ಹಸುನಿತ ಎ. ಬಿ., ಮತ್ತು ಪ್ರೀತಿ' ಮತ್ತು ಸಂದ್ಯಾ ಜಿ. ಸಿ'. ''ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ, ಮೂಡಿಗೆರೆ, `ಐಸಿಎಆರ್ ಕೃಷಿ ವಿಜ್ಞಾನ ಕೇಂದ್ರ, ಹಿರಿಯೂರು
ಅಲೆಮಾರಿಯಾಗಿದ್ದ ಮಾನವ ಕ್ರಮೇಣ ಒಂದಡೆ ನೆಲೆನಿಲ್ಲುವಂತೆ ಮಾಡಿ, ನಮ್ಮ ಹಸಿವಿನ ಚಿಂತೆಯನ್ನು ನಿವಾರಿಸಿದ ವೃತ್ತಿಯೇ “ಕೃಷಿ”, ಆಹಾರದ ಭದ್ರತೆಯನ್ನು ನಿರ್ವಹಿಸುವ ಮೂಲ ಕಸುಬಾಗಿ ಕೃಷಿಯು ವಿಕಾಸವಾಗಿದೆ. ಕೃಷಿಯು ಆಕರ್ಷಕ ಮತ್ತು ಲಾಭದಾಯಿಕ ವೃತ್ತಿಯಾಗಿ ಉಳಿದಿಲ್ಲವಾದ್ದರಿಂದ ಇಂದು ಕೃಷಿಯಿಂದ ವಿಮುಖವಾಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಪ್ರಸಕ್ತ ಸಂದರ್ಭದಲ್ಲಿ ಕೃಷಿಯನ್ನು ಒಂದು ಬೆಳೆ ಉತ್ಪಾದಕ ಸಂಸ್ಕೃತಿಯಾಗಿ ನೋಡದೇ, ಒಂದು ಉದ್ದಿಮೆಯಾಗಿ ಪರಿವರ್ತಿಸಿದರೆ ಕೃಷಿ ಮೇಲೆ ಅವಲಂಬಿತರಾದವರು ಜೀವನ ಕಟ್ಟಿಕೊಳ್ಳಲು ಮತ್ತು ಎಲ್ಲ ಜನತೆಗೆ ಆಹಾರ ಭದ್ರತೆ ಒದಗಿಸಲು ಸಾಧ್ಯ. ಕೃಷಿ ಉದ್ದಿಮೆ ಅಥವಾ ಕೃಷಿ ಉದ್ಯಮಶೀಲತೆಯನ್ನು ಸಾಮಾನ್ಯ ಭಾಷೆಯಲ್ಲಿ ಸಮರ್ಥನೀಯ, ಸಮುದಾಯ-ಆಧಾರಿತ, ನೇರ ಮಾರುಕಟ್ಟೆಯ ಕೃಷಿ ಎಂದು ವ್ಯಾಖ್ಯಾನಿಸಬಹುದು. “ಕೃಷಿ ಉದ್ಯಮಶೀಲತೆಯು ಕೃಷಿ ಮತ್ತು ಉದ್ಯಮಶೀಲತೆಯ ಲಾಭದಾಯಕ ಸಂಯೋಜನೆಯಾಗಿದೆ. ಉದ್ಯಮಶೀಲತೆಯು ಕೃಷಿ ಮತ್ತು ವ್ಯಾಪಾರದ ಸಂಬಂಧವನ್ನು ವಿವಿಧ ರೀತಿಯಲ್ಲಿ ಅಭಿವೃದ್ಧಿಪಡಿಸುವ ಮೂಲಕ ಹೊಸತನವನ್ನು ಕಂಡುಕೊಳ್ಳುವ, ಮಾರುಕಟ್ಟೆಗಳನ್ನು ಗುರುತಿಸುವ ಮತ್ತು ಅಗತ್ಯಗಳನ್ನು ಪೂರೈಸುವ ಕೃಷಿಕ ಉದ್ಯಮಿಗಳನ್ನು ಉತ್ತೇಜಿಸುವಂತಾಗುತ್ತದೆ.
