ಎಂ. ಮಂಜುನಾಥ, ಕೀಟಶಾಸ್ತ್ರ ಪ್ರಾಧ್ಯಾಪಕರು (ನಿವೃತ್ತ) ಹಾಗೂ ಶಿಕ್ಷಣ ನಿರ್ದೇಶಕರು, ಗೌರಿಕೊಪ್ಪಲು, ಹಾಸನ
ಛೀ ಪೂಪ್ (ಮಲ)ದ ಕಾಫಿ ಎನ್ನಬೇಡಿ….. ಪ್ರಾಣಿ ಮಲ, ಎಂಜಲು, ವಾಂತಿಯಿಂದ ಮಾಡಿದ ಕಾಫಿಗೆ ಪ್ರಪಂಚದಲ್ಲಿ ಅತ್ಯಂತ ದುಬಾರಿ ಬೆಲೆ ಇದೆ. ಇದು ಈಗ ವಿದೇಶಿ ಪಾಪ್ ಸಂಸ್ಕೃತಿಯ ಭಾಗವಾಗಿದೆ ಎನ್ನುವುದಿದೆ. ಮಲದಿಂದ ಬೇರ್ಪಡಿಸಿ ಸಂಸ್ಕರಿಸಿದ ಕಾಫಿಗೆ “ಪೂಪ್ ಅರ್ಥಾತ್ ಮಲ ಅಥವಾ ಕಕ್ಕಸಿನ ಕಾಫಿ” ಎನ್ನುವರು. ಅನೇಕ ಪಕ್ಷಿಗಳು ತಿಂದು ಉಗುಳಿದ ಅಥವಾ ವಿಸರ್ಜಿಸಿದ ಮಲದಲ್ಲಿನ ಬೀಜಗಳು ಉತ್ತಮವಾಗಿ ಮೊಳೆತು ಬೆಳೆಯುವುವು ಎಂಬ ನಂಬಿಕೆ ರೈತಾಪಿ ವರ್ಗದಲ್ಲಿದೆ. ಪ್ರಾಣಿಗಳ ಮಲವನ್ನು ನೇರವಾಗಿ ಎಲ್ಲೂ ಬಳಕೆ ಮಾಡಿದ ಉಲ್ಲೇಖಗಳಿಲ್ಲ. ಆದರೆ ಪ್ರಾಣಿಗಳ ಮಲದಿಂದ ಬೇರ್ಪಸಿದ ಕಾಫಿ ಬೀಜಗಳಿಂದ ತಯಾರಿಸಿದ ಕಾಫಿ ಸೇವನೆ ಈಗ ರಹಸ್ಯವಾಗಿ ಉಳಿದಿಲ್ಲ. ಮಲವನ್ನು ಔಷಧಿಯಾಗಿ ಉಪಯೋಗಿಸಿದ ಉದಾಹರಣೆಯನ್ನು ಪದ್ಮ ಭೂಷಣ ಪ್ರಶಸ್ತಿ ವಿಜೇತ ಹೆಸರಾಂತ ವೈದ್ಯ ಡಾ. ಬಿ. ಎಂ. ಹೆಗಡೆಯವರು ಕೊಡುತ್ತಾರೆ. ಅದೇನೆಂದರೆ, ಆರೋಗ್ಯವಂತ ಮನುಷ್ಯರ ದೊಡ್ಡ ಕರುಳಿನ ಮಲದ ತಿಳಿಯನ್ನು ಅನಾರೋಗ್ಯ ಪೀಡಿತರ ಕರುಳಿಗೆ ಸೇರಿಸುವುದರಿಂದ ಆರೋಗ್ಯ ವೃದ್ಧಿಸುವುದು.
ಪೂಪ್ ರೀತಿಯ ಕಾಫಿ ಸೇವನೆ ನನ್ನಂತಹ ಹಾಗೂ ಅನೇಕರಿಗೆ ಇಷ್ಟವಾಗದಿರದು. ಆದರೆ ಇಂತಹುದನ್ನೇ ಇಷ್ಟ ಪಟ್ಟು ಸೇವಿಸುವವರಿರುವಾಗ ತಯಾರಿಸಿಕೊಡುವವರಿಗೆ ಬರವಿಲ್ಲವೆನ್ನಬಹುದು. ಪೂಪ್ ಕಾಫಿ ಸೇವನೆ ಬಗ್ಗೆ ಮಾತನಾಡುವಾಗ “ಗಂಗಾವತಿ ಪ್ರಾಣೇಶ” ರವರ ಹಾಸ್ಯ ಸಂಜೆಯಲ್ಲಿ ಹೇಳಿದ ಹಾಸ್ಯ ಪ್ರಸಂಗ ನೆನಪಾಗುವುದು. ಒಬ್ಬ ವ್ಯಾಪಾರಿ ಶೆಟ್ಟಿ ರೈಲಿನಲ್ಲಿ ಓರ್