- ಜಯಲಕ್ಷ್ಮಿ ನಾರಾಯಣ ಹೆಗಡೆ, ಪಿ.ಎಂ.ಇ. ಘಟಕ, ಕೆ.ಶಿ.ನಾ.ಕೃ.ತೋ.ವಿ.ವಿ., ಇರುವಕ್ಕಿ, ಶಿವಮೊಗ್ಗ
ಭತ್ತದ ನಂತರ ಜೋಳವು ನಮ್ಮ ರಾಜ್ಯದ ಎರಡನೆಯ ಪ್ರಮುಖ ಬೆಳೆಯಾಗಿದೆ. ಈ ಬೆಳೆಯನ್ನು ಕರ್ನಾಟಕ ರಾಜ್ಯದಲ್ಲಿ ಉತ್ತರ ಕರ್ನಾಟಕದ ಜಿಲ್ಲೆಗಳಾದ ವಿಜಯಪುರ, ಕಲಬುರ್ಗಿ, ಧಾರವಾಡ, ರಾಯಚೂರು, ಬಳ್ಳಾರಿ, ಬೀದರ್ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ಮುಂಗಾರು ಮತ್ತು ಹಿಂಗಾರಿ ಬೆಳೆಯಾಗಿ ಬೆಳೆಯಲಾಗುತ್ತದೆ. ರೈತರು ಬೇಸಾಯಕ್ಕೆ ಎಷ್ಟೇ ಕಾಳಜಿ ವಹಿಸಿದರೂ ಈ ಬೆಳೆಯನ್ನು ಬೆಳೆಯ ವಿವಿಧ ಹಂತಗಳಲ್ಲಿ ಬಾಧಿಸುವ ಹಲವಾರು ಕೀಟಗಳಿಂದ ಬೆಳೆ ಇಳುವರಿ ರೈತರು ನಿರೀಕ್ಷಿಸಿದ ಮಟ್ಟದಲ್ಲಿ ಇರುವುದಿಲ್ಲ. ಈ ಬೆಳೆಯನ್ನು ಹ ಲ ವಾರ ಕೀಟಗಳು ಬಾಧಿಸುತ್ತಿದ್ದು, ಅವುಗಳಲ್ಲಿ ಪ್ರಮುಖವಾದವುಗಳನ್ನು ಈ ಕೆಳಗೆ ವಿವರಿಸಲಾಗಿದೆ.
ಸುಳಿ ನೊಣ: ಅಥೆರಿಗೊನ ಸೊಕೆಟ (ಮ್ಯೂಸಿಡೆ :ಡಿಪ್ಪೆರಾ)
ಹಾನಿಯ ಲಕ್ಷಣಗಳು: ಸಾಮಾನ್ಯವಾಗಿ ಈ ನೊಣಗಳು ಎಳೆಯ ಸಸಿಗಳನ್ನು ಹಾನಿಮಾಡುತ್ತವೆ. ಸುಳಿಯ ಬುಡ ಉಜ್ಜಿ ಕತ್ತರಿಸುವುದರಿಂದ ಮಧ್ಯದ ಸುಳಿ ಸಾಯುವುದು (ಡೆಡ್ ಹಾರ್ಟ್) ಚಿಹ್ನೆಯಾಗುತ್ತವೆ. ಸತ್ತ ಸುಳಿಗಳನ್ನು ಕಿತ್ತರೆ ಸರಳವಾಗಿ ಬರುತ್ತದೆ. ಪ್ರತಿಶತ ನೂರರಷ್ಟು ಹಾನಿಯಾಗುವುದು. ಬೆಳೆದ ಗಿಡಗಳಲ್ಲಿ ಈ ನೊಣದ ಬಾಧೆಯಿಂದ ಕುಡಿ ಸಸಿಗಳು ಉತ್ಪಾದನೆಯಾಗುತ್ತವೆ.
