ಕೃಷಿ ಕ್ಷೇತ್ರದಲ್ಲಿ ಬೆಳೆಗಳಿಗೆ ಹಾನಿ ಉಂಟುಮಾಡುವ ಪ್ರಮುಖ ಪೀಡೆಗಳಲ್ಲಿ ಇಲಿ ಮತ್ತು ಹೆಗ್ಗಣಗಳು ಪ್ರಮುಖವಾದವು. ಬಿತ್ತನೆ ಹಂತದಿಂದ ಹಿಡಿದು ಧಾನ್ಯ ಸಂಗ್ರಹಣೆವರೆಗೂ ಇವುಗಳು ರೈತರಿಗೆ ಅಪಾರ ಪ್ರಮಾಣದ ನಷ್ಟ ಉಂಟುಮಾಡುತ್ತವೆ. ಬೆಳೆಗಳ ಬೀಜ, ಮೊಳಕೆ, ಕಾಂಡ, ಬೇರು, ತೆನೆ ಹಾಗೂ ಧಾನ್ಯಗಳನ್ನು ತಿಂದು ಹಾನಿ ಮಾಡುವುದರ ಜೊತೆಗೆ, ಸಾಕಷ್ಟು ಧಾನ್ಯವನ್ನು ತಮ್ಮ ಬಿಲಗಳಲ್ಲಿ ಸಂಗ್ರಹಿಸಿಡುವ ಮೂಲಕ ನಷ್ಟದ ಪ್ರಮಾಣವನ್ನು ಇನ್ನಷ್ಟು ಹೆಚ್ಚಿಸುತ್ತವೆ.
ಇವುಗಳಿಂದ ಉಂಟಾಗುವ ಹಾನಿ ಕೇವಲ ಬೆಳೆಗಳಿಗೆ ಮಾತ್ರ ಸೀಮಿತವಾಗಿಲ್ಲ. ಪ್ಲೇಗ್ ಸೇರಿದಂತೆ ಸುಮಾರು 30ಕ್ಕೂ ಹೆಚ್ಚು ಸಾಂಕ್ರಾಮಿಕ ರೋಗಗಳನ್ನು ಹರಡುವ ಸಾಮರ್ಥ್ಯವೂ ಇಲಿ ಮತ್ತು ಹೆಗ್ಗಣಗಳಿಗೆ ಇದೆ. ಮನೆಗಳ ಗೋಡೆ, ಬಾಗಿಲು, ಕಿಟಕಿ, ಯಂತ್ರೋಪಕರಣಗಳು ಹಾಗೂ ವಿದ್ಯುತ್ ತಂತಿಗಳನ್ನು ಕಡಿದು ಹಾನಿಗೊಳಿಸುವುದರಿಂದ ಮಾನವ ಜೀವನಕ್ಕೂ ಅಪಾಯ ಉಂಟಾಗುತ್ತದೆ.
ಸಾಮಾನ್ಯವಾಗಿ ನೀರಾವರಿ ಪ್ರದೇಶಗಳಲ್ಲಿ ಕೋಡೆ, ಹೊಲದ ಇಲಿ, ಸುಂಡಿಲಿ ಮತ್ತು ಬಿಳ್ಳೇರಿ ಹೆಚ್ಚಾಗಿ ಕಂಡುಬರುತ್ತವೆ. ತೆಂಗು, ಅಡಿಕೆ, ಕೋಕೋ ಹಾಗೂ ತರಕಾರಿ ತೋಟಗಳಲ್ಲಿ ಹೆಗ್ಗಣ, ಅಳಿಲು ಮತ್ತು ಮನೆಯ ಕಪ್ಪು ಇಲಿಗಳ ಹಾವಳಿ ಹೆಚ್ಚಿರುತ್ತದೆ. ಹೀಗಾಗಿ ಇವುಗಳ ನಿಯಂತ್ರಣಕ್ಕೆ ವೈಜ್ಞಾನಿಕ ಹಾಗೂ ಸಾಮೂಹಿಕ ಕ್ರಮಗಳನ್ನು ಅನುಸರಿಸುವುದು ಅತ್ಯಂತ ಅಗತ್ಯವಾಗಿದೆ.
ಇಲಿ ಮತ್ತು ಹೆಗ್ಗಣಗಳ ನಿಯಂತ್ರಣ ಪರಿಣಾಮಕಾರಿಯಾಗಬೇಕಾದರೆ ಗ್ರಾಮ ಮಟ್ಟದಲ್ಲಿ ಸಾಮೂಹಿಕವಾಗಿ ಕಾರ್ಯಾಚರಣೆ ನಡೆಸಬೇಕು. ಮನೆ, ಹೊಲ, ತೋಟ ಹಾಗೂ ಗದ್ದೆಗಳಲ್ಲಿ ಒಂದೇ ಸಮಯದಲ್ಲಿ ನಿಯಂತ್ರಣ ಕ್ರಮ ಆರಂಭಿಸಿ ಐದು ದಿನಗಳ ವೇಳಾಪಟ್ಟಿಯಂತೆ ಅನುಸರಿಸಿದರೆ ಉತ್ತಮ ಫಲಿತಾಂಶ ಪಡೆಯಬಹುದು. ಇಲಿಗಳು ಅನುಮಾನಾಸ್ಪದ ಆಹಾರವನ್ನು ತಕ್ಷಣ ತಿನ್ನುವುದಿಲ್ಲ. ಆದ್ದರಿಂದ ಮೊದಲ ಎರಡು ದಿನ ವಿಷರಹಿತ ಆಹಾರ ನೀಡಿ, ನಂತರ ವಿಷ ಮಿಶ್ರಿತ ಆಹಾರವನ್ನು ನೀಡುವುದು ಸೂಕ್ತ ವಿಧಾನವಾಗಿದೆ.
ಇಲಿ ನಿಯಂತ್ರಣಕ್ಕೆ ಜಿಂಕ್ ಫಾಸ್ಫೈಡ್ ಹಾಗೂ ರೋಬಾನ್ ಎಂಬ ಇಲಿ ಪಾಷಾಣಗಳನ್ನು ಬಳಸಲಾಗುತ್ತದೆ. ಜೊತೆಗೆ ಅಕ್ಕಿ, ರಾಗಿ, ಹುರಿದ ಕಡಲೆ ಬೀಜ ಮತ್ತು ಕಡಲೆಕಾಯಿ ಎಣ್ಣೆಯಿಂದ ಆಮಿಷ ತಯಾರಿಸಲಾಗುತ್ತದೆ. ವಿಷರಹಿತ ಆಮಿಷವನ್ನು ಮೊದಲಿಗೆ ಬಿಲಗಳಲ್ಲಿ ಇಡುವುದರಿಂದ ಇಲಿಗಳು ಅದಕ್ಕೆ ಒಲವು ಹೊಂದುತ್ತವೆ. ನಂತರ ಅದೇ ಆಹಾರದಲ್ಲಿ ಶೇ. 2 ರಷ್ಟು ಜಿಂಕ್ ಫಾಸ್ಫೈಡ್ ಮಿಶ್ರಣ ಮಾಡಿ ಬಿಲಗಳಲ್ಲಿ ಇಡಲಾಗುತ್ತದೆ.
ನಿಯಂತ್ರಣ ಕ್ರಮದ ಮೊದಲ ದಿನ ಎಲ್ಲಾ ಇಲಿ ಬಿಲಗಳನ್ನು ಮುಚ್ಚಬೇಕು. ಎರಡನೇ ದಿನ ಬಾಯಿ ತೆರೆದಿರುವ ಬಿಲಗಳಲ್ಲಿ ವಿಷರಹಿತ ಆಮಿಷವನ್ನು ಇಟ್ಟು ಮಣ್ಣಿನಿಂದ ಮುಚ್ಚಬೇಕು. ನಾಲ್ಕನೇ ದಿನ ವಿಷಪೂರಿತ ಆಮಿಷವನ್ನು ಬಿಲಗಳಲ್ಲಿ ಇಡಬೇಕು. ಐದನೇ ದಿನ ಉಳಿದಿರುವ ಇಲಿಗಳನ್ನು ಕೊಲ್ಲಲು ರೋಬಾನ್ ಬಿಲ್ಲೆಗಳನ್ನು ಬಳಸಬಹುದು. ಈ ವಿಧಾನದಿಂದ ಸುಮಾರು ಶೇ. 60 ರಿಂದ 70 ರಷ್ಟು ಇಲಿಗಳನ್ನು ನಿಯಂತ್ರಿಸಬಹುದು.
ತರಕಾರಿ ತೋಟಗಳು ಹಾಗೂ ತೆಂಗು, ಅಡಿಕೆ, ದಾಳಿಂಬೆ ಮತ್ತು ಕೋಕೋ ತೋಟಗಳಲ್ಲಿ ವಿಶೇಷ ಜಾಗ್ರತೆ ಅಗತ್ಯವಿದೆ. ಮರಗಳಲ್ಲಿ ಇರುವ ಇಲಿ ಪೊಟರೆಗಳನ್ನು ಮೊದಲು ನಾಶಪಡಿಸಿ, ನಂತರ ರೋಬಾನ್ ಬಿಲ್ಲೆಗಳನ್ನು ಕಾಂಡ ಮತ್ತು ಕೊಂಬೆಗಳ ಸೇರುವ ಭಾಗದಲ್ಲಿ ಸುರಕ್ಷಿತವಾಗಿ ಅಳವಡಿಸಬೇಕು.
ಹೀಗೆ ವೈಜ್ಞಾನಿಕ ಹಾಗೂ ಸಮಗ್ರ ನಿಯಂತ್ರಣ ಕ್ರಮಗಳನ್ನು ಅನುಸರಿಸುವುದರಿಂದ ಬೆಳೆ ನಷ್ಟವನ್ನು ಕಡಿಮೆ ಮಾಡಬಹುದು. ರೈತರು ಸಾಮೂಹಿಕವಾಗಿ ಇಲಿ ಮತ್ತು ಹೆಗ್ಗಣಗಳ ನಿಯಂತ್ರಣ ಕಾರ್ಯ ಕೈಗೊಂಡರೆ ಉತ್ತಮ ಇಳುವರಿ ಹಾಗೂ ಆರ್ಥಿಕ ಲಾಭ ಪಡೆಯಲು ಸಾಧ್ಯವಾಗುತ್ತದೆ.








