ತೆಂಗಿನ ತೋಟದಲ್ಲಿ ನೀರಿನ ಸಮರ್ಪಕ ನಿರ್ವಹಣೆ

KSNU
ತೆಂಗಿನ ತೋಟದಲ್ಲಿ ನೀರಿನ ಸಮರ್ಪಕ ನಿರ್ವಹಣೆ
ಹ ಸುರೇಶ್ ನಾಯ್ಕ ಕೆ. ಪಿ., ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ, ಹೊನ್ನವಿರ

ತೆಂಗು ದೇಶದ ವಾಣಿಜ್ಯ ಬೆಳೆಗಳಲ್ಲಿ ಪ್ರಮುಖವಾದ ತೋಟದ ಬೆಳೆ, ಈ ಬೆಳೆಯ ಪ್ರತಿಯೊಂದು ಭಾಗವು ಉಪಯೋಗವಾಗುವುದರಿಂದ ಇದನ್ನು ಕಲ್ಪ ವೃಕ್ಷವೆಂದು ಕರೆಯಲಾಗುತ್ತಿದೆ. ತೆಂಗಿನ ಮರ ನೆಟ್ಟ ಸಮಯದಿಂದ ಉತ್ತಮವಾದ ಆರೈಕೆ ಮಾಡಿದರೆ, ಬೇಗನೆ ಹಾಗೂ ಜೀವನ ಪರ್ಯಂತ ಉತ್ತಮ ಇಳುವರಿ ದೊರೆಯುತ್ತದೆ. ಆಧುನಿಕ ಬೇಸಾಯ ಪದ್ಧತಿಗಳಲ್ಲಿ ಒಂದಾದ ಸಮರ್ಪಕ ನೀರಿನ ನಿರ್ವಹಣೆಯಿಂದ ಉತ್ತಮ ಇಳುವರಿ ಪಡೆಯಬಹುದು. ತೆಂಗಿನ ಮರಕ್ಕೆ ನೀರು ಕಡಿಮೆಯಾದರೆ ಎಲೆಗಳ ಗಾತ್ರ ಕಿರಿದಾಗುವುದು, ಎಲೆಗಳ ಸಂಖ್ಯೆ ಕಡಿಮೆಯಾಗುವುದು. ಎಲೆಗಳು ಬೇಗನೆ ಒಣಗಿ ಹೋಗುವುದು. ಹೂ ಗೊಂಚಲುಗಳ ಸಂಖ್ಯೆ ಕಡಿಮೆಯಾಗುವುದು. ಎಲೆಯ ಕಾಯಿ ಉದುರುವಿಕೆ ಹೆಚ್ಚಾಗುವುದು ಹಾಗೂ ಕೊಬ್ಬರಿ ಇಳುವರಿ ಕಡಿಮೆಯಾಗುವುದು. ಆದುದರಿಂದ ತೆಂಗಿಗೆ ನೀರನ್ನು ಸಮರ್ಪಕವಾಗಿ ಕೊಡುವುದು ತುಂಬಾ ಅಗತ್ಯವಾಗಿದೆ.

ನೀರಾವರಿ ಪದ್ಧತಿಗಳು
  1. ಹಾಯಿ ನೀರಾವರಿ (Flood irrigation): ಈ ಪದ್ಧತಿಯಲ್ಲಿ ಕಾಲುವೆಯಿಂದ ತೋಟಕ್ಕೆ ನೀರನ್ನು ಹಾಯಿಸಲಾಗುವುದು. ಈ ಪದ್ಧತಿಯಲ್ಲಿ ನೀರು ಸಮಾನವಾಗಿ ತೋಟದಲ್ಲಿ ನೆನೆಯುವುದಿಲ್ಲ. ಇದರಿಂದ ಗಣನೀಯ ಪ್ರಮಾಣದ ನೀರು ಜಮೀನಿನ ಕೆಳಭಾಗದಲ್ಲಿ ಮತ್ತು ಮಣ್ಣಿನ ಮೇಲ್ಮನಲ್ಲಿ ಸಂಗ್ರಹವಾಗುತ್ತದೆ ಅಥವಾ ಮೇಲೈನಿಂದಲೇ ನೀರು ಬಸಿದು ನಷ್ಟವಾಗುತ್ತದೆ.