ನಿರ್ವಹಣಾ ಕ್ರಮಗಳು
- ಬಿತ್ತನೆಯನ್ನು ಕಾಲಕ್ಕೆ ಸರಿಯಾಗಿ ಕೈಗೊಳ್ಳಬೇಕು ಅಥವಾ ಮುಂಚಿತವಾಗಿ ಬಿತ್ತನೆ ಮಾಡಬೇಕು. ಸುಳಿನೊಣದ ಬಾಧೆಗೊಳಗಾದ ಸಸಿಗಳನ್ನು ಮೊದಲ ಹಂತದಲ್ಲಿ ಗುರುತಿಸಿ ಮರಿಹುಳುಗಳ ಸಹಿತಕಿತ್ತು ನಾಶಪಡಿಸಬೇಕು.
- ಜೋಳದ ಬೆಳೆಗೆ ಸುತ್ತುವರಿಯಾಗಿ ಗೋದಿ ಅಥವಾ ಮುಸುಕಿನಜೋಳವನ್ನು ಬೆಳೆಯುವುದರಿಂದ ಸುಳಿನೊಣದ ಬಾಧೆಯನ್ನು ಕಡಿಮೆಗೊಳಿಸಬಹುದು. ಪ್ರತಿ ಕಿ. ಗ್ರಾಂ ಜೋಳದ ಬೀಜವನ್ನು 6 ಮಿ. ಲೀ. ಇಮಿಡಾಕ್ಲೋಪ್ರಿಡ್ 600 ಎಫ್. ಎಸ್. ನಿಂದಅಥವಾ5ಗ್ರಾಂ ಕ್ಲೋಥಿಯನಿಡಿನ್ 50 ಡಬ್ಲೂಡಿ ಜಿ. ನಿಂದ ಬೀಜೋಪಚಾರ ಮಾಡಿ ಬಿತ್ತಬೇಕು.
- ಜೋಳದ ಬೆಳೆ ಮೊಳಕೆ ಒಡೆದ 10-12 ದಿವಸಗಳ ನಂತರ5 ಮಿ.ಲೀ. ಪಿಲ್ಲೋನಿಲ್ 5 ಎಸ್.ಸಿ. ಅಥವಾ 2 ಮಿ.ಲೀ. ಅಜಾಡಿರಕ್ಷಿನ್ 10000 ಪಿಪಿಎಮ್ ಅಥವಾ 2 ಮಿ.ಲೀ. ಪ್ರೋಫೆನೋಫಾಸ್ 50 ಇ.ಸಿ. ಅಥವಾ 1.75 ಮಿ.ಲೀ. ಡೈಮೆಥೋಯೆಟ್ 30 ಇ.ಸಿ. ಪ್ರತಿ ಲೀಟರ್ ನೀರಿಗೆ ಸಿಂಪಡಿಸುವುದರಿಂದ ಜೋಳ ಸುಳಿನೊಣವನ್ನು ನಿರ್ವಹಣೆ ಮಾಡಬಹುದಾಗಿದೆ. ಅಗತ್ಯಕ್ಕೆ ಅನುಗುಣವಾಗಿ 2-3 ಸಿಂಪರಣೆ ಮಾಡಬೇಕು.
ಮುಸುಕಿನ ಜೋಳದ ಬಿಳಿ ಕಾಂಡಕೊರಕ / ಚುಕ್ಕೆ ಕಾಂಡಕೊರಕ
ಹಾನಿಯ ಲಕ್ಷಣಗಳು: ಮರಿಹುಳುಗಳು ಎಳೆಯ ಮಡಚಿದ ಎಲೆಗಳ ಸುರಳಿಯಲ್ಲಿ ಸಣ್ಣ ರಂಧ್ರಗಳನ್ನು ಸಾಲು ಗಳಲ್ಲಿ ಮಾಡುತ್ತವೆ. ಗಿಡದ ಕಾಂಡವನ್ನು ಕೆಳಭಾಗದಲ್ಲಿ ಕೊರೆದು, ಕಾಂಡವನ್ನು ಸಾಯಿಸುತ್ತವೆ. ರಂಧ್ರಗಳಲ್ಲಿ ಹಿಕ್ಕೆಗಳನ್ನು ಕಾಣಬಹುದು. ಸಂತಾನೋತ್ಪತ್ತಿ ವೇಳೆಯಲ್ಲಿ ಈ ಹುಳುಗಳು ಬಾಧಿಸಿದರೆ ತೆನೆಗಳು ಜೊಳ್ಳಾಗುತ್ತವೆ.
