ಭತ್ತದ ರೋಗಗಳು ಮತ್ತು ನಿರ್ವಹಣಾ ಕ್ರಮಗಳು

ಭತ್ತದ ರೋಗಗಳು ಮತ್ತು ನಿರ್ವಹಣಾ ಕ್ರಮಗಳು

ಭತ್ತವು ಗೋಧಿಯ ನಂತರ ವಿಶ್ವದಲ್ಲೇ ಅತ್ಯಂತ ಪ್ರಮುಖ ಆಹಾರ ಬೆಳೆ ಆಗಿದ್ದು, ವಿಶ್ವದ ಶೇ. 50 ಕ್ಕಿಂತ ಹೆಚ್ಚು ಜನರಿಗೆ ಮುಖ್ಯ ಆಹಾರವಾಗಿದೆ. ಭಾರತದಲ್ಲಿ ಸುಮಾರು 46 ಮಿಲಿಯನ್ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯಲಾಗುತ್ತಿದ್ದು, ವಾರ್ಷಿಕ ಉತ್ಪಾದನೆ ಸುಮಾರು 130 ಮಿಲಿಯನ್ ಟನ್‌ಗಳಷ್ಟಿದೆ. ನಮ್ಮ ರಾಜ್ಯದಲ್ಲಿಯೂ ಭತ್ತವು ಪ್ರಮುಖ ಆಹಾರ ಬೆಳೆಯಾಗಿದ್ದು, ಮುಂಗಾರು, ಹಿಂಗಾರು ಹಾಗೂ ಬೇಸಿಗೆ ಹಂಗಾಮುಗಳಲ್ಲಿ ಬೆಳೆಯಲಾಗುತ್ತದೆ.

ಆದಾಗ್ಯೂ, ಆಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡಿದ್ದರೂ ರೈತರು ನಿರೀಕ್ಷಿಸಿದ ಮಟ್ಟದ ಇಳುವರಿಯನ್ನು ಪಡೆಯಲು ವಿಫಲರಾಗುತ್ತಿದ್ದಾರೆ. ಇದಕ್ಕೆ ಪ್ರಮುಖ ಕಾರಣಗಳಲ್ಲಿ ಭತ್ತದ ವಿವಿಧ ರೋಗಗಳು ಒಂದಾಗಿದೆ. ಸುಮಾರು ಐವತ್ತಕ್ಕೂ ಹೆಚ್ಚು ರೋಗಗಳು ಭತ್ತ ಬೆಳೆಯನ್ನು ಬಾಧಿಸುತ್ತವೆ. ಈ ರೋಗಗಳನ್ನು ಸಮಯಕ್ಕೆ ಸರಿಯಾಗಿ ಗುರುತಿಸಿ ಸಮರ್ಪಕ ನಿರ್ವಹಣೆ ಕೈಗೊಳ್ಳುವುದು ಅತ್ಯಂತ ಅಗತ್ಯ.

1. ಬೆಂಕಿ ರೋಗ (Blast Disease)

ಪೈರಿಕ್ಯುಲೇರಿಯಾ ಒರೈಜ ಎಂಬ ಶಿಲೀಂಧ್ರದಿಂದ ಉಂಟಾಗುವ ಈ ರೋಗವು ಅತ್ಯಂತ ಅಪಾಯಕಾರಿಯಾಗಿದೆ. ಮಲೆನಾಡು ಪ್ರದೇಶಗಳಲ್ಲಿ ಹೆಚ್ಚು ಕಂಡುಬರುತ್ತದೆ. ಸಸಿಯ ಎಲ್ಲಾ ಭಾಗಗಳನ್ನು ಬಾಧಿಸುವ ಈ ರೋಗವು ಬೀಜ ಬಿತ್ತನೆಯಿಂದ ತೆನೆ ಕಟ್ಟುವ ಹಂತದವರೆಗೂ ಹಾನಿ ಉಂಟುಮಾಡುತ್ತದೆ.

ಲಕ್ಷಣಗಳು: ಎಲೆಗಳ ಮೇಲೆ ವಜ್ರಾಕಾರದ ಕಂದು ಚುಕ್ಕೆಗಳು ಕಾಣಿಸಿಕೊಂಡು ಮಧ್ಯಭಾಗ ಬೂದು ಬಣ್ಣವಾಗಿರುತ್ತದೆ. ರೋಗ ತೀವ್ರವಾದಾಗ ಸಸಿಗಳು ಸುಟ್ಟಂತೆ ಕಾಣಿಸುತ್ತವೆ. ತೆನೆ ಕುತ್ತಿಗೆ ಭಾಗಕ್ಕೆ ಸೋಂಕು ತಗುಲಿದರೆ ತೆನೆ ಮುರಿದು ಕಾಳುಗಳು ಜೋಳ್ಳಾಗುತ್ತವೆ.

ನಿರ್ವಹಣೆ: ರೋಗ ನಿರೋಧಕ ತಳಿಗಳ ಬಳಕೆ, ಸಮತೋಲನ ಗೊಬ್ಬರ ನಿರ್ವಹಣೆ ಮತ್ತು ಬೀಜೋಪಚಾರ (ಕಾರ್ಬೆಂಡೈಜಿಂ ಅಥವಾ ಟ್ರೈಸೈಕ್ಲೋಜೋಲ್ 2 ಗ್ರಾಂ/ಕೆ.ಜಿ.) ಮಾಡುವುದು. ಅಗತ್ಯವಿದ್ದರೆ ಕಾರ್ಬೆಂಡೈಜಿಂ (1 ಗ್ರಾಂ/ಲೀ.) ಅಥವಾ ಟ್ರೈಸೈಕ್ಲೋಜೋಲ್ (0.6 ಗ್ರಾಂ/ಲೀ.) ಸಿಂಪಡಿಸಬೇಕು.

2. ಕಂದು ಎಲೆ ಚುಕ್ಕೆ ರೋಗ (Brown Leaf Spot)

ಹೆಲ್ಮಿಂಥೋಸ್ಪೋರಿಯಂ ಒರೈಜೆ ಶಿಲೀಂಧ್ರದಿಂದ ಉಂಟಾಗುತ್ತದೆ.

ಲಕ್ಷಣಗಳು: ಎಲೆಗಳ ಮೇಲೆ ದುಂಡಾದ ಕಂದು ಚುಕ್ಕೆಗಳು ಕಾಣಿಸಿ ಮಧ್ಯಭಾಗ ಬಿಳಿಯಾಗಿರುತ್ತದೆ. ತೀವ್ರ ಬಾಧೆಯಲ್ಲಿ ಎಲೆಗಳು ಒಣಗುತ್ತವೆ ಮತ್ತು ಹೂ ಬಿಡುವ ಸಮಯದಲ್ಲಿ ಸೋಂಕು ತಗುಲಿದರೆ ಕಾಳುಗಳು ಜೋಳ್ಳಾಗುತ್ತವೆ.

ನಿರ್ವಹಣೆ: ರೋಗರಹಿತ ಬೀಜ ಬಳಕೆ ಮತ್ತು ಮ್ಯಾಂಕೋಜೆಬ್ (2–2.5 ಗ್ರಾಂ/ಲೀ.) ಅಥವಾ ಕಾರ್ಬೆಂಡೈಜಿಂ (1 ಗ್ರಾಂ/ಲೀ.) ಸಿಂಪಡಣೆ.

3. ಎಲೆ ಕವಚ ರೋಗ (Sheath Blight)

ರೈಜೋಕ್ಟೋನಿಯಾ ಸೋಲಾನಿ ಶಿಲೀಂಧ್ರದಿಂದ ಉಂಟಾಗುತ್ತದೆ.

ಲಕ್ಷಣಗಳು: ಎಲೆ ಕವಚದ ಮೇಲೆ ಬೂದು ಬಣ್ಣದ ಅನಿಯಮಿತ ಮಚ್ಚೆಗಳು ಕಾಣಿಸುತ್ತವೆ. ಹೆಚ್ಚಿನ ತೇವಾಂಶದಲ್ಲಿ ರೋಗ ವೇಗವಾಗಿ ಹರಡುತ್ತದೆ.

ನಿಯಂತ್ರಣ: ಗದ್ದೆಯಲ್ಲಿ ನೀರನ್ನು ನಿಯಂತ್ರಿಸಿ, ಪ್ರೊಪಿಕೋನಜೋಲ್ (1 ಮಿ.ಲೀ./ಲೀ.) ಅಥವಾ ಹೆಕ್ಸಾಕೊನಜೋಲ್ (2 ಮಿ.ಲೀ./ಲೀ.) ಸಿಂಪಡಿಸಬೇಕು.

4. ತೆನೆ ಕವಚ ಕೊಳೆ ರೋಗ (Sheath Rot)

ಸಾರೋಕ್ಲಾಡಿಯಂ ಒರೈಜೆ ಶಿಲೀಂಧ್ರದಿಂದ ಉಂಟಾಗುತ್ತದೆ.

ಲಕ್ಷಣಗಳು: ತೆನೆ ಹೊರಬರುವ ಸಮಯದಲ್ಲಿ ಕವಚದ ಮೇಲೆ ಕಂದು ಮಚ್ಚೆಗಳು ಕಾಣಿಸಿ, ತೆನೆ ಸಂಪೂರ್ಣವಾಗಿ ಹೊರಬರದೇ ಇರಬಹುದು.

ನಿರ್ವಹಣೆ: ಸಮತೋಲನ ಗೊಬ್ಬರ ಬಳಕೆ ಹಾಗೂ ಅಗತ್ಯವಿದ್ದರೆ ಶಿಲೀಂಧ್ರನಾಶಕ ಸಿಂಪಡಣೆ.

5. ಊದು ಬತ್ತಿ ರೋಗ (Udbatta Disease)

ಎಫಿಲಿಸ್ ಒರೈಜೆ ಶಿಲೀಂಧ್ರದಿಂದ ಉಂಟಾಗುತ್ತದೆ.

ಲಕ್ಷಣಗಳು: ತೆನೆ ಊದುಬತ್ತಿಯಂತೆ ಉದ್ದವಾಗಿ ಕಾಣಿಸಿಕೊಂಡು ಕಾಳುಗಳಿಲ್ಲದೆ ಇರುತ್ತದೆ.

ನಿರ್ವಹಣೆ: ರೋಗರಹಿತ ಬೀಜ ಬಳಕೆ ಮತ್ತು ಕಾರ್ಬೆಂಡೈಜಿಂ (4 ಗ್ರಾಂ/ಕೆ.ಜಿ.) ಬೀಜೋಪಚಾರ.

6. ಹಸಿರು ಕಾಡಿಗೆ ರೋಗ (False Smut)

ಯುಸ್ಟಿಲಾಗೋನಾಯ್ಡಿಯ ವೈರೆನ್ಸ್ ರೋಗಾಣುವಿನಿಂದ ಉಂಟಾಗುತ್ತದೆ.

ಲಕ್ಷಣಗಳು: ಕೆಲವು ಕಾಳುಗಳು ಹಳದಿ ಅಥವಾ ಹಸಿರು ಬಣ್ಣದ ದೊಡ್ಡ ಗುಂಡಿಗಳಾಗಿ ಕಾಣಿಸುತ್ತವೆ.

ನಿಯಂತ್ರಣ: ತೆನೆ ಹೊಡೆಯುವಾಗ ಕಾರ್ಬೆಂಡೈಜಿಂ (1 ಗ್ರಾಂ/ಲೀ.) ಅಥವಾ ತಾಮ್ರದ ಆಕ್ಸಿಕ್ಲೋರೈಡ್ (2.5 ಗ್ರಾಂ/ಲೀ.) ಸಿಂಪಡಣೆ. ಬೀಜವನ್ನು 52°ಸೆ. ಬಿಸಿ ನೀರಿನಲ್ಲಿ 10 ನಿಮಿಷ ನೆನೆಸಿ ಬಿತ್ತನೆ ಮಾಡುವುದು.

7.ದುಂಡಾಣು ಅಂಗಮಾರಿ ರೋಗ (Bacterial Leaf Blight)

ಈ ರೋಗವು ಝಾಂತೋಮೋನಾಸ್ ಒರೈಜೆ ಎಂಬ ಬ್ಯಾಕ್ಟೀರಿಯಾದಿಂದ ಉಂಟಾಗುತ್ತದೆ. ಸಾಮಾನ್ಯವಾಗಿ ಎಲೆಗಳ ತುದಿಯಿಂದ ಹಳದಿ ಬಣ್ಣ ಕಾಣಿಸಿಕೊಳ್ಳಲು ಪ್ರಾರಂಭವಾಗಿ ಕ್ರಮೇಣ ಎಲೆಯ ಪೂರ್ಣ ಭಾಗಕ್ಕೆ ಹರಡುತ್ತದೆ. ನಂತರ ಎಲೆಗಳು ಒಣಗಿ ಸುಟ್ಟಂತೆ ಕಾಣಿಸುತ್ತವೆ. ರೋಗ ತೀವ್ರವಾದಲ್ಲಿ ಇಳುವರಿಯಲ್ಲಿ ಗಣನೀಯ ಕುಂಠಿತತೆ ಉಂಟಾಗುತ್ತದೆ.

ನಿರ್ವಹಣೆ: ಸಮತೋಲನ ಗೊಬ್ಬರ ಬಳಕೆ ಮಾಡುವುದು, ವಿಶೇಷವಾಗಿ ಅಧಿಕ ಪ್ರಮಾಣದ ಸಾರಜನಕ ಬಳಕೆಯನ್ನು ತಪ್ಪಿಸುವುದು ಅಗತ್ಯ. ರೋಗದ ಲಕ್ಷಣಗಳು ಕಂಡುಬಂದ ತಕ್ಷಣ ಶಿಫಾರಸ್ಸಿನ ಔಷಧಗಳನ್ನು ಕೃಷಿ ಇಲಾಖೆಯ ಸಲಹೆ ಮೇರೆಗೆ ಬಳಸುವುದು ಉತ್ತಮ.

ಸಾರಾಂಶ

ಭತ್ತದ ರೋಗಗಳು ಇಳುವರಿಯಲ್ಲಿ ದೊಡ್ಡ ಪ್ರಮಾಣದ ನಷ್ಟ ಉಂಟುಮಾಡುತ್ತವೆ. ಆದರೆ ರೋಗರಹಿತ ಬೀಜ, ಸಮತೋಲನ ಗೊಬ್ಬರ, ತೋಟದ ಸ್ವಚ್ಛತೆ ಮತ್ತು ಶಿಫಾರಸ್ಸಿನ ಶಿಲೀಂಧ್ರನಾಶಕ ಬಳಕೆಯಿಂದ ರೋಗಗಳನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಬಹುದು. ಸಮಗ್ರ ನಿರ್ವಹಣಾ ಕ್ರಮಗಳನ್ನು ಅನುಸರಿಸಿದರೆ ಉತ್ತಮ ಗುಣಮಟ್ಟದ ಹಾಗೂ ಹೆಚ್ಚಿನ ಇಳುವರಿ ಪಡೆಯಲು ಸಾಧ್ಯ.

Facebook
WhatsApp
Twitter
LinkedIn
Government of Karnataka