  2. ಸುತ್ತು ಪಾತಿ ನೀರಾವರಿ (Basin irrigation): ಈ ವಿಧಾನದಲ್ಲಿ ಗಿಡದ ಸುತ್ತ ಬುಡದಿಂದ 1 ರಿಂದ 2 ಮೀ. ವ್ಯಾಸದ ಪಾತಿಯನ್ನು ಮಾಡಿ ಕಾಲುವೆಗಳ ಮುಖಾಂತರ ನೀರನ್ನು ಕೊಡಬೇಕು. ಈ ರೀತಿ ಕಾಲುವೆಗಳ ಮುಖಾಂತರ ನೀರನ್ನು ಕೊಡುವುದರಿಂದ ಕಾಲುವೆ ಮಾಡಲು ಭೂಮಿಯು ವ್ಯರ್ಥವಾಗುತ್ತದೆ ಹಾಗೂ ಪ್ರತಿ ಶೇ. 30ರಷ್ಟು ನೀರು ಕಾಲುವೆಗಳಲ್ಲಿ ವ್ಯರ್ಥವಾಗುವುದನ್ನು ತಡೆಯಲು ಪಾತಿಗೆ ನೇರವಾಗಿ ಪ್ಲಾಸ್ಟಿಕ್ ಪೈಪುಗಳ ಮುಖಾಂತರ ನೀರು ಹಾಯಿಸಿದರೆ ನೀರು ಪೋಲಾಗುವುದನ್ನು ತಡೆಗಟ್ಟಬಹುದು.
  3. ತುಂತುರು ನೀರಾವರಿ (Sprinkler perfo irrigation): ಈ ಪದ್ಧತಿಯಲ್ಲಿ ನೀರನ್ನು ಮಳೆಯ ರೂಪದಲ್ಲಿ ಬೆಳೆಯ ಮೇಲೆ ಕೊಡಲಾಗುತ್ತದೆ. ಕೃತಕ ಮಳೆಯ ಪ್ರಮಾಣವು ಮಣ್ಣಿನ ನೀರು ಇಂಗುವಿಕೆಯ ಪ್ರಮಾಣಕ್ಕಿಂತ ಕಡಿಮೆ ಇರುವಂತೆ ನೋಡಿ ಕೊಳ್ಳುವುದರಿಂದ, ಜಮೀನಿನ ಮೇಲೈನಲ್ಲಿ ನೀರು ಹೊರ ಹರಿಯುವುದಿಲ್ಲ. ಈ ಪದ್ಧತಿಯು ತೆಂಗಿನಲ್ಲಿ ಮಿಶ್ರ ಬೆಳೆ/ಅಧಿಕ ಸಾಂಧ್ರತೆಯ, ಬಹು ಬೆಳೆಯ ಪದ್ಧತಿಯನ್ನು ಅನುಸರಿಸಿದಾಗ ತುಂತುರು ನೀರಾವರಿ ಉಪಯೋಗಿಸಿದರೆ, ನೀರನ್ನು ಸಮರ್ಪಕ ರೀತಿಯಲ್ಲಿ ಉಪಯೋಗಿಸಬಹುದು.
  1. ಹನಿ ನೀರಾವರಿ (Drip irrigation): ಉಳಿತಾಯ ಹಾಗೂ ಅಧಿಕ ಇಳುವರಿ ಪಡೆಯುವ ದೃಷ್ಟಿಯಲ್ಲಿ ಮಹತ್ತರವಾದ ಅಭಿವೃದ್ಧಿ, ಸಾಧಿಸಲು ಈ ವಿಧಾನದಿಂದ ಸಾಧ್ಯವಾಗಿದೆ. ಈ ವಿಧಾನದಲ್ಲಿ ಬೇರಿನ ವಲಯವನ್ನು ಭಾಗಶಃ ನೆನೆಯುತ್ತದೆ. ಆದರೆ ಗಿಡದ ಬೆಳವಣಿಗೆಗೆ ಬೇಕಾದ ನೀರನ್ನು ಪೂರ್ಣ ಪ್ರಮಾಣದಲ್ಲಿ ಪ್ರತಿ ದಿನ ಕೊಡುವಂತೆ ಏರ್ಪಾಡು ಮಾಡಲಾಗಿರುತ್ತದೆ. ಈ ವಿಧಾನದಲ್ಲಿ ತೆಂಗಿನ ಬುಡದ ಪ್ರತಿಶತ 15 ರಿಂದ 20ರಷ್ಟು ಭಾಗ ಮಾತ್ರ ತೇವಾಂಶವಾಗಿ, ಗಿಡಗಳಿಗೆ ಬೇಕಾದ ನೀರನ್ನು ಕೊಡಬಹುದು.