ನಿರ್ವಹಣಾ ಕ್ರಮಗಳು
- ಡೆಡ್ ಹಾರ್ಟ್ (ಸತ್ತ ಸುಳಿ) ಬಾಧಿತ ಗಿಡಗಳನ್ನು ಕೀಟಗಳ ಹಂತಗಳೊಂದಿಗೆ ಸಾಯಿಸುವುದು.ಪತಂಗಗಳನ್ನು ಆಕರ್ಷಿಸಿ ಸಾಯಿಸಲು ಬೆಳಕಿನ ಬಲೆಯನ್ನು ಹಾಕುವುದು. ಟ್ರೈಕೋಗ್ರಾಮಾ ಕಿಲೋನಿಸ್ ಪ್ರತಿ ಹೆಕ್ಟೇರಿಗೆ 1,60,000ರಂತೆ ಬಿಡುಗಡೆ ಮಾಡುವುದು.
- ಪ್ರತಿ ಹೆಕ್ಟೇರಿಗೆ 10-15 ಕೆ. ಜಿ ಕಾರ್ಬೊಫ್ಯುರಾನ್ 3 ಜಿ ಹರಳುಗಳನ್ನು ಮರಳಿನೊಂದಿಗೆ ಮಿಶ್ರಣ ಮಾಡಿ ಹಾಕಬೇಕು. ಬೆಳೆ ಕಟಾವಾದ ನಂತರ ಉಳಿಕೆಯನ್ನು ಸುಡಬೇಕು. ಬಿತ್ತನೆ ಮಾಡಿದ 20-30ನೇ ದಿನದಲ್ಲಿ75 ಮಿ.ಲೀ. ಡೈಮಿಥೋಯೋಟ್ 30 ಇ. ಸಿ. ಪ್ರತಿ ಲೀಟರ್ ನೀರಿಗೆ ಬೆರಸಿ ಸಿಂಪಡಿಸಬೇಕು. ಎಕರೆಗೆ 200-250 ಲೀಟರ್ ಸಿಂಪಡಣಾ ದ್ರಾವಣ ಬೇಕಾಗುತ್ತದೆ.
ಗುಲಾಬಿ ಕಾಂಡಕೊರಕ
ಹಾನಿಯ ಲಕ್ಷಣಗಳು: ಮೊಟ್ಟೆಯಿಂದ ಹೊರಬಂದ ಮರಿಹುಳುಗಳು ಎಲೆಗಳನ್ನು ಕೆರೆದುತಿಂದು, ಮಡಚಿದ ಎಲೆಗಳಲ್ಲಿ ಉದ್ದನೆಯ ತೂತುಗಳನ್ನು ಮಾಡುತ್ತವೆ. ನಂತರ ಬೆಳೆದ ಹುಳುಗಳು ಗಿಡದ ಕಾಂಡವನ್ನು ಕೆಳಭಾಗದಲ್ಲಿ ಕೊರೆದು, ಕಾಂಡವನ್ನು ಸಾಯಿಸುತ್ತವೆ (ಡೆಡ್ ಹಾರ್ಟ್). ಕೊರೆದ ರಂಧ್ರಗಳಲ್ಲಿ ಹಿಕ್ಕೆಗಳನ್ನು ಕಾಣಬಹುದು.
