃಷಿ ಅರಣ್ಯ ಘಟಕವಾಗಿ ಮಾಡಿದಾಗ ರೈತರಿಗೆ ಹೆಚ್ಚುವರಿ ಆದಾಯದ ಮೂಲವನ್ನು ಒದಗಿಸುತ್ತದೆ. ಇದರೊಂದಿಗೆ ಆದಾಯದ ಮಾರ್ಗಗಳನ್ನು ವೈವಿಧ್ಯಗೊಳಿಸುವುದು, ಸಾಂಪ್ರದಾಯಿಕ ಬೆಳೆಗಳಿಗೆ ಸಂಬಂಧಿಸಿದ ಅಪಾಯಗಳನ್ನು ತಗ್ಗಿಸಲು ರೈತರಿಗೆ ಸಹಾಯ ಮಾಡುತ್ತದೆ. ಕೆಲವು ಸಾಂಪ್ರದಾಯಿಕ ಬೆಳೆಗಳಿಗೆ ಹೋಲಿಸಿದರೆ ಬಿದಿರಿನ ಕೃಷಿಗೆ ಸಾಮಾನ್ಯವಾಗಿ ಕಡಿಮೆ ಆರಂಭಿಕ ಹೂಡಿಕೆ ಮತ್ತು ನಿರ್ವಹಣೆ ವೆಚ್ಚಗಳು ಬೇಕಾಗುತ್ತವೆ. ಸೀಮಿತ ಸಂಪನ್ಮೂಲಗಳನ್ನು ಹೊಂದಿರುವ ಸಣ್ಣ-ಪ್ರಮಾಣದ ರೈತರಿಗೆ ಇದು ವಿಶೇಷವಾಗಿ ಪ್ರಯೋಜನಕಾರಿ ಆಗಿದೆ. ಬಡವರ ಮರಮುಟ್ಟು ಎಂದು ಕರೆಯಿಸಿಕೊಳ್ಳುವ ಬಿದಿರು ಬಹುಪಯೋಗಿ ಸಂಪನ್ಮೂಲವಾಗಿದ್ದು, ಸಮಾಜದ ಎಲ್ಲ ವರ್ಗದ ಜನರ ಬಾಳಿನಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಬಳಕೆಗೆ ಅಗ್ರ ಸ್ಥಾನ ಹೊಂದಿರುವುದರಿಂದ ಹಸಿರು ಬಂಗಾರ ಎಂದೇ ಪ್ರಸಿದ್ಧಿಯಾಗಿದೆ. ಇತ್ತೀಚೆಗೆ ಅರಣ್ಯ ಕಾಯ್ದೆ 1927 ಸೆಕ್ಷನ್ 2(7) ಯ ತಿದ್ದುಪಡಿಯ ಪ್ರಕಾರ ಅರಣ್ಯತರ ಪ್ರದೇಶಗಳಲ್ಲಿ ಬೆಳೆದ ಬಿದಿರು ಮರವಾಗಿರುವುದಿಲ್ಲ. ಹಾಗಾಗಿ ರೈತರು ತಮ್ಮ ಜಮೀನುಗಳಲ್ಲಿ ಬೆಳೆದ ಬಿದಿರಿನ ಕಟಾವು ಹಾಗೂ ಸಾಗಾಣಿಕೆಗೆ ಅರಣ್ಯ ಇಲಾಖೆಯ ಅನುಮತಿ ಬೇಕಾಗಿಲ್ಲ. ಇದರಿಂದ ರೈತರ ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಣೆಯಾಗಬಲ್ಲದು.

Facebook
WhatsApp
Twitter
LinkedIn
Government of Karnataka