- ಕಾಂತರಾಜ್ ವೈ., ಕೊಲ್ಲೋತ್ತರ ತಂತ್ರಜ್ಞಾನ ವಿಭಾಗ, ತೋಟಗಾರಿಕೆ ಮಹಾವಿದ್ಯಾಲಯ, ಮೂಡಿಗೆರೆ
ದ್ರಾಕ್ಷಿ, ಮೋಸಂಬಿ, ನಿಂಬೆ, ಸ್ಟ್ರಾಬೆರಿ, ದಾಳಿಂಬೆ ಹಾಗೂ ಕಲ್ಲಂಗಡಿ ಹಣ್ಣುಗಳನ್ನು ಸಂಪೂರ್ಣ ಮಾಗಿದ ನಂತರ ಕೊಯ್ತು ಮಾಡಬೇಕು. ಕೊಯ್ದು ಮಾಡಿದ ನಂತರ ಅವು ಹಣ್ಣಾಗುವುದಿಲ್ಲ. ಆದರೆ ಮಾವು, ಬಾಳೆ, ಪಪಾಯ, ಚಿಕ್ಕು ಮುಂತಾದವು ಪೂರ್ಣ ಬಲಿತಾಗ ಕೊಯ್ದು ಮಾಡಬೇಕು. ಅವು ನಂತರ ಮಾಗುತ್ತವೆ. ಸರಿಯಾದ ಉಷ್ಣತೆ ಮತ್ತು ತೇವಾಂಶಗಳು ಹಣ್ಣು ಬೇಗ ಮಾಗುವಂತೆ ಮಾಡುತ್ತವೆ. ಸರಿಯಾಗಿ ಹಣ್ಣಾಗಲು ಉಷ್ಣತಾಮಾನವು 24-30 ಸೆ. ಇರಬೇಕು. ಸಾಮಾನ್ಯವಾಗಿ ಮಾವನ್ನು ಭತ್ತದ ಹುಲ್ಲಿನಲ್ಲಿ ಮಾಗುವುದಕ್ಕೆ ಇಡುತ್ತಾರೆ. ಬಾಳೆ ಹಣ್ಣುಗಳನ್ನು ಪ್ರತ್ಯೇಕ ಕೋಣೆಯಲ್ಲಿ ಮಾಗುವುದಕ್ಕೆ ಇಡುತ್ತಾರೆ. ಅಲ್ಲಿ ಕಟ್ಟಿಗೆಯನ್ನು ಸುಟ್ಟು ಹೊಗೆಯಾಡಿಸುತ್ತಾರೆ. ಈ ಹೊಗೆಯಲ್ಲಿ ಇಥಿಲಿನ್ ಅನಿಲ ಇರುವುದರಿಂದ ಹಣ್ಣು ಮಾಗುವುದಕ್ಕೆ ನೆರವಾಗುತ್ತದೆ. ಹಣ್ಣು ಮಾಗಿಸುವುದನ್ನು ಇಥಿಲಿನ್ ಉಪಚಾರದಿಂದ ತೀವ್ರಗೊಳಿಸಬಹುದು. ಮಾವು, ಬಾಳೆ, ಚಿಕ್ಕು ಹಾಗೂ ಅನಾನಸ್ ಹಣ್ಣುಗಳನ್ನು ಎಥಿಲಿನ್ ದ್ರಾವಣದಲ್ಲಿ ಅದ್ದಬೇಕು. ಇಲ್ಲವೇ ಇಥಿಲಿನ್ ಅನಿಲದಲ್ಲಿ ಇಡಬೇಕು. ಇದರಿಂದ ಹಣ್ಣು ಬೇಗನೆ ಹಾಗೂ ಒಂದೇ ಸಮಯಕ್ಕೆ ಮಾಗುತ್ತವೆ.
ಹಣ್ಣುಗಳನ್ನು ಕೃತಕವಾಗಿ ಮಾಗಿಸುವಿಕೆ
ಕಟಾವಾದ ತಕ್ಷಣ ಹಣ್ಣುಗಳು ತಿನ್ನಲು ಬರುವುದಿಲ್ಲ. ಪಕ್ವಕ್ಕೆ ಬಂದಂತಹ ಈ ಹಣ್ಣುಗಳನ್ನು ಮಾಗಿಸಬೇಕಾಗುತ್ತದೆ. ಈ ಮಾಗುವಿಕೆ ಕ್ರಿಯೆಯನ್ನು ಮಾಗಿದ ಹಣ್ಣುಗಳನ್ನು ಕಾಯಿಗಳ ಮೇಲೆ ಇಡುವುದರ ಮೂಲಕ ಅಥವಾ ಪಕ್ವಕ್ಕೆ ಬಂದ ಕಾಯಿಗಳನ್ನು ಗಾಳಿಯಾಡದ ಕೋಣೆಯಲ್ಲಿಟ್ಟು ಹೊಗೆ ಕೊಡುವುದು ರೂಢಿಯಲ್ಲಿದೆ. ಈ ಪದ್ಧತಿಗಳಲ್ಲಿ ಮಾಗಿಸಿದ ಹಣ್ಣುಗಳು ತಿನ್ನಲು ರುಚಿಕರವಿದ್ದರೂ ಹಲವು ಅನಾನುಕೂಲಗಳಿವೆ.
ಅವುಗಳಲ್ಲಿ ಮುಖ್ಯವಾಗಿ
- ಕಾಯಿಗಳು ಹಣ್ಣಾಗಬೇಕೆಂದರೆ ಹೆಚ್ಚು ಕಾಲಾವಕಾಶಬೇಕು (ಕನಿಷ್ಠ 8-10 ದಿವಸ)
- ತೂಕದಲ್ಲಿ ಕಡಿಮೆಯಾಗುತ್ತದೆ (ಶೇ. 25ಕ್ಕೂ ಹೆಚ್ಚು)
- ಒಂದೇ ಬಾರಿಗೆ ಮಾಗದೆ ನಿಧಾನವಾಗಿ ಹಣ್ಣಾಗುತ್ತವೆ.
ಬದಲಾಗುತ್ತಿರುವ ಮಾರುಕಟ್ಟೆ ಸನ್ನಿವೇಶದಲ್ಲಿ ಆಕರ್ಷಕ ಹಣ್ಣುಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಹಣ್ಣುಗಳನ್ನು ದೂರದ ಮಾರುಕಟ್ಟೆಗೆ ಸರಬರಾಜು ಮಾಡಲು ಶೀಘ್ರವಾಗಿ ಮಾಗಿಸಬೇಕಾಗುತ್ತದೆ. ಈ ದಿಸೆಯಲ್ಲಿ ಇಂದು ಬಹುತೇಕ ವ್ಯಾಪಾರಸ್ಥರು ವಿಷಪೂರಿತ ಕ್ಯಾಲ್ಸಿಯಂ ಕಾರ್ಬೈಡ್ನಂತಹ ರಾಸಾಯನಿಕ ವಸ್ತುವನ್ನು ಕೃತಕವಾಗಿ ಹಣ್ಣು ಮಾಗಲು ಉಪಯೋಗಿಸುತ್ತಿದ್ದಾರೆ. ಭಾರತದಲ್ಲಿ ಹೆಚ್ಚಿನ ಹಣ್ಣಿನ ವ್ಯಾಪಾರಿಗಳು ಕ್ಯಾಲ್ಸಿಯಂ ಕಾರ್ಬೈಡ್ನಿಂದ ಕೃತಕವಾಗಿ ಹಣ್ಣುಗಳನ್ನು ಮಾಗಿಸುತ್ತಾರೆ. ಈ ಕ್ಯಾಲ್ಸಿಯಂ ಕಾರ್ಬೈಡ್ ಸಾಮಾನ್ಯವಾಗಿ ಹಣ್ಣಿನಲ್ಲಿರುವ ತೇವಾಂಶದ ಜೊತೆಗೆ ವರ್ತಿಸಿ ಅಸಿಟಲಿನ್ ಎಂಬ ಅನಿಲವನ್ನು ಬಿಡುಗಡೆ ಮಾಡುವ ಜೊತೆಗೆ ಆರ್ಸೆನಿಕ್ ಮತ್ತು ರಂಜಕದ ಅಂಶ ಹೊಂದಿರುತ್ತದೆ. ಈ ರಾಸಾಯನಿಕಗಳು ನರಮಂಡಲದ ಮೇಲೆ ಪರಿಣಾಮ ಬೀರುವುದಲ್ಲದೆ, ಅಂತಹ ಹಣ್ಣುಗಳನ್ನು ತಿನ್ನುವುದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಿ ಹೊಟ್ಟೆ ಉರಿ, ವಾಂತಿ ಭೇದಿ, ಎದೆ ನೋವು ಮುಂತಾದ ಕಾಯಿಲೆಗಳು ಸಂಭವಿಸುತ್ತವೆ.
ಆದ ಕಾರಣ ಕ್ಯಾಲ್ಸಿಯಂ ಕಾರ್ಬೈಡ್ 1954ರಲ್ಲಿ ಭಾರತ ಸರ್ಕಾರವು ಆಹಾರ ಕಲಬೆರಕೆ ಕಾನೂನಿನ ಅನ್ವಯ ನಿಷೇಧಿಸಿದೆ. ಈ ಕಾಯ್ದೆ 440 ಅನ್ವಯ ಯಾರಾದರು ಹಣ್ಣುಗಳನ್ನು ಮಾಗಿಸಲು ಕ್ಯಾಲ್ಸಿಯಂ ಕಾರ್ಬೈಡ್ ರಾಸಾಯನಿಕ ಉಪಯೋಗಿಸಿದರೆ ಅವರಿಗೆ 1000 ರೂ. ದಂಡ ಮತ್ತು 3 ವರ್ಷ ಸಜೆ ವಿಧಿಸಲಾಗುತ್ತದೆ.
ಕೃತಕವಾಗಿ ಹಣ್ಣು ಮಾಗಲು ಆಹಾರ ಮತ್ತು ಔಷಧ ನಿಯಂತ್ರಣಾಲಯವು ಪರವಾನಗಿ ನೀಡಿರುವ ಇಥಿಲಿನ್ ಬಳಸುವುದು ಸೂಕ್ತ. ಇಥಿಲಿನ್ ಒಂದು ಸಸ್ಯವರ್ಧಕವಾಗಿದ್ದು, ಇದು ಎಥೋಫಾನ್, ಎಸ್ರೇಲ್, ಚಿಥೇಲ್ ಇತ್ಯಾದಿ ಹೆಸರುಗಳಲ್ಲಿ ದೊರೆಯುತ್ತದೆ. ಇಥಿಲಿನ್ ಇದು ನೈಸರ್ಗಿಕವಾಗಿ ಹಣ್ಣುಗಳಲ್ಲೇ ಇರುವಂಥದ್ದು. ಆದರೆ ಇದು ಕಡಿಮೆ ಪ್ರಮಾಣದಲ್ಲಿ ಇರುವುದರಿಂದ ಮಾಗುವಿಕೆ ಕ್ರಿಯೆ ಸಹಜವಾಗಿ ನಿಧಾನವಾಗಿರುತ್ತದೆ. ಶೀಘ್ರ ಮಾಗಿಸಬೇಕಾದರೆ ಕೃತಕವಾಗಿ ಹೆಚ್ಚುವರಿ ಇಥಿಲಿನ್ ಕೊಡಬೇಕಾಗುತ್ತದೆ. ಇದರಲ್ಲಿ ಹಲವು ವಿಧಾನಗಳಿವೆ.
ಸಣ್ಣ ಪ್ರಮಾಣದ ವ್ಯಾಪಾರಸ್ಥರು ಮತ್ತು ರೈತರು ಅನುಸರಿಸಬಹುದಾದ ವಿಧಾನಗಳು
- ಇಫೈಲ್ ದ್ರಾವಣದ ಆವಿಯಿಂದ ಹಣ್ಣು ಮಾಡುವ ವಿಧಾನ: ಈ ಪದ್ಧತಿಯಲ್ಲಿ ಕಿಟಕಿ, ಬಾಗಿಲು ಮುಚ್ಚಿದ ಗಾಳಿಯಾಡದ ಒಂದು ಚಿಕ್ಕ ಕೊಠಡಿಯಲ್ಲಿ ಕಾಯಿಗಳನ್ನು ಇಡಬೇಕು. ನಂತರ ಒಂದು ಸಣ್ಣ ಪಾತ್ರೆ ತೆಗೆದುಕೊಂಡು ಅದರಲ್ಲಿ 5 ಲೀ. ನೀರು ಹಾಕಿ ಅದಕ್ಕೆ 10 ಮಿ.ಲೀ. ಇಥೆಲ್ ಮತ್ತು 2 ಗ್ರಾಂ ಸೋಡಿಯಂ ಹೈಡ್ರಾಕ್ಸೆಡ್ ಬೆರಸಿ ಕೊಠಡಿಯ ಯಾವುದಾದರೂ ಒಂದು ಮೂಲೆಯಲ್ಲಿ ಇಡಬೇಕು. 12-24 ಗಂಟೆಗಳ ಅವಧಿಯಲ್ಲಿ ಕಾಯಿಗಳು ಮಾಗಲು ಪ್ರಾರಂಭವಾಗುತ್ತವೆ. ಇಲ್ಲಿ ಇಥಿಲಿನ್ అనిల ಬಿಡುಗಡೆ ಆಗುವುದರಿಂದ ಮಾಗುವಿಕೆ ಕ್ರಿಯೆ ತ್ವರಿತವಾಗುವುದಲ್ಲದೆ ಇದು ಸುಲಭವಾದ ಮತ್ತು ಅಪಾಯಕರವಲ್ಲದ ವಿಧಾನವಾಗಿದೆ. ಈ ವಿಧಾನದಿಂದ ಎರಡು ಟನ್ನಷ್ಟು ಹಣ್ಣು ಮಾಡಬಹುದು.
- ಇಥಿಲಿನ್ ಕ್ಯಾನ್ಗಳನ್ನು ಬಳಸುವ ವಿಧಾನ: ಈ ವಿಧಾನದಲ್ಲಿ ಕಾಯಿಗಳನ್ನು ಕೊಠಡಿ ಅಥವಾ ಪಾಲಿ ಚೇಂಬರ್ನಲ್ಲಿಟ್ಟು ಇಥಿಲಿನ್ ಗ್ಯಾಸ್ ತುಂಬಿದ ಚಿಕ್ಕ ಕ್ಯಾನ್ಗಳನ್ನು ಬಳಸಿ ಹಣ್ಣು ಮಾಡಬಹುದು. ಕಾಯಿಗಳನ್ನು ಕೊಠಡಿಯಲ್ಲಿ ಕ್ರೇಟ್ಗಳಲ್ಲಿ ಇಟ್ಟು, 2.5 ಲೀ. ನಪ್ಪಿರುವ ಇಥಿಲಿನ್ ಕ್ಯಾನಿನ ಮುಚ್ಚಳ ತೆಗೆದು ಕೊಠಡಿಯನ್ನು ಮುಚ್ಚಿ ಭದ್ರಪಡಿಸಬೇಕು. 24 ಗಂಟೆ ನಂತರ ಕಾಯಿಗಳನ್ನು ಹೊರಗಡೆ ತೆಗೆದರೆ ಇಥಿಲಿನ್ಗ್ಯಾಸ್ ಬಿಡುಗಡೆಯಾಗುವುದರಿಂದ ಕಾಯಿಗಳು 2 ರಿಂದ 3 ದಿನಗಳಲ್ಲಿ ಮಾಗುತ್ತವೆ. ಇಥಿಲಿನ್ಕ್ಯಾನಿನ ಬೆಲೆ ಅಂದಾಜು 150 ರೂ ಇದ್ದು, ಇದು 2 ಟನ್ ಹಣ್ಣುಗಳಿಗೆ ಸಾಕಾಗುತ್ತದೆ. ಈ ಪದ್ಧತಿಯಲ್ಲಿ ಮಾಗಿದ ಹಣ್ಣುಗಳ ಗುಣಮಟ್ಟ ಚೆನ್ನಾಗಿದ್ದು, ಆಕರ್ಷಕ ಬಣ್ಣ ಹೊಂದಿದ್ದು, ಆರೋಗ್ಯಕ್ಕೆ ಯಾವುದೇ ಹಾನಿಯಿಲ್ಲ. ಈ ಪದ್ಧತಿಯಲ್ಲಿ ಹಣ್ಣು ಮಾಡುವುದು ಸರಳ ಮತ್ತು ಕಡಿಮೆ ಖರ್ಚಿನದ್ದು, ಹಣ್ಣುಗಳ ಪ್ರಮಾಣ ಮತ್ತು ಛೇಂಬರ್ನ ಗಾತ್ರದ ಆಧಾರದ ಮೇಲೆ ಇಥೈಲ್ ಪ್ರಮಾಣವನ್ನು ನಿರ್ಧರಿಸಬೇಕು (1 ಘ.ಮೀ.ಗೆ 2 ಮಿ.ಲೀ.)
ಮಧ್ಯಮದಿಂದ ದೊಡ್ಡ ಪ್ರಮಾಣದಲ್ಲಿ ಹಣ್ಣು ಮಾಗಿಸುವಿಕೆ
ದೊಡ್ಡ ಪ್ರಮಾಣದಲ್ಲಿ ಕೃತಕವಾಗಿ ಹಣ್ಣು ಮಾಗಿಸಬೇಕಾದರೆ ಹಣ್ಣು ಮಾಗಿಸುವ ಘಟಕ (ರೈಪನಿಂಗ್ ಚೇಂಬರ್) ಗಳನ್ನು ನಿರ್ಮಿಸಿಕೊಳ್ಳಬೇಕು. ಈ ಘಟಕಗಳಲ್ಲಿ ಅಟೊಮ್ಯಾಟಿಕ್ ವ್ಯವಸ್ಥೆ ಇದ್ದು, ಇಲ್ಲಿ ಇಥಿಲಿನ್ ಗ್ಯಾಸ್ ಪ್ರಮಾಣ, ಇಂಗಾಲದ-ಡೈ-ಆಕ್ಸೆಡ್, ಉಷ್ಣಾಂಶ ಮತ್ತು ತೇವಾಂಶ ನಿಯಂತ್ರಣ ಮಾಡಬಹುದಾಗಿರುತ್ತದೆ. 2 ರಿಂದ 150 ಟನ್ ಸಾಮರ್ಥ್ಯದ ಚೇಂಬರ್ಗಳನ್ನು ನಿರ್ಮಿಸಿಕೊಳ್ಳಬಹುದು. ಅಳತೆಗನುಸಾರವಾಗಿ ಇವುಗಳ ಬೆಲೆಯು ರೂ. 5 ರಿಂದ 20 ಲಕ್ಷದವರೆಗೂ ಇರುತ್ತದೆ. ಇವುಗಳಲ್ಲಿ ಹಣ್ಣು ಮಾಡಲು ಇಥಿಲಿನ್, ಗ್ಯಾಸ್ ಮತ್ತು ಎಥೆನಾಲ್ ರೂಪದಲ್ಲಿ ದೊರೆಯುತ್ತದೆ. ಗ್ಯಾಸ್ ಸಿಲಿಂಡರ್ಗಳಾದಲ್ಲಿ ನೇರವಾಗಿ ಬಳಸಬಹುದು. ಆದರೆ ಗ್ಯಾಸ್ ಬೆಲೆ ಸ್ವಲ್ಪ ದುಬಾರಿ. ಪ್ರತಿ ಕೆ.ಜಿ. ಗ್ಯಾಸ್ಗೆ 100 ರೂಪಾಯಿ ತಗಲುತ್ತದೆ. ಇದು ಒಂದು ಟನ್ ಹಣ್ಣು ಮಾಡಲು ಸಾಕಾಗುತ್ತದೆ. ಅಂದರೆ ಒಂದು ಕೆ.ಜಿ. ಹಣ್ಣು ಮಾಡಿಸಲು 10 ಪೈಸೆ ಖರ್ಚು ತಗಲುತ್ತದೆ. ಆದರೆ ಅನಾನುಕೂಲತೆಯೆಂದರೆ ಈ ಸಿಲಿಂಡರ್ಗಳು ಎಲ್ಲಕಡೆ ದೊರೆಯುವುದಿಲ್ಲ ಮತ್ತು ಸಾಗಾಣಿಕೆ ಮಾಡುವುದು ಸಹ ಕಷ್ಟ. ಆದಕಾರಣ ಇದರ ಬದಲಾಗಿ ಇಥಿಲಿನ್ ಜನರೇಟರ್ಗಳನ್ನು ಬಳಸುವುದು ಸೂಕ್ತ. ಈ ಜನರೇಟರ್ನ ಬೆಲೆ ರೂ.20 ರಿಂದ 30 ಸಾವಿರ ಇದ್ದು, ದೀರ್ಘಕಾಲ ಬಾಳಿಕೆ ಬರುತ್ತದೆ. ಈ ಜನರೇಟರ್ನಲ್ಲಿ ಇಥೆನಾಲ್ ಹಾಕಿದರೆ ಪ್ರಚೋದನೆಯ ಸಹಾಯದಿಂದ ಇಥಿಲಿನ್ ಗ್ಯಾಸ್ ಆಗಿ ಪರಿವರ್ತನೆಯಾಗಿ ಮಾಗುವಿಕೆ ಕ್ರಿಯೆ ತ್ವರಿತವಾಗುತ್ತದೆ. ಎಥೆನಾಲ್ ಬೆಲೆ ಅರ್ಧ ಲೀಟರ್ಗೆ ರೂ.200 ಆಗುತ್ತದೆ. ಇದರಿಂದ 30 ರಿಂದ 40 ಟನ್ ಹಣ್ಣು ಮಾಡಬಹುದು. ಅಂದರೆ ಪ್ರತಿ ಕೆ.ಜಿ. ಹಣ್ಣು ಮಾಡಲು ಒಂದು ಪೈಸೆಗಿಂತಲೂ ಕಡಿಮೆ ಖರ್ಚಾಗುತ್ತದೆ.
ಈ ವಿಧಾನದಲ್ಲಿ ಹಣ್ಣು ಮಾಡಲು, ಕಟಾವು ಮಾಡಿದ ನಂತರ ಹಣ್ಣುಗಳನ್ನು ಶೇ. 0.2 (2 ಗ್ರಾಂ ಪ್ರತಿ ಲೀಟರ್ ನೀರಿಗೆ) ಕಾರ್ಬೆಂಡೈಜಿಮ್ನಿಂದ ಉಪಚಾರ ಮಾಡಬೇಕು. ಆಮೇಲೆ ಪ್ರಿಕೂಲಿಂಗ್ ಚೇಂಬರ್ನಲ್ಲಿ 18 ಸೆಂ. ಉಷ್ಣಾಂಶದಲ್ಲಿ 4 ಗಂಟೆಗಳ ಕಾಲ ಇಡಬೇಕು. ನಂತರ ರೈಪನಿಂಗ್ ಚೇಂಬರ್ನಲ್ಲಿಟ್ಟು 18 ಸೆಂ. ಉಷ್ಣಾಂಶ ಮತ್ತು ಶೇ. 90 ಆರ್ದತೆಯೊಂದಿಗೆ 250 ರಿಂದ 300 ಪಿಪಿಎಂ ನಷ್ಟು ಇಥಲೀನ್ ಪ್ರಮಾಣವನ್ನು ಕಾಪಾಡಿಕೊಂಡು 24 ಗಂಟೆಗಳ ಕಾಲ ಉಪಚರಿಸಬೇಕು. 3 ದಿನಗಳಲ್ಲಿ ಕಾಯಿಗಳು ಆಕರ್ಷಕ ಬಣ್ಣ ಮತ್ತು ಸುವಾಸನೆ ಹೊಂದಿ ರುಚಿಕರವಾಗಿರುತ್ತವೆ.
ವಾಣಿಜ್ಯವಾಗಿ ಮಾಗಿಸುವ ಕೊಠಡಿಗಳು ಈ ಕೆಳಗಿನ ಅಂಶಗಳನ್ನು ಒಳಗೊಂಡಿರಬೇಕು
- ಕೊಠಡಿ ಸಾಧ್ಯವಾದಷ್ಟು ಇಥಿಲಿನ್ ನಷ್ಟ ತಡೆಯಲು ಗಾಳಿ ಸಂಚಾರವಾಗದಂತೆ ಬಿಗಿಯಾಗಿ ಇಡಬೇಕು.
- ತಿರುಳು ತಾಪಮಾನವನ್ನು ನಿಯಂತ್ರಿಸಲು ಸಾಕಷ್ಟು ಶೈತ್ಯಕರಣ ಸಾಮರ್ಥ್ಯವನ್ನು ಹೊಂದಿರಬೇಕು.
- ಕೊಠಡಿಯು ತಾಪಮಾನ ನಿರೋಧಕವಾಗಿರಬೇಕು. ತಾಪಮಾನ 20’ಸೆ ಗಿಂತ ಕಡಿಮೆಯಾದಲ್ಲಿ ಚಳಿಹಾನಿ ಉಂಟಾಗುತ್ತದೆ ಹಾಗೂ 22-25ಸೆ ಗಿಂತ ಹೆಚ್ಚಾದರೆ ಉಷ್ಣ ಹಾನಿಯಾಗುತ್ತದೆ. ಅತ್ಯುತ್ತಮ ಮಾಗಿಸುವಿಕೆಗೆ ಆರ್ದತೆಯು 85 ರಿಂದ 95 ಇರಬೇಕು.
- ತಿರುಳು ತಾಪಮಾನ ಕನಿಷ್ಠ 14 ಸೆ. ಇರಬೇಕು. 100 ರಿಂದ 150 ಪಿಪಿಎಮ್ ಎಥಲಿನ್ ಕನಿಷ್ಠ 24 ಗಂಟೆಗಳ ಕಾಲ ಉಪಚರಿಸುವುದು.