ನಿರ್ವಹಣಾ ಕ್ರಮಗಳು
- ಬೆಳೆ ಕಟಾವಾದ ನಂತರ ಉಳಿಕೆಯನ್ನು ಸುಡಬೇಕು. ದ್ವಿದಳ ಧಾನ್ಯಗಳ ಜೊತೆಗೆ ಅಂತರ ಬೆಳೆಯಾಗಿ ಬೆಳೆಯುವುದು. ಬಾಧಿತ ಗಿಡಗಳನ್ನು ಕೀಟಗಳ ಹಂತಗಳೊಂದಿಗೆ ಸಾಯಿಸುವುದು. ಪತಂಗಗಳನ್ನು ಆಕರ್ಷಿಸಿ ಸಾಯಿಸಲು ಬೆಳಕಿನ ಬಲೆಯನ್ನು ಹಾಕುವುದು. ಟ್ರೈಕೊಗ್ರಾಮಾ ಕಿಲೋನಿಸ್ ಪ್ರತಿ ಹೆಕ್ಟೇರಿಗೆ 1,60,000ರಂತೆ ಬಿಡುಗಡೆ ಮಾಡುವುದು.
- ಪ್ರತಿ ಹೆಕ್ಟೇರಿಗೆ 10-15 ಕೆ. ಜಿಕಾರ್ಬೊಫ್ಯುರಾನ್ 3 ಜಿ ಹರಳುಗಳನ್ನು ಮರಳಿನೊಂದಿಗೆ ಮಿಶ್ರಣ ಮಾಡಿ ಹಾಕಬೇಕು ಅಥವಾ75 ಮಿ.ಲೀ, ಡೈಮಿಥೋಯೇಟ್ 30 ಇ.ಸಿ. ಪ್ರತಿ ಲೀಟರ್ ನೀರಿಗೆ ಬೆರಸಿ ಸಿಂಪಡಿಸಬೇಕು.
ತೆನೆತಿಗಣೆ
ಹಾನಿಯ ಲಕ್ಷಣಗಳು: ಅಪ್ಸರೆ ಮತ್ತು ಪ್ರೌಢ ಕೀಟಗಳು ಹಾಲು ಕಟ್ಟುವ ಸಮಯದಲ್ಲಿ ಎಳೆಯ ತೆನೆಗಳಿಂದ ಹಾಗೂ ಕಾಳುಗಳಿಂದ ರಸವನ್ನು ಹೀರುತ್ತವೆ. ಅಂತಹ ಕಾಳುಗಳು ಮುರುಟುತ್ತವೆ ಹಾಗೂ ಕಪ್ಪು ಬಣ್ಣಕ್ಕೆ ತಿರುಗುತ್ತವೆ ಹಾಗೂ ಕಾಳುಗಳು ಜೊಳ್ಳಾಗುತ್ತವೆ. ಬಲಿತ ಕಾಳುಗಳಲ್ಲಿ ತಿಗಣೆಯ ಹಾನಿಯಿಂದಾದ ಗಾಯದಿಂದ ಕಾಳುಗಳ ಗುಣಮಟ್ಟ ಕಡಿಮೆಯಾಗುತ್ತದೆ. ಸಾಮಾನ್ಯವಾಗಿ ಈ ತಿಗಣೆಗಳ ಹಾವಳಿ ಒತ್ತಾಗಿತೆನೆ ಬಿಡುವ ತಳಿಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಹಾನಿಯು ಶೇ. 55 ರಿಂದ 90 ರವರೆಗೂಕಂಡುಬರುತ್ತದೆ.