ಕೃಷಿ ಉದ್ಯಮಶೀಲತೆಯ ಅಗತ್ಯತೆ ಮತ್ತು ಪ್ರಾಮುಖ್ಯತೆ
ಸಾಮಾನ್ಯವಾಗಿ ನಮ್ಮ ರೈತರಲ್ಲಿ ವೈಜ್ಞಾನಿಕ ಕೃಷಿ ಮತ್ತು ಪರಿಣಾಮಕಾರಿ ಕೃಷಿ ನಿರ್ವಹಣಾ ವ್ಯವಸ್ಥೆಗಳ ಬಗ್ಗೆ ಹೆಚ್ಚು ತಿಳಿದುಕೊಳ್ಳಬೇಕಾದ ಅಗತ್ಯವಿದೆ. ಹೀಗಾಗಿ, ರೈತರು ವಿಳಂಬವಾದ ಮುಂಗಾರು, ಬರ, ಬೆಳೆ ಸಾಲ, ನಕಲಿ ಬೀಜಗಳು ಮತ್ತು ರಸಗೊಬ್ಬರ ಕೊರತೆ ಮುಂತಾದವುಗಳನ್ನು ನಿಭಾಯಿಸಬೇಕಿದೆ. ಆದುದರಿಂದ ಕೃಷಿಗೆ ಅನ್ವಯಿಸುವ ಉದ್ಯಮಶೀಲತೆಯ ತಾಂತ್ರಿಕತೆಗಳು ಮತ್ತು ನವೀನ ಕೌಶಲ್ಯಗಳನ್ನು ಅಳವಡಿಸಿಕೊಳ್ಳುವುದರಿಂದ ರೈತರು ಕೃಷಿಯನ್ನು ಉದ್ದಿಮೆಯನ್ನಾಗಿಸಿ ಆರ್ಥಿಕ ನಷ್ಟವನ್ನು ಸರಿದೂಗಿಸಲು ಸಹಕಾರಿಯಾಗುತ್ತದೆ. ಕೃಷಿ ಉದ್ಯಮಶೀಲತೆಯು ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಯ ಗುರಿಯನ್ನು ಹೊಂದಿದೆ. ಉದಾಹರಣೆಗೆ, ಉದ್ಯೋಗ ಸೃಷ್ಟಿ, ಬಡತನ ನಿವಾರಣೆ, ಪೋಷಣಾ ಮಟ್ಟದಲ್ಲಿ ಸುಧಾರಣೆ, ರಾಷ್ಟ್ರೀಯ ಆರ್ಥಿಕತೆಯಲ್ಲಿ ಅದರಲ್ಲೂ ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಆರೋಗ್ಯ ಮತ್ತು ಒಟ್ಟಾರೆ ಆಹಾರ ಭದ್ರತ ಮುಂತಾದವುಗಳನ್ನು ಒದಗಿಸುವ ಆಶಯವನ್ನು ಹೊಂದಿದೆ. ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚುತ್ತಿರುವ ನಿರುದ್ಯೋಗ ಮತ್ತು ಬಡತನದ ನಿರ್ಮೂಲನೆಗಾಗಿ ಕೃಷಿ ಉತ್ಪಾದಕತೆ ಹೆಚ್ಚಳ ಮತ್ತು ಲಾಭದಾಯಕ ಉದ್ಯಮಶೀಲತೆಯ ಅಗತ್ಯವಿದೆ. ಗ್ರಾಮೀಣ ಯುವಕರಿಗೆ ಉದ್ಯೋಗಾವಕಾಶಗಳ ಸೃಷ್ಟಿ, ನಗರಗಳಿಗೆ ವಲಸೆಯನ್ನು ತಡೆಯಲು ರಾಷ್ಟ್ರೀಯ ಆದಾಯವನ್ನು ಹೆಚ್ಚಿಸಲು, ಗ್ರಾಮೀಣ ಪ್ರದೇಶಗಳಲ್ಲಿ ಕೈಗಾರಿಕಾ ಅಭಿವೃದ್ಧಿಯನ್ನು ಉಳಿಸಿಕೊಳ್ಳಲು ಹಾಗೂ ನಗರ ಪ್ರದೇಶಗಳ ಮೇಲಿನ ಒತ್ತಡ ಕಡಿಮೆ ಮಾಡಲು ಕೃಷಿ ಉದ್ಯಮಶೀಲತೆಯನ್ನು ಅನುಸರಿಸಬಹುದಾಗಿದೆ.