ಹನಿ ನೀರಾವರಿಯ ಅನುಕೂಲಗಳು

ಸವಳು ನೀರನ್ನು ನೀರಾವರಿಗೆ ಬಳಸಬಹುದು. ಇಳಿಜಾರು ಹಾಗೂ ಏರು ತಗ್ಗಿನ ಜಮೀನಿಗೆ ಸೂಕ್ತ, ನೀರಿನ ಮಿಶ್ರ ಬಳಕೆ, ಇಳುವರಿಯಲ್ಲಿ ಹೆಚ್ಚಳ, ಬೆಳೆ ಉತ್ಪನ್ನಗಳ ಸುಧಾರಿತ ಗುಣಮಟ್ಟ, ನೀರಿನ ಸಮರ್ಪಕ ಬಳಕೆ, ಕಡಿಮೆ ಕಳೆಗಳ ಬೆಳವಣಿಗೆ, ನಿರುಪಯುಕ್ತ ಜಮೀನಿನಲ್ಲೂ ಲಾಭದಾಯಕ, ಸರಾಗ ಬೇಸಾಯ, ಸಹಜ ಕೃಷಿಗೆ ನೆರವಾಗುತ್ತದೆ.

ಹನಿ ನೀರಾವರಿಯಲ್ಲಿ ಪ್ರತಿ ದಿನವೂ, ಬೆಳೆಗೆ ಬೇಕಾದ ಪ್ರಮಾಣದಲ್ಲಿ ನೀರನ್ನು ಕೊಡುವುದರಿಂದ ತೇವಾಂಶವು ಹೆಚ್ಚಿನ ಬಿಗಿತವಿಲ್ಲದೇ ಬೆಳೆಗೆ ಒಂದೇ ಸಮನೆ ದೊರೆಯುವುದರಿಂದ ಯಾವುದೇ ಕಾಲದಲ್ಲಿ ನೀರಿನ ಕೊರತೆಯು ಇಲ್ಲದಂತಾಗುತ್ತದೆ. ಹನಿ ನೀರಾವರಿಯ ಮೂಲಕ ರಸಗೊಬ್ಬರಗಳನ್ನು ತೆಂಗಿಗೆ ಕೊಡುವ ಅವಕಾಶವೂ ಇರುವುದರಿಂದ ನೀರಿನ ಮೂಲಕ ರಸಗೊಬ್ಬರಗಳನ್ನು ಕೊಟ್ಟಾಗ ಪೋಷಕಾಂಶಗಳು ಉತ್ತಮ ದೊರೆಯುವಿಕೆ, ಕಡಿಮೆ ನಷ್ಟವಾಗುವುದು. ಬೆಳೆಯ ಅವಶ್ಯಕತೆಗಳಿಗುಣವಾಗಿ ವಿವಿಧ ಹಂತಗಳಲ್ಲಿ ರಸಗೊಬ್ಬರಗಳನ್ನು ಕೊಡಲು ಅವಕಾಶವಾಗುತ್ತದೆ. ಬೇರಿಗೆ ಹಾನಿಯಾಗದೇ ರಸಗೊಬ್ಬರ ಕೊಡಲು ಅವಕಾಶ ಮತ್ತು ಇವುಗಳಿಂದ ರಸಗೊಬ್ಬರಗಳ ಸಮರ್ಪಕತೆ ಹೆಚ್ಚುತ್ತದೆ.