ನಿರ್ವಹಣಾ ಕ್ರಮಗಳು
- ಒತ್ತಾಗಿ ತೆನೆ ಬಿಡುವ ತಳಿಗಳನ್ನು ಆಯ್ಕೆ ಮಾಡಬಾರದು. ಆಸರೆ ಕಳೆಗಳನ್ನು ನಾಶಮಾಡಬೇಕು. ಬೆಳೆ ಪರಿವರ್ತನೆಯನ್ನು ಹತ್ತಿ, ಶೇಂಗಾ ಅಥವಾ ದ್ವಿದಳ ಧಾನ್ಯದೊಂದಿಗೆ ಮಾಡಬೇಕು. ಬಕೆಟ್‌ನಲ್ಲಿ ಸೀಮೆಎಣ್ಣೆ ಲೇಪಿತ ನೀರನ್ನು ಇಟ್ಟು ತೆನೆಗಳನ್ನು ಅಲುಗಾಡಿಸಿ, ತಿಗಣೆಗಳನ್ನು ಬಕೆಟ್ ಒಳಗೆ ಬೀಳಿಸಿ ಸಾಯಿಸಬೇಕು. ತೆನೆಗಳಿಗೆ ಮೆಲಾಥಿಯಾನ್ ಶೇ. 5 ಡಿ. ಅಥವಾ ಫೋಸೆಲಾನ್ ಶೇ. 4 ಡಿ. ಪ್ರತಿ ಎಕರೆಗೆ 10 ಕಿ. ಗ್ರಾಂ ನಂತೆ ಉದುರಿಸಬೇಕು.
ಜೋಳದ ತೆನೆ ನೊಣ
ಹಾನಿಯ ಲಕ್ಷಣಗಳು: ಮರಿ ಹುಳುಗಳು ಅಂಡಾಶಯವನ್ನು ಹಾನಿ ಮಾಡುತ್ತವೆ ಮತ್ತು ಬೆಳೆಯುತ್ತಿರುವ ಕಾಳುಗಳು ಅರ್ಧ ಅಥವಾ ಪೂರ್ಣ ಪ್ರಮಾಣದಲ್ಲಿ ಜೊಳ್ಳಾಗುತ್ತವೆ ಮತ್ತುಆಕಾರ ಕಳೆದುಕೊಳ್ಳುತ್ತವೆ. ತೆನೆಗಳನ್ನು ಅದುಮಿದಾಗ ಕೆಂಪು ಬಣ್ಣದದ್ರವ ಹೊರಬರುತ್ತದೆ.ಜೊಳ್ಳಾದ ಕಾಳುಗಳಲ್ಲಿ ಗೋಲಾಕಾರದ ರಂಧ್ರಗಳನ್ನು ಕಾಣಬಹುದು.
ನಿರ್ವಹಣಾ ಕ್ರಮಗಳು
- ಬೇಗ ಅಥವಾ ಒಂದೇ ವೇಳೆಯಲ್ಲಿ ಬಿತ್ತನೆಯನ್ನು ಮಾಡಬೇಕು. ಬಾಧೆ ಕಂಡುಬಂದ ಜಮೀನಿನಲ್ಲಿ ಬೆಳೆ ಪರಿವರ್ತನೆ ಮಾಡಬೇಕು. ಬಾಧಿತ ಬೆಳೆಗಳ ಭಾಗಗಳನ್ನು ಕೀಟ ಸಹಿತ ನಾಶಪಡಿಸಬೇಕು. ಕೆಲವು ನಿರೋಧಕ ತಳಿಗಳಾದ ಐಸಿಎಸ್-745, ಐಸಿಎಸ್- 197, ಐಸಿಎಸ್-88013 ಮತ್ತು ಪಿಜೆ-890.
- ಬೆಳಕಿನ ಬಲೆಗಳನ್ನು ಅಳವಡಿಸಿ ಈ ಕೀಟಗಳನ್ನು ಹತೋಟಿ ಮಾಡಬಹುದು. ಈ ನೊಣಗಳಿಗೆ ಟೆಟ್ರಾಸ್ಟಿಕಸ್ ಕೊಯಂಬತ್ತೂ ರೆನ್ಸಿಸ್ ಪರತಂತ್ರ ಜೀವಿಗಳನ್ನು ಉಪಯೋಗಿಸಬಹುದು. ತೆನೆಗಳಿಗೆ ಮೆಲಾಥಿಯಾನ್ ಶೇ. 5 ಡಿ. ಅಥವಾ ಫೋಸೆಲಾನ್ ಶೇ. 4 ಡಿ. ಪ್ರತಿಎಕರೆಗೆ 10 ಕಿ.ಗ್ರಾಂ ನಂತೆ ಉದುರಿಸಬೇಕು ಅಥವಾ ಮೆಲಾಥಿಯಾನ್ 50 ಇ.ಸಿ. 2 ಮಿ.ಲೀ. ಅಥವಾ ಶೇ. 0.5 ಮಿ.ಲೀ. ಫೆನ್‌ವಲ್ವರೇಟ್ ಪ್ರತಿ ಲೀಟರ್ ನೀರಿಗೆ ಬೆರಸಿ ಸಿಂಪಡಿಸಬೇಕು.