ಕೃಷಿಯಲ್ಲಿ ಉದ್ಯಮಶೀಲತೆಯ ಅವಕಾಶಗಳು
- ಕೃಷಿ ಉತ್ಪನ್ನ ಸಂಸ್ಕರಣಾ ಘಟಕಗಳು: ಬೆಳೆದ ಬೆಳೆಯನ್ನು ನೇರವಾಗಿ ಮಾರಾಟ ಮಾಡುವ ಬದಲು ರೈತರ ಹಂತದಲ್ಲಿಯೇ ಪ್ರಾಥಮಿಕ ಸಂಸ್ಕರಣೆಯನ್ನು ಮಾಡಿ ಮಾರಾಟ ಮಾಡುವುದರಿಂದ ಬೆಳೆದ ಬೆಳೆಗೆ ಹೆಚ್ಚಿನ ಬೆಲೆ ಪಡೆಯಲು ಸಾಧ್ಯವಾಗುತ್ತದೆ. ಉದಾಹರಣೆಗೆ ಭತ್ತವನ್ನು ನೇರವಾಗಿ ಮಾರಾಟ ಮಾಡುವ ಬದಲಿಗೆ ಅಕ್ಕಿಯನ್ನು ತಯಾರಿಸಿ ಮಾರಾಟ ಮಾಡುವುದು. ಅದೇ ರೀತಿ ಬೇಳೆ, ರವೆ, ಹಿಟ್ಟು ಮುಂತಾದವುಗಳನ್ನು ತಯಾರಿಸಲು ಸಂಸ್ಕರಣಾ ಘಟಕಗಳನ್ನು ಸ್ಥಾಪಿಸುವುದು.
- ಕೃಷಿ ಆಧಾರಿತ ಉತ್ಪನ್ನ ತಯಾರಿಕಾ ಘಟಕಗಳು : ಕೃಷಿ ಉತ್ಪನ್ನಗಳನ್ನು ಮುಖ್ಯ ಕಚ್ಚಾ ವಸ್ತುವಾಗಿ ಆಧರಿಸಿ, ಹೊಸ ಉತ್ಪನ್ನಗಳನ್ನು ತಯಾರಿಸುವುದು. ಉದಾಹರಣೆಗೆ ಸಕ್ಕರೆ, ಬೇಕರಿ, ಮೌಲ್ಯವರ್ಧಿತ ಆಹಾರ ಪದಾರ್ಥಗಳು ಇತ್ಯಾದಿ.
- ಕೃಷಿ-ಪರಿಕರಗಳ ಉತ್ಪಾದನಾ ಘಟಕಗಳು: ರಸಗೊಬ್ಬರ ಉತ್ಪಾದನಾ, ಆಹಾರ ಸಂಸ್ಕರಣೆ, ಕೃಷಿ ಉಪಕರಣಗಳ ಘಟಕಗಳು ಇತ್ಯಾದಿ
- ಕೃಷಿ ಸೇವಾ ಕೇಂದ್ರಗಳು: ಕೃಷಿಯಲ್ಲಿ ಬಳಸಲಾಗುವ ಕೃಷಿ ಉಪಕರಣವನ್ನು ದುರಸ್ತಿ ಮಾಡಲು ಮತ್ತು ಸೇವೆಗಾಗಿ ಸೇವಾ ಕೇಂದ್ರಗಳನ್ನು ಒಳಗೊಂಡಿರುತ್ತವೆ.
- ಇತರೆ ಕ್ಷೇತ್ರಗಳು: ಜೇನು ಸಾಕಣೆ, ಪಶು ಆಹಾರ, ಬೀಜ ಸಂಸ್ಕರಣೆ, ಅಣಬೆ ಉತ್ಪಾದನೆ, ಎರೆಹುಳ ಗೊಬ್ಬರ ಉತ್ಪಾದನೆ, ಮೇಕೆ ಸಾಕಣೆ, ಸಾವಯವ ತರಕಾರಿ ಮತ್ತು ಹಣ್ಣುಗಳ ಚಿಲ್ಲರೆ ಮಾರಾಟ ಮಳಿಗೆಗಳು ಇತ್ಯಾದಿ.
ಜಾಗತೀಕರಣ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ನೀತಿ ಸುಧಾರಣೆಗಳಿಂದಾಗಿ, ಕೃಷಿ, ಉದ್ಯಮಶೀಲತೆಯಲ್ಲಿನ ವ್ಯಾಪ್ತಿ ಮತ್ತು ಅವಕಾಶಗಳು ಗಮನಾರ್ಹವಾಗಿ ವಿಸ್ತರಿಸಿದೆ. ಈ ವಲಯದಲ್ಲಿ ಅಸಾಧಾರಣ ವ್ಯಾಪಾರ ಆಸಕ್ತಿಗೆ ಕಾರಣವಾಗಿದೆ. ವೇಗವಾಗಿ ಬೆಳೆಯುತ್ತಿರುವ ಭಾರತೀಯ ಗ್ರಾಮೀಣ ಮಾರುಕಟ್ಟೆಯ ಮೇಲೆ ವಿಶ್ವದ ಭರವಸೆಯಿದೆ. ಇದು ದೇಶದ ಕಾರ್ಪೋರೇಟ್ ಬೆಳವಣಿಗೆಯ ಕಾರ್ಯತಂತ್ರವನ್ನು ನಿರ್ಮಿಸಲು ನಿರ್ಣಾಯಕವಾಗಿದೆ. ಸಮೀಕ್ಷೆಗಳ ಪ್ರಕಾರ, ಭಾರತದ ಒಟ್ಟು ಗ್ರಾಮೀಣ ಮಾರುಕಟ್ಟೆಯು ನಗರ ಮಾರುಕಟ್ಟೆಗಿಂತ ದೊಡ್ಡದಾಗಿದೆ. ಕೃಷಿ ವ್ಯಾಪಾರವು ಸುಧಾರಿತ ತಂತ್ರಜ್ಞಾನ ಮತ್ತು ನಿರ್ವಹಣೆಯೊಂದಿಗೆ ಮೌಲ್ಯವರ್ಧನೆ, ಪ್ಯಾಕೇಜಿಂಗ್, ಚಿಲ್ಲರೆ ವ್ಯಾಪಾರ ಮತ್ತು ಕೃಷಿ ಉತ್ಪನ್ನಗಳ ರಫಿಗೆ ಹೆಚ್ಚಿನ ಅವಕಾಶಗಳನ್ನು ಒದಗಿಸಿದೆ. ಭಾರತೀಯ ಜನಸಂಖ್ಯೆಯ ಹೆಚ್ಚಿನ ಭಾಗವು ಕೃಷಿಯ ಮೇಲೆ ಅವಲಂಬಿತವಾಗಿದೆ ಮತ್ತು ಈ ಕ್ಷೇತ್ರವು ವಿವಿಧ ಕೈಗಾರಿಕೆಗಳಿಗೆ ಕಚ್ಚಾ ವಸ್ತುಗಳನ್ನು ಸಹ ಪೂರೈಸಲು ಸಹಕಾರಿಯಾಗಿದೆ. ಭಾರತೀಯ ಆರ್ಥಿಕತೆಯ ಪ್ರಗತಿಶೀಲ ಬೆಳವಣಿಗೆಗೆ ಸರಿಯಾದ ಕ್ರಮ ಅನುಸರಿಸಿ ಕೃಷಿ ವ್ಯಾಪಾರವು ನಿಯಂತ್ರಿಸುವಂತಾಗಿದೆ. ಪ್ರಸ್ತುತ ಸನ್ನಿವೇಶದಲ್ಲಿ, ಸಾಕಷ್ಟು ಮೂಲಸೌಕರ್ಯಗಳ ಕೊರತೆಯಿಂದಾಗಿ ಹಣ್ಣುಗಳು ಮತ್ತು ತರಕಾರಿಗಳ ಸುಮಾರು ನಾಲ್ಕನೇ ಒಂದು ಭಾಗವು ಗ್ರಾಹಕರನ್ನು ತಲುಪುವ ಮೊದಲೇ ಹಾಳಾಗುತ್ತಿದೆ. ಆದಾಗ್ಯೂ, ಕೃಷಿ ವ್ಯವಹಾರದ ಸ್ವರೂಪದಲ್ಲಿನ ತ್ವರಿತ ಬದಲಾವಣೆಯಿಂದಾಗಿ, ಸಮರ್ಥ ಮತ್ತು ಕ್ರಿಯಾತ್ಮಕ ವೃತ್ತಿಪರರ ಬೇಡಿಕೆಯು ಕಳೆದ ಕೆಲವು ವರ್ಷಗಳಿಂದ ಹೆಚ್ಚಾಗಿದೆ. ವಿಶ್ವ ವ್ಯಾಪಾರ ಸಂಸ್ಥೆಯು (WTO) ನೀತಿ ಸುಧಾರಣೆಗಳನ್ನು ಪರಿಚಯಿಸಿದಾಗಿನಿಂದ, ಕೃಷಿ ವ್ಯವಹಾರದ ವ್ಯಾಪ್ತಿ ಮತ್ತು ಅವಕಾಶಗಳು ಹೆಚ್ಚಾಗಿವೆ. ಪ್ಯಾಕೇಜಿಂಗ್, ಕಚ್ಚಾ ವಸ್ತುಗಳ ಪೂರೈಕೆ, ಸಂಸ್ಕರಿಸಿದ ಕೃಷಿ ಆಹಾರ ತಯಾರಿಕೆ, ಕೃಷಿ ಉತ್ಪನ್ನಗಳ ರಫ್ತು ಮತ್ತು ಇತರೆ ಸಂಬಂಧಿತ ಕ್ಷೇತ್ರಗಳಂತಹ ಉದ್ಯಮಗಳ ಅವಕಾಶಗಳು ಹೆಚ್ಚಾಗಿವೆ. ಕಿರು ಬಂಡವಾಳದ ಏರಿಕೆ, ಪೂರಕ ಸರ್ಕಾರಿ ನಿಯಮಗಳು, ಉನ್ನತ ತಂತ್ರಜ್ಞಾನದ ಲಭ್ಯತೆ, ಮಾರ್ಗದರ್ಶನ ಕೃಷಿಯಲ್ಲಿ ಉದ್ಯಮ ಶೀಲರಾಗಲು ಹೆಚ್ಚಿನ ಅವಕಾಶಗಳನ್ನು ಕಲ್ಪಿಸಿವೆ. ಭಾರತದಲ್ಲಿ ಹಲವಾರು ರಾಷ್ಟ್ರಮಟ್ಟದಲ್ಲಿರುವ ಸಂಸ್ಥೆಗಳು ಉದ್ಯಮ ತರಬೇತಿ ನೀಡುತ್ತಿವೆ.
ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ (RSETI)
ಈ ಸಂಸ್ಥೆಯನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಹಕಾರದೊಂದಿಗೆ ಬ್ಯಾಂಕುಗಳು ನಿರ್ವಹಿಸುತ್ತವೆ. ನಿರುದ್ಯೋಗ ಸಮಸ್ಯೆಯನ್ನು ಕಡಿಮೆ ಮಾಡಲು ಗ್ರಾಮೀಣ ಬಡತನ ರೇಖೆಗಿಂತ ಕೆಳಗಿರುವ ಯುವಕರಿಗೆ ಅಗತ್ಯವಾದ ಕೌಶಲ್ಯ ತರಬೇತಿ ಮತ್ತು ಕೌಶಲ್ಯ ಉನ್ನತೀಕರಣಗೊಳಿಸುವ ಸಂಸ್ಥೆಯಾಗಿದೆ. ಈ ಸಂಸ್ಥೆಯು ಗ್ರಾಮೀಣಾಭಿವೃದ್ಧಿ ಮತ್ತು ಸ್ವಯಂ ಉದ್ಯೋಗ ತರಬೇತಿಯನ್ನು ಆಧರಿಸಿದೆ. ಇದು ಸಿಂಡಿಕೇಟ್, ಬ್ಯಾಂಕ್, ಕೆನರಾ ಬ್ಯಾಂಕ್ ಮತ್ತು ಕರ್ನಾಟಕದ ಉಜಿರೆಯಲ್ಲಿರುವ ಶ್ರೀ ಮಂಜುನಾಥೇಶ್ವರ ಟ್ರಸ್ಟ್ ಎಂಬ ಮೂರು ಸಂಸ್ಥೆಗಳು ಜಂಟಿಯಾಗಿ ಸ್ಥಾಪಿಸಿದ ಸಂಸ್ಥೆಯಾಗಿದೆ. ದೇಶದ ಪ್ರತಿ ಜಿಲ್ಲೆಗಳಲ್ಲಿ ಒಂದು RSETI ಅನ್ನು ಸ್ಥಾಪಿಸಲಾಗಿದೆ. ಜಿಲ್ಲೆಯ ಪ್ರಮುಖ ಬ್ಯಾಂಕ್ ಸಂಬಂಧಪಟ್ಟ ಬ್ಯಾಂಕ್ ಆಗಿದ್ದು, ಇದು ಕೌಶಲ್ಯ ತರಬೇತಿಯ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತದೆ. ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ನಂತರ ಅವರಿಗೆ ತಮ್ಮದೇ ಆದ ಉದ್ಯಮಗಳನ್ನು ಪ್ರಾರಂಭಿಸಲು ಬ್ಯಾಂಕುಗಳಿಂದ ಸಾಲ, ಸಂಪರ್ಕದ ನೆರವನ್ನು ಒದಗಿಸುತ್ತದೆ. ಪ್ರತಿಯೊಂದು RSETI ಯು’ ಒಂದು ಹಣಕಾಸು ವರ್ಷದಲ್ಲಿ ವಿವಿಧ ಮಾರ್ಗಗಳಲ್ಲಿ 30 ರಿಂದ 40 ಕೌಶಲ್ಯ ಅಭಿವೃದ್ಧಿ ತರಬೇತಿ ಕಾರ್ಯಕ್ರಮಗಳನ್ನು ನೀಡುತ್ತಿದೆ. ಈ ಕಾರ್ಯಕ್ರಮಗಳು 1-6 ವಾರಗಳವರೆಗಿನ ಅಲ್ಪಾವಧಿಯದ್ದಾಗಿರುತ್ತವೆ. ಕೃಷಿ ಮತ್ತು ಸಂಬಂಧಿತ ಚಟುವಟಿಕೆಗಳಾದ ಹೈನುಗಾರಿಕೆ, ಕೋಳಿ ಸಾಕಣೆ, ಜೇನು ಸಾಕಣೆ, ತೋಟಗಾರಿಕೆ, ರೇಷ್ಮೆ ಸಾಕಣೆ, ಅಣಬೆ ಕೃಷಿ, ಹೂ ಬೇಸಾಯ, ಮೀನುಗಾರಿಕೆ ಇತ್ಯಾದಿಗಳ ಬಗ್ಗೆ ತರಬೇತಿಯನ್ನು ನೀಡುತ್ತಿದೆ.
ರಾಷ್ಟ್ರೀಯ ಜೇನು ಮಂಡಳಿ (National Bee Board, DAC&FW)
ರಾಷ್ಟ್ರೀಯ ಜೇನು ಮಂಡಳಿಯ ರಾಷ್ಟ್ರೀಯ ಜೇನು ಸಾಕಣೆ ಮತ್ತು ಜೇನು ಮಿಷನ್ ಅಡಿಯಲ್ಲಿ ಜೇನು ಕೃಷಿ ಉದ್ಯಮಿಗಳು ಮತ್ತು ಕೃಷಿ ನವೋದ್ಯಮಗಳು ಜೇನು ಸಾಕಣೆ/ಜೇನು ಉತ್ಪಾದನೆಯಲ್ಲಿ ತೊಡಗಿಸಿಕೊಳ್ಳುವುದನ್ನು ಉತ್ತೇಜಿಸುವ; ಜೇನು ಸಾಕಾಣೆದಾರರು ಮತ್ತು ವ್ಯಾಪಾರಿಗಳು/ಜೇನು ಸಂಸ್ಕರಣಾಗಾರರು/ರಫ್ತುದಾರರು ಇತ್ಯಾದಿಗಳ ನಡುವೆ ವ್ಯಾಪಾರ ಒಪ್ಪಂದಗಳನ್ನು ಉತ್ತೇಜಿಸುವ, ಜೇನು ಸಾಕಣೆಯ ಮೂಲಕ ಮಹಿಳಾ ಸಬಲೀಕರಣದ ಗುರಿಯನ್ನು ಹೊಂದಿದ್ದು, ಸ್ವ ಸಹಾಯ ಗುಂಪುಗಳು/ರೈತ ಉತ್ಪಾದಕರ ಸಂಘಗಳು/ ಜೇನುಸಾಕಣೆದಾರರ ಸಂಘಗಳು/ಒಕ್ಕೂಟಗಳು ಇತ್ಯಾದಿಗಳ ರಚನೆ, ಮೂಲಕ ಜೇನುಸಾಕಣೆದಾರರನ್ನು ಬಲಪಡಿಸುತ್ತಿದೆ. ಅವಲ್ಲದೇ ಇನ್ನೂ ಅನೇಕ ಸರ್ಕಾರಿ ಮತ್ತು ಸರ್ಕಾರೇತರ ಸಂಸ್ಥೆಗಳ ಉಪಕ್ರಮಗಳು ಕೃಷಿ ಉದ್ಯಮಶೀಲತೆಯನ್ನು ಬಲಪಡಿಸುವ ಗುರಿಯನ್ನು ಹೊಂದಿವೆ.