ನೀರಿನ ಸಮರ್ಪಕ ನಿರ್ವಹಣೆ

ತೆಂಗಿನ ವಿವಿಧ ಬೆಳವಣಿಗೆಯ ಹಂತದಲ್ಲಿ ನೀರಿನ ನಿರ್ವಹಣೆ ಈ ಮುಂದೆ ವಿವರಿಸಲಾಗಿದೆ

  1. ತೆಂಗಿನ ಸಸಿಮಡಿಗಳಲ್ಲಿ ನೀರಿನ ನಿರ್ವಹಣೆ: ಬೀಜದ ತೆಂಗಿನ ಕಾಯಿಗಳನ್ನು ಜೂನ್-ಜುಲೈನಲ್ಲಿ ನೆಡುವುದು. ನೆಟ್ಟ 5 ತಿಂಗಳ ಒಳಗೆ ಕಾಯಿಗಳು ಮೊಳಕೆ ಒಡೆದಿರಬೇಕು. 5 ತಿಂಗಳ ನಂತರ ಮೊಳಕೆ ಒಡೆದ ಕಾಯಿಗಳು ಸೂಕ್ತವಲ್ಲ. ನವೆಂಬರ್‌ನಿಂದ ಮೇವರೆಗೆ ಮರಳು ಭೂಮಿಯಲ್ಲಿ ಎರಡು ದಿನಕ್ಕೊಮ್ಮೆ ಹಾಗೂ ಮರಳು ಮಿಶ್ರಿತ ಜೇಡಿ ಮಣ್ಣು ಮತ್ತು ಕೆಂಪು ಮಣ್ಣು ಭೂಮಿಯಲ್ಲಿ 4 ದಿನಕ್ಕೊಮ್ಮೆ ನೀರನ್ನು ಕೊಡುವುದು ಸೂಕ್ತ.
  1. ಮೊದಲ ನಾಲ್ಕು ವರ್ಷದ ಗಿಡಗಳಿಗೆ ನೀರಿನ ನಿರ್ವಹಣೆ: ಈ ಸಮಯದಲ್ಲಿ ಗಿಡಗಳ ಬೇರಿನ ಬೆಳವಣಿಗೆ ನಿಧಾನವಾಗುವುದರಿಂದ ಸುತ್ತ ಪಾತಿ ವಿಧಾನ ಅನುಸರಿಸಿದಾಗ ಎರಡು ದಿನಕ್ಕೊಮ್ಮೆ ನೀರು ಕೊಡುವುದು. ಮೊದಲ ಎರಡು ವರ್ಷದವರೆಗೆ ಸಸಿಗಳಿಗೆ ಅವುಗಳ ಬುಡದಲ್ಲಿ ಒಂದು ಮೀಟರ್ ವೃತ್ತಾಕಾರದಲ್ಲಿ ಪಾತಿಯನ್ನು ಮಾಡಿ, 2 ದಿನಕ್ಕೊಮ್ಮೆ ಪ್ರತಿ ಗಿಡಕ್ಕೆ 25-30 ಲೀಟರ್ ನೀರನ್ನು ಒದಗಿಸಬೇಕು. 3 ಮತ್ತು 4ನೇ ವರ್ಷದ ಗಿಡಗಳಿಗೆ 4 ದಿನಕ್ಕೊಮ್ಮೆ 75-60 ಲೀಟರ್ ನೀರನ್ನು ಒದಗಿಸಬೇಕಾಗುತ್ತದೆ. ಹನಿ ನೀರಾವರಿ ಪದ್ಧತಿಯನ್ನು ಅಳವಡಿಸುವುದಾದರೆ, ಒಂದು ಮತ್ತು ಎರಡು ವರ್ಷದ ಗಿಡಗಳಿಗೆ ಬುಡದಿಂದ 50 ಸೆಂ. ಮೀ. ದೂರದಲ್ಲಿ ವಿರುದ್ಧ ದಿಕ್ಕಿನಲ್ಲಿ ಎರಡು ಹನಿ ಸಾಧನಗಳನ್ನು ಅಳವಡಿಸಿ, ಗಂಟೆಗೆ 2 ಲೀಟರ್ ದರದಲ್ಲಿ 4 ಗಂಟೆ ಸಮಯ ನೀರನ್ನು ಬಿಡಬೇಕು. ಮೂರು ಮತ್ತು ನಾಲ್ಕನೇ ವರ್ಷದ ಗಿಡಗಳಿಗೆ, ಗಿಡದ ಬುಡದಿಂದ 75 ಸೆಂ.ಮೀ. ಅಂತರದಲ್ಲಿ ಮೂರು ಹನಿ ಸಾಧನಗಳನ್ನು ಅಳವಡಿಸಬೇಕು. ಗಂಟೆಗೆ 2 ಲೀ. ದರದಲ್ಲಿ ಇಟ್ಟು 3 ಗಂಟೆಗಳ ಸಮಯ ನೀರನ್ನು ಕೊಡಬೇಕಾಗುತ್ತದೆ.
  1. ನಾಲ್ಕು ವರ್ಷದ ನಂತರದ ಪ್ರಾಯದ ಗಿಡಗಳಿಗೆ ನೀರಿನ ನಿರ್ವಹಣೆ: ಪ್ರಾಯದ ಗಿಡವು ತಿಂಗಳಿಗೆ ಒಂದು ಗರಿಯನ್ನು ಹಾಗೂ ಒಂದು ಹೂ ಗೊಂಚಲನ್ನು ಬಿಡುತ್ತದೆ. ಆದ್ದರಿಂದ ಒಂದು ತೆಂಗಿನ ಗಿಡದಲ್ಲಿ ವಿವಿಧ ಗಾತ್ರದ ತೆಂಗಿನ ಕಾಯಿಗಳು ವರ್ಷವಿಡಿ ದೊರೆಯುತ್ತವೆ. ಪ್ರಾಯದ ಗಿಡದಲ್ಲಿ, ಗಿಡದ ಬುಡದಿಂದ 2 ಮೀಟರ್ ವೃತ್ತಾಕಾರದಲ್ಲಿ, ಪ್ರತಿಶತ 80ರಷ್ಟು ಬೇರುಗಳು ಕಾರ್ಯ ಪ್ರವೃತ್ತ ಬೇರುಗಳಿರುತ್ತವೆ. ಆದ್ದರಿಂದ 2 ಮೀ. ವೃತ್ತಾಕಾರದಲ್ಲಿ ಪಾತಿಯನ್ನು ಮಾಡಿ, 4 ದಿನಕ್ಕೊಮ್ಮೆ 200-250 ಲೀಟರ್‌ನಷ್ಟು ನೀರನ್ನು ಕೊಡಬೇಕು. ಹನಿ ನೀರಾವರಿಯನ್ನು ಅನುಸರಿಸಿದಾಗ ಗಿಡದ ಬುಡದಿಂದ ಒಂದು ಮೀ. ಅಂತರದಲ್ಲಿ 4 ಸಮನಾಂತರ ಸ್ಥಳಗಳಲ್ಲಿ ಒಂದು ಘನ ಅಡಿಯ ಗುಂಡಿಗಳನ್ನು ಮಾಡಿ, ಅದರಲ್ಲಿ ಒಂದು ಅಡಿ ಉದ್ದನೆಯ ಪಿ.ವಿ.ಸಿ. ಪೈಪ್ ಅನ್ನು ಇಟ್ಟು ಗುಂಡಿಗಳನ್ನು ತೆಂಗಿನ ನಾರಿನಿಂದ ಅಥವಾ ಒಣಗಿದ ಹುಲ್ಲಿನಿಂದ ಮುಚ್ಚಬೇಕು. ತೇವಾಂಶವನ್ನು ಸಂರಕ್ಷಿಸಲು ತೆಂಗಿನ ಬುಡದಲ್ಲಿ ತೆಂಗಿನ ನಾರಿನ ಹುಡಿಯನ್ನು ಅಥವಾ ಗರಿಗಳನ್ನು ಹರಡಬೇಕು. ಈ ರೀತಿ ಮಾಡುವುದರಿಂದ ನೀರು ಸುಲಭವಾಗಿ ದೊರೆತು ಭೂಮಿಯಿಂದ ಆವಿಯಾಗುವುದನ್ನು ತಡೆಯಬಹುದು. ಹನಿ ಸಾಧನಗಳನ್ನು ಈ ನಾಲ್ಕು ಪಿ.ವಿ.ಸಿ ಪೈಪನ್ನು ಅಳವಡಿಸಿ, ಪ್ರತಿ ಹನಿ ಸಾಧನದಿಂದ 2 ಲೀಟರ್ ಪ್ರಮಾಣದಲ್ಲಿ 2 ಗಂಟೆಗಳ ಕಾಲ ನೀರನ್ನು ಬಿಡಬೇಕು. ಹನಿ ನೀರಾವರಿ ಸಾಧನವನ್ನು ಅಳವಡಿಸಿ ನೀರು ಹಾಯಿಸುವುದರಿಂದ ಪ್ರತಿ ಶತ 25 ರಷ್ಟು ಬೇರಿನ ವಲಯ ಪ್ರತಿ ದಿನ ಪಡೆದು, ಗಿಡದ ಬೆಳವಣಿಗೆ ಹಾಗೂ ಫಲವತ್ತತೆಯನ್ನು ಹೆಚ್ಚಿಸುತ್ತದೆ. ನೀರು ಕಡಿಮೆ ಇರುವ ಪ್ರದೇಶದಲ್ಲಿ ಹನಿ ನೀರಾವರಿ ಪದ್ಧತಿಯನ್ನು ಅಳವಡಿಸುವುದರಿಂದ ಕಡಿಮೆ ನೀರಿನಲ್ಲಿ ಹೆಚ್ಚಿನ ಗಿಡಗಳಿಗೆ ನೀರನ್ನು ಕೊಡಬಹುದು. ಮಣ್ಣಿನ ತೇವಾಂಶವನ್ನು ಕಾಪಾಡಿಕೊಂಡು ಬರಲು ತೆಂಗಿನ ಚಿಪ್ಪುಗಳನ್ನು ಮಣ್ಣಿನಲ್ಲಿ ಹೂಳಬಹುದು ಅಥವಾ ಮಣ್ಣಿನ ಮೇಲೆ ಹೊದಿಕೆಯಾಗಿ ಹಾಕಬಹುದು. ತೆಂಗಿನ ನಾರು ದೊರೆಯುವ ಪ್ರದೇಶದಲ್ಲಿ ಅದನ್ನು ತೆಂಗಿನ ಬುಡದಲ್ಲಿ ಹರಡುವುದರಿಂದ ನೀರಿನ ಆವಿಯನ್ನು ತಪ್ಪಿಸಬಹುದು.
  1. ನೀರಾವರಿ ಮೂಲಕ ರಾಸಾಯನಿಕ ಗೊಬ್ಬರ ನೀಡಿಕೆ: ಸಾಮಾನ್ಯವಾಗಿ ರಾಸಾಯನಿಕ ಗೊಬ್ಬರಗಳನ್ನು ಅಥವಾ ಪುಡಿಯ ರೂಪದಲ್ಲಿ ಎರಚುವ ಪದ್ಧತಿ ರೂಢಿಯಲ್ಲಿರುತ್ತದೆ. ಈ ರೀತಿಯ ಪದ್ಧತಿಗಳಲ್ಲಿ ಹಾಕಿದ ಗೊಬ್ಬರವು ಮಳೆಯ ನೀರಿನಲ್ಲಿ ಕೊಚ್ಚಿ ಹೋಗಬಹುದು. ಭೂಮಿಯಲ್ಲಿ ಬಸಿದು ಹೋಗಬಹುದು ಅಥವಾ ವಾತಾವರಣದಲ್ಲಿ ಆವಿ ಆಗಬಹುದು. ಯೂರಿಯಾ, ಅಮೋನಿಯಾ, ನೈಟ್ರೇಟ್ ರೂಪದ ಗೊಬ್ಬರಗಳನ್ನು ಹಾಕುವುದರಿಂದ ಬಸಿದು ಹೋಗುವಿಕೆಯನ್ನು ಈಗಾಗಲೇ ಸಂಶೋಧನೆ ಮೂಲಕ ದೃಢಪಡಿಸಲಾಗಿದೆ.

 

ರಾಸಾಯನಿಕ ಗೊಬ್ಬರದ ಮೂಲಕ ನೀರಾವರಿಯ ಅನುಕೂಲಗಳು: ಬೇರಿನ ವಲಯದಲ್ಲಿ ಉತ್ತಮ ತೇವಾಂಶವಿರುವುದರಿಂದ ಪೂರ್ಣ ಪ್ರಮಾಣದ ರಸಗೊಬ್ಬರದ ಬಳಕೆಯಾಗುತ್ತದೆ. ಮೇಲುಗೊಬ್ಬರ ಕೊಡುವಾಗ ಬೇರಿನ ವಲಯದಲ್ಲಿ ಆಗುವ ದುಷ್ಪರಿಣಾಮ ತಪ್ಪಿಸಬಹುದು. ಬೆಳೆಗೆ ಬೇಕಾದ ಹಂತದಲ್ಲಿ ಗೊಬ್ಬರವನ್ನು ಕೊಡಬಹುದು. ಗೊಬ್ಬರ ಹಾಕಲು ಬೇಕಾದ ಕೂಲಿಯ ಖರ್ಚನ್ನು ಉಳಿಸಬಹುದು. ಹೆಚ್ಚು ಗೊಬ್ಬರವನ್ನು ಬಳಸುವ ಬೆಳೆಗಳಲ್ಲಿ ರಾಸಾಯನಿಕ ನೀರಾವರಿ ಅಳವಡಿಸುವುದರಿಂದ ಶೇ. 25-20 ರಷ್ಟು ಗೊಬ್ಬರದ ಬಳಕೆಯನ್ನು ಕಡಿಮೆ ಮಾಡಬಹುದು.

ಬಳಸುವ ವಿಧಾನ: ಹನಿ ನೀರಾವರಿ ಮೂಲಕ ರಾಸಾಯನಿಕ ಗೊಬ್ಬರದ ಮಿಶ್ರಣವನ್ನು ಕಲಸಲು ವೆಂಚುರಿಯನ್ನು ಅಳವಡಿಸುವುದು. ರಾಸಾಯನಿಕ ದ್ರಾವಣವಿರುವ ತೊಟ್ಟಿಯಲ್ಲಿ ಶೋಧಕ ಜಾಲರಿಯನ್ನು ಜೋಡಿಸಿ, ವೆಂಚುರಿಯ ಮೂಲಕ ರಾಸಾಯನಿಕ ದ್ರಾವಣವನ್ನು ಮುಖ್ಯ ಕೊಳವೆಯಲ್ಲಿ ಬರುವ ನೀರಿನ ಜೊತೆಗೆ ಮಿಶ್ರಣ ಮಾಡಬಹುದು. ರಸಗೊಬ್ಬರಗಳನ್ನು ಸಾಂದ್ರತೆ ವ್ಯತ್ಯಾಸವಿರುವ ಟ್ಯಾಂಕರ್‌ನಲ್ಲಿ ಕರಗಿಸಿ, ಮೈನ್ ಪೈಪಿನ ಮುಖಾಂತರ ಗಿಡಗಳಿಗೆ ಬಿಡಬಹುದು. ನಂತರ ಉಪ ಕೊಳವೆ ಹಾಗೂ ಕವಲು ಕೊಳವೆಗಳ ಮೂಲಕ ಹಾದು ಗಿಡದ ಬುಡಕ್ಕೆ ನೀರಿನ ಜೊತೆಗೆ ಸಸ್ಯಗಳಿಗೆ ಬೇಕಾದ ರಸಗೊಬ್ಬರಗಳನ್ನು ಕಾಲಕ್ಕೆ ಸರಿಯಾಗಿ ಒದಗಿಸಬಹುದು. ನೀರಾವರಿಯಲ್ಲಿ ಉಪಯೋಗಿಸುವ ಗೊಬ್ಬರಗಳು ನೀರಿನಲ್ಲಿ ಕರಗುವ ಗುಣವನ್ನು ಹೊಂದಿರಬೇಕು. ಸುಣ್ಣದಿಂದ ತಯಾರಾದ ಗೊಬ್ಬರಗಳನ್ನು ರಂಜಕಯುಕ್ತ ಗೊಬ್ಬರ ಹಾಗೂ ಗಂಧಕಯುಕ್ತ ಗೊಬ್ಬರಗಳೊಂದಿಗೆ ಬೆರಸಬಾರದು. ನೀರಿನಲ್ಲಿ ರಸಸಾರವನ್ನು (pH) ಪರಿವರ್ತಿಸಬಾರದು. ಈ ಪದ್ಧತಿಯಲ್ಲಿ ಪ್ರತಿ ತೆಂಗಿನ ಗಿಡಕ್ಕೆ ಶಿಫಾರಸ್ಸು ಮಾಡಿದ NPK ಗೊಬ್ಬರದಲ್ಲಿ ಪ್ರತಿಶತ 50ರಷ್ಟು ನೀಡುವುದರಿಂದ ಹೆಚ್ಚಿನ ತೆಂಗಿನ ಇಳುವರಿ ಪಡೆಯಬಹುದು. ರೈತರ ಅನುಕೂಲಕ್ಕೆ ತಕ್ಕಂತೆ ಹನಿ ನೀರಾವರಿ ಕೊಡುವ ತಿಂಗಳುಗಳಲ್ಲಿ ಗೊಬ್ಬರಗಳನ್ನು ತಿಂಗಳಿಗೊಮ್ಮೆ ಕೊಡುವುದರಿಂದ ಉತ್ತಮ ಇಳುವರಿ ಕಂಡುಬಂದಿರುತ್ತದೆ.

Facebook
WhatsApp
Twitter
LinkedIn
Government of Karnataka