ಮಲ್ಲಿಕಾ ಕೆ. ಮತ್ತು ಸಂಕಲ್ಪ ಸಿ. ಪಿ., ತೋಟಗಾರಿಕೆ ಮಹಾವಿದ್ಯಾಲಯ, ಮೂಡಿಗೆರೆ
ಬೆಳೆಗಳಿಗೆ ಮಣ್ಣು ಮತ್ತು ನೀರು ಅತಿ ಮುಖ್ಯವಾದ ನೈಸರ್ಗಿಕ ಸಂಪನ್ಮೂಲಗಳಾಗಿವೆ. ಮನುಷ್ಯ ತನ್ನ ಎಲ್ಲಾ ದಿನನಿತ್ಯದ ಚಟುವಟಿಕೆಗಳು ಮತ್ತು ಕೃಷಿ ಅವಲಂಬಿತ ಚಟುವಟಿಕೆಗಳಿಗೆ ನೈಸರ್ಗಿಕ ಸಂಪನ್ಮೂಲಗಳ ಮೇಲೆ ಅವಲಂಬನೆ ಹೊಂದಿರುತ್ತಾನೆ. ಈ ನೈಸರ್ಗಿಕ ಸಂಪನ್ಮೂಲಗಳು ಇತ್ತೀಚಿನ ದಿನಗಳಲ್ಲಿ ಕ್ಷೀಣಿಸುತ್ತಿವೆ. ಇದಕ್ಕೆ ಮುಖ್ಯ ಕಾರಣ ಜನಸಂಖ್ಯೆ ಮತ್ತು ಮನುಷ್ಯನ ಅತಿಯಾದ ಆಸೆಯಿಂದ, ಮಣ್ಣಿನ ಸವೆತಕ್ಕೆ ಕಾರಣವಾಗಿದ್ದು, ನೀರು ಅಥವಾ ಗಾಳಿಯ ಪ್ರಭಾವವು ಮಣ್ಣಿನ ಕಣಗಳನ್ನು ಬೇರ್ಪಡಿಸಿದಾಗ ಮತ್ತು ತೆಗೆದುಹಾಕಿದಾಗ, ಮಣ್ಣು ಹದಗೆಡುತ್ತದೆ. ಸವೆತದಿಂದಾಗಿ ಮಣ್ಣಿನ ಫಲವತ್ತತೆ ಕಡಿಮೆಯಾಗಿ, ನೀರಿನ ಗುಣಮಟ್ಟ ಕಳಪೆಯಾಗುತ್ತ ಹೋಗುತ್ತದೆ. ಮಣ್ಣು ಒಂದು ಅಮೂಲ್ಯವಾದ ಸಂಪತ್ತು ಸುಮಾರು 1 ಸೆಂ.ಮೀ. ನಷ್ಟು ಮಣ್ಣು ಉತ್ಪಾದನೆ ಆಗಬೇಕಾದರೆ ಸುಮಾರು 300-1000 ವರ್ಷಗಳು ಬೇಕಾಗುತ್ತದೆ. ಇಂತಹ ಮಣ್ಣು ನಾಶವಾಗಲು ಒಂದು ದಿನ ಸುರಿಯುವ ಮಳೆ ಸಾಕು. ಪ್ರತಿ ವರ್ಷ ಹೆಕ್ಟೇರಿಗೆ 17 ಟನ್ ಸವಕಳಿ ಉಂಟಾಗುತ್ತದೆ.
ಮಣ್ಣಿನ ಸವಕಳಿ ಪ್ರಕಾರಗಳು
- ನೈಸರ್ಗಿಕ ಸವಕಳಿ
ಮಳೆ ನೀರು, ಗಾಳಿ, ಹಿಮ ಇವುಗಳಿಂದ ಭೂಮಿಯ ಮೇಲ್ಬಾಗದ ಸಾರಯುಕ್ತ ಮಣ್ಣು ಕೊಚ್ಚಿಕೊಂಡು, ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಸಾಗಿಹೋಗುತ್ತದೆ. ಮಣ್ಣಿನ ಉತ್ಪಾದನೆ ಮತ್ತು ಸವಕಳಿ ಸಮತೋಲನವಾಗಿದ್ದಾಗ ನೈಸರ್ಗಿಕವಾಗಿ ಭೂಮಿಯ ಫಲವತ್ತತೆಯ ಮೇಲೆ ಯಾವುದೇ ವ್ಯತಿರಿಕ್ತವಾದ ಪರಿಣಾಮ ಬೀರುವುದಿಲ್ಲ.