ತೆನೆ ಕಾಯಿಕೊರಕ
ಹಾನಿಯ ಲಕ್ಷಣಗಳು: ಮರಿಹುಳುಗಳು ಪ್ರಾರಂಭದಲ್ಲಿ ಎಲೆಗಳನ್ನು ತಿಂದು ಬೆಳೆದ ಹುಳುಗಳು ಗೋದಿ ತೆನೆಯನ್ನು ಹಾಳುಮಾಡುತ್ತವೆ.
ನಿರ್ವಹಣಾ ಕ್ರಮಗಳು
- ಟ್ರೈಕೋಗ್ರಾಮ ಕಣಜಗಳು ಮೊಟ್ಟೆಗಳಲ್ಲಿ ಬೆಳೆಯುವ ಪರೋಪಜೀವಿ ಕೀಟಗಳು. ಬಿತ್ತನೆ ಮಾಡಿದ 35-40 ದಿವಸಗಳ ನಂತರ 10 ದಿವಸಗಳ ಅಂತರದಲ್ಲಿ ಪ್ರತಿ ಹೆಕ್ಟೇರ್‌ಗೆ 1,00,000 ಪರಾವಲಂಬಿ ಕಣಜಗಳನ್ನು ಹೊಲದಲ್ಲಿ ಬಿಡಬೇಕಾಗುತ್ತದೆ.
- ಕಾಯಿ ಕೊರೆಯುವ ಹುಳುಗಳನ್ನು ನಾಶಮಾಡುವ ಹಲವು ಕಣಜಗಳಿವೆ. ಇವುಗಳಲ್ಲಿ ಪ್ರಮುಖವಾದವು -ಕಿಲೋನಸ್ ಬ್ಲಾಕ್ಟರ್ನಿ, ಮೈಕ್ರೋಬ್ರೆಕಾನ್ ಲೆಫ್ಟ್ಾಯಿ, ಮೈಕ್ರೋಬ್ರೆಕಾನ್ ಗ್ರೀನಿ, ಮೈಕ್ರೋಬ್ರೆಕಾನ್ ಹೆಬೆಟರ್, ಮೈಕ್ರೋಬ್ರೆಕಾನ್ ಬ್ರೆವಿಕಾರ್ನಿಸ್ ಪ್ರಮುಖವಾದವು. ಪ್ರತಿ ಹೆಕ್ಟೇರ್‌ಗೆ 1,00,000 ಬಿಡುಗಡೆ ಮಾಡಬೇಕು. 2 ಗ್ರಾಂ ಬಿ. ಟಿ. ಯನ್ನು ಪ್ರತಿ ಲೀಟರ್ ನೀರಿಗೆ ಬೆರಸಿ ಸಿಂಪಡಿಸಬೇಕು. ಲಿಂಗಾಕರ್ಷಕ ಬಲೆಗಳನ್ನು ಹೊಲದಲ್ಲಿರಿಸಿ ಪತಂಗಗಳನ್ನು ಆಕರ್ಷಿಸಿ ನಾಶ ಮಾಡಬಹುದು. ಕೀಟದ ಹಾನಿ ಮೊದಲ ಬಾರಿಗೆ ಕಾಣಿಸಿಕೊಂಡಾಗ ಆ ಭಾಗಗಳನ್ನು ಸಂಗ್ರಹಿಸಿ ನಾಶಮಾಡಬೇಕು.
- ಕಾಯಿ ಕೊರೆಯುವ ಕೀಟದ ಹತೋಟಿಯಲ್ಲಿ ಹಲವು ಕೀಟ ನಾಶಕಗಳನ್ನು ಉಪಯೋಗಿಸಲಾಗುತ್ತದೆ. ಪ್ರತಿ ಲೀಟರ್ ನೀರಿಗೆ 2 ಮಿ. ಲೀ. ಕ್ಲೋರ್‌ಪೈರಿಫಾಸ್ 20 ಇ.ಸಿ. ಅಥವಾ 2 ಮಿ.ಲೀ. ಕ್ವಿನಾಲ್ ಫಾಸ್ 25 ಇ.ಸಿ. ಅಥವಾ 2 ಮಿ.ಲೀ. ಪ್ರೊಫೆನೋಫಾಸ್ 50 ಇ. ಸಿ. ಅಥವಾ 1 ಮಿ. ಲೀ. ಇಂಡಾಕ್ಸಕಾರ್ಬ5 ಎಸ್. ಸಿ. ಅಥವಾ 1.5 ಮಿ.ಲೀ, ಮೊನೊಕ್ರೋಟೋಪಾಸ್ 36 ಎಸ್.ಎಲ್ ನೀರಿಗೆ ಬೆರಸಿ ಸಿಂಪಡಿಸಬೇಕು. ಪೈರಿತ್ರಾಯಿಡ್ ಕೀಟನಾಶಕಗಳಿಂದ 0.5 ಮಿ.ಲೀ. ಡೆಲ್ಸಮೆಥಿನ್ 2.8 ಇ.ಸಿ ಅಥವಾ ಸೈಪರ್‌ಮೆಥಿನ್ 10 ಇ.ಸಿ ಅಥವಾ ಫೆನ್ವಲರೇಟ್ 20 ಇ.ಸಿ ಪ್ರತಿ ಲೀಟರ್ ನೀರಿಗೆ ಬೆರಸಿ ಒಂದು ಸಲ ಸಿಂಪಡಿಸಬಹುದು. ಒಂದಕ್ಕಿಂತ ಹೆಚ್ಚಿನ ಸಿಂಪಡಣೆ ಮಾಡಬಾರದು.
ಜೋಳದ ಮೈಟ್ (ನುಸಿ) ಎಲೆ ನುಸಿ/ ಬಿಳಿ ನುಸಿ/ ಇರಿಯೊಫಿಡ್ ನುಸಿ
ಹಾನಿಯ ಲಕ್ಷಣಗಳು: ಅಪ್ಪರೆ ಮತ್ತು ಪ್ರೌಢ ನುಸಿಗಳು ಎಲೆಗಳಿಂದ ರಸಗಳನ್ನು ಹೀರುತ್ತವೆ. ಇದರಿಂದ ಎಲೆಗಳಲ್ಲಿ ಕೆಂಪು ಬಣ್ಣ ಅಭಿವೃದ್ಧಿಯಾಗುತ್ತದೆ. ಕ್ರಮೇಣ ಎಲೆಗಳು ಒಣಗುತ್ತವೆ. ಬಾಧೆಯು ತೀವ್ರವಾದಾಗ ಎಲೆಗಳು ಸುಟ್ಟಂತೆ ಕಾಣುತ್ತದೆ.
ನಿರ್ವಹಣಾ ಕ್ರಮಗಳು : ಪ್ರತಿ ಲೀಟರ್ ನೀರಿಗೆ 2.5 ಮಿ.ಲೀ. ಡೈಕೋಫಾಲ್ 18.5 ಎಸ್. ಸಿ. ಅಥವಾ 3 ಗ್ರಾಂ ನೀರಿನಲ್ಲಿ ಕರಗುವ ಗಂಧಕವನ್ನು ಬೆರಸಿ ಸಿಂಪರಣೆ ಮಾಡುವುದು.