- ಕೃತಕ ಸವಕಳಿ
ಮನುಷ್ಯ ಭೂಮಿಯ ಮೇಲೆ ಇರುವ ಗಿಡಮರಗಳನ್ನು ಅಂದರೆ ಅರಣ್ಯಗಳನ್ನು ನಾಶ ಮಾಡಿ ಅವೈಜ್ಞಾನಿಕವಾದ ಬೇಸಾಯ ಕ್ರಮಗಳನ್ನು ಕೈಗೊಂಡ ಮೇಲೆ ಭೂಮಿಯ ಸವಕಳಿಯು ಹೆಚ್ಚಾಗಿರುತ್ತದೆ. ಫಲವತ್ತಾದ ಮಣ್ಣು, ನೀರು ಮತ್ತು ಗಾಳಿಯ ಮುಖಾಂತರ ಸವಕಳಿಯಾಗುತ್ತಿದೆ. ಇದರಿಂದ ಭೂಮಿಯು ಫಲವತ್ತತೆ ಕಳೆದುಕೊಂಡು ಬಂಜರಾಗುತ್ತಿದೆ. ಈ ಸವಕಳಿ ಪ್ರಕ್ರಿಯೆಯಲ್ಲಿ ಗಾಳಿ ಮತ್ತು ನೀರು ಮಹತ್ತರವಾದ ಪಾತ್ರವಹಿಸುತ್ತದೆ. ಇವುಗಳು ಮಣ್ಣನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಹೊತ್ತೊಯ್ಯುತ್ತವೆ.
ನೀರಿನಿಂದಾಗುವ ಸವಕಳಿಗಳು
- ಮಣ್ಣು ಸಿಡಿಯುವಿಕೆ ಸವಕಳಿ (Splash erosion)
ಮಳೆಯ ಹನಿಗಳು ಭೂಮಿಗೆ ಬಿದ್ದಾಗ ಮಣ್ಣಿನ ಕಣಗಳು ಒಂದಕ್ಕೊಂದು ಬೇರ್ಪಟ್ಟು ಚದರುತ್ತವೆ. ಈ ಪ್ರತ್ಯೇಕಗೊಂಡ ಕಣಗಳು ಮಣ್ಣಿನ ಮೇಲ್ಬಾಗದಲ್ಲಿ ಪಸರಿಸುತ್ತವೆ. ಈ ಕ್ರಿಯೆಯಿಂದ ಮಣ್ಣಿನ ರಚನೆಯು ನಷ್ಟವಾಗುತ್ತದೆ.
- ತೆಳುಪದರು ಸವಕಳಿ (Sheet erosion)
ಮಳೆಯು ನಿರಂತರವಾಗಿ ಬರುತ್ತಿರುವಾಗ ಈ ಸವಕಳಿಯು ಸಿಡಿಯುವಿಕೆ, ಸವಕಳಿಯ ನಂತರ ಆರಂಭವಾಗುತ್ತದೆ. ಮಣ್ಣಿನಲ್ಲಿ ನೀರನ್ನು ಇಂಗುವ ಸಾಮರ್ಥ್ಯ ಕಡಿಮೆ ಆದ ಮೇಲೆ ಮಳೆಯ ನೀರು ಹರಿಯಲು ಪ್ರಾರಂಭವಾಗುತ್ತದೆ. ಆಗ ನೀರಿನ ಜೊತೆಯಲ್ಲಿ ಮಣ್ಣಿನ ಒಂದೊಂದು ತೆಳುಪದರು ನಿರಂತರವಾಗಿ ಕೊಚ್ಚಿಕೊಂಡು ಹೋಗುತ್ತದೆ. ತೆಳು ಪದರು ಸವಕಳಿ ಪ್ರಕ್ರಿಯೆಯು ಬಹಳ ನಿಧಾನವಾಗಿ ನಡೆಯುತ್ತದೆ ಮತ್ತು ಇದು ಬಹಳ ಅಪಾಯಕಾರಿಯಾದ ಸವಕಳಿ ಇದನ್ನು ಬೇಸಾಯ ಕ್ರಮಗಳಿಂದ ಸರಿಪಡಿಸಬಹುದು.
- ಝರಿ ಅಥವಾ ಸಣ್ಣ ಕೊರಕಲಿನ ಸವಕಳಿ (Rill erosion)
ಈ ಸವಕಳಿಯು ತೆಳುಪದರ ಸವಕಳಿ ನಂತರ ಉಂಟಾಗುತ್ತದೆ. ಬಿದ್ದಂತಹ ಮಳೆಯ ನೀರು ವಿವಿಧ ಭಾಗಗಳಿಂದ ಹರಿದು ನೀರಿನ ಜೊತೆಯಲ್ಲಿ ಮಣ್ಣನ್ನು ಎಳೆದು ತರುತ್ತದೆ. ಆಗ ಅಲ್ಲಲ್ಲಿ ಸಣ್ಣ ಸಣ್ಣ ಕೊರಕಲುಗಳಾಗಿ ಮಾರ್ಪಾಡಾಗುತ್ತದೆ. ಈ ಸವಕಳಿಯನ್ನು ಬೇಸಾಯ ಕ್ರಮಗಳಿಂದ ಸರಿಪಡಿಸಬಹುದು.
- ಬೃಹತ್ ಕೊರಕಲಿನ ಸವಕಳಿ (Gully erosion)
ಝರಿ ಅಥವಾ ಸಣ್ಣ ಕೊರಕಲಿನ ಸವಕಳಿಯು ಆದ ಜಾಗದಲ್ಲಿ ಯಾವುದೇ ಸಂರಕ್ಷಣೆ ಕ್ರಮಕೈಗೊಳ್ಳದಿದ್ದರೆ, ನೀರು ದೊಡ್ಡ ಪ್ರಮಾಣದಲ್ಲಿ ಹರಿದು ಅದರ ಕೊರೆಯುವ ಶಕ್ತಿಯನ್ನು ಹೆಚ್ಚಿಸಿ ದೊಡ್ಡ ದೊಡ್ಡ ಕೊರಕಲಾಗಿ ಮಾರ್ಪಾಡಾಗುತ್ತದೆ. ಈ ಸವಕಳಿಯನ್ನು ತಡೆಯದಿದ್ದರೆ ಕೊರಕಲುಗಳು ದಿನದಿಂದ ದಿನಕ್ಕೆ ಅಗಲ ಮತ್ತು ಆಳವಾಗಿ ಜಮೀನಿನಲ್ಲಿರುವ ಫಲವತ್ತಾದ ಮಣ್ಣು ನಶಿಸಿಹೋಗುತ್ತದೆ.
- ಹಳ್ಳಗಳ ಸವಕಳಿ (Stream bank erosion)
ಈ ಸವಕಳಿಯಲ್ಲಿ ಕೊರಕಲುಗಳು ಅತೀ ಅಗಲ ಮತ್ತು ಆಳವಾಗಿ ಮಾರ್ಪಾಡಾಗಿ ಹಳ್ಳಗಳ ರೂಪದಲ್ಲಿ ನೀರು ಹರಿಯುತ್ತದೆ. ಈ ಸವಕಳಿಯು ಮಣ್ಣಿನ ಸಮೇತ ಅತೀ ವೇಗವಾಗಿ ನದಿ ಮತ್ತು ಸಮುದ್ರವನ್ನು ಸೇರುತ್ತದೆ.
ಮಣ್ಣಿನ ಸವಕಳಿಗೆ ಮುಖ್ಯ ಅಂಶಗಳು
- ಮಳೆ 2. ಇಳುಕಲಿನ ಉದ್ದ ಮತ್ತು ಇಳುಕಲಿನ ಪ್ರಮಾಣ, 3. ಮಣ್ಣಿನ ಪ್ರಕಾರ, 4. ಸಸ್ಯಗಳು
ಸವಕಳಿಯ ಪರಿಣಾಮಗಳು
ಫಲವತ್ತತೆ ಕಡಿಮೆಯಾಗುತ್ತದೆ. ಉತ್ಪಾದನೆ ಮಟ್ಟ ಕುಸಿಯುತ್ತದೆ, ಅಂತರ್ಜಲ ಮಟ್ಟ ಕಡಿಮೆಯಾಗುತ್ತದೆ. ಕೆರೆ, ನದಿ ಮತ್ತು ಜಲಾಶಯಗಳಲ್ಲಿ ಹೂಳು ಅಥವಾ ಗೋಡು ತುಂಬಿಕೊಳ್ಳುವುದು, ನೀರಿನ ನಷ್ಟ ಉಂಟಾಗುತ್ತದೆ. ಪರಿಸರದಲ್ಲಿ ಅಸಮತೋಲನ ಉಂಟಾಗುತ್ತದೆ. ಕೃಷಿ ಮತ್ತು ಕುಡಿಯುವುದಕ್ಕೆ ನೀರಿನ ಸಮಸ್ಯೆ ಉಂಟಾಗುತ್ತದೆ ಕೃಷಿ ಜಮೀನು ಅನುಪಯುಕ್ತವಾಗುತ್ತದೆ.
ಗಾಳಿಯಿಂದಾಗುವ ಸವಕಳಿಗಳು (Wind erosion)
ಗಾಳಿಯಿಂದ ಮಣ್ಣಿನ ಕಣಗಳು ಬೇರ್ಪಡುತ್ತವೆ. ನಂತರ ಗಾಳಿಯಲ್ಲಿ ಸೇರಿಕೊಂಡು ಘರ್ಷಣೆ ಸಾಮರ್ಥ್ಯ ಅಧಿಕವಾಗಿ ಕಣಗಳು ಬೇರ್ಪಡುವ ಸಾಮರ್ಥ್ಯ ಹೆಚ್ಚಾಗುತ್ತದೆ.
ಕಣಗಳ ಚಲಿಸುವ ಕ್ರಿಯೆ (ಕಣಗಳ ಗಾತ್ರಕ್ಕೆ ಅನುಗುಣವಾಗಿ)
- ಕಣಗಳ ಚಲನೆಯಿಂದಾಗುವ ಸವಕಳಿ (Suspension)
ಮಣ್ಣಿನ ಕಣಗಳ ಗಾತ್ರ 0.05 ಮಿ.ಮೀ. ಗಿಂತ ಕಡಿಮೆ ಇದ್ದಾಗ ಕಣಗಳು ಗಾಳಿಯಲ್ಲಿ ತೇಲುತ್ತಾ ಬಹುದೂರ ಸಾಗುತ್ತವೆ. ಗಾಳಿ ಸ್ಥಬ್ಧವಾದೊಡನೆ ಕಣಗಳು ನೆಲಕ್ಕೆ ಬೀಳುತ್ತವೆ. ಈ ಚಲನೆಯಿಂದ ಶೇ. 15-40 ರಷ್ಟು ಮಣ್ಣಿನ ಕಣಗಳು ಸ್ಥಳಾಂತರಗೊಳ್ಳುತ್ತವೆ.
- ಕಣಗಳು ತೂರಿಹೋಗುವುದರಿಂದಾಗುವ ಸವಕಳಿ (Saltation)
ಮಣ್ಣಿನ ಕಣಗಳ ಗಾತ್ರ 0.1-0.5 ಮಿ.ಮೀ. ಇದ್ದು, ಕಣಗಳು ಗಾಳಿಯಲ್ಲಿ ಜಿಗಿಯುತ್ತಾ ಸಾಗುತ್ತವೆ. ಇದರಿಂದ ಶೇ. 50-70 ರಷ್ಟು ಮಣ್ಣಿನ ಕಣಗಳು ಸ್ಥಳಾಂತರಗೊಳ್ಳುತ್ತವೆ.
- ಕಣಗಳು ದೂಡಿ ಒಯ್ಯುವುದರಿಂದಾಗುವ ಸವಕಳಿ (Surface creep)
ಮಣ್ಣಿನ ಕಣಗಳ ಗಾತ್ರ 0.5-2 ಮಿ.ಮೀ. ಇದ್ದು ಇವುಗಳು ಭೂಮಿಯ ಮೇಲೆ ತೆವಳುತ್ತಾ ಸಾಗುತ್ತವೆ. ಇದರಿಂದ ಶೇ. 5-25 ರಷ್ಟು ಮಣ್ಣಿನ ಕಣಗಳು ಸ್ಥಳಾಂತರಗೊಳ್ಳುತ್ತವೆ.
ಗಾಳಿಯ ಸವಕಳಿಯನ್ನು ತಡೆಯುವ ವಿಧಾನಗಳು
ಜಮೀನಿನ ಮೇಲೆ ಸಾವಯವ ಪದಾರ್ಥಗಳನ್ನು ಹರಡುವುದು. ಗಾಳಿಗೆ ಅಡ್ಡವಾಗಿ ಬೇಸಾಯ ಕ್ರಮಗಳನ್ನು ಅನುಸರಿಸುವುದು. ಒಣಗಿದ ಮಣ್ಣಲ್ಲಿ ಉಳುಮೆ ಮಾಡಬಾರದು. ಮಳೆ ಬಿದ್ದ ನಂತರ ಉಳುಮೆ ಮಾಡುವುದು. ಗಾಳಿಯನ್ನು ತಡೆಯುವ ಮರಗಳನ್ನು ಬೆಳೆಸುವುದು. ಅತಿಯಾದ ಮೇಯಿಸುವಿಕೆಯನ್ನು ತಪ್ಪಿಸುವುದು. ಬೆಳೆಗಳ ಸರದಿ ಕ್ರಮವನ್ನು ಬಳಸಿಕೊಂಡು ಭೂಮಿಯಲ್ಲಿ ಕೃಷಿ ಮಾಡುವುದು. ನೀರಿನ ಒಳನುಸುಳುವಿಕೆ ಪ್ರೋತ್ಸಾಹಿಸಿ ಮತ್ತು ನೀರು ಹರಿಯುವಿಕೆಯನ್ನು ಕಡಿಮೆಗೊಳಿಸುವುದು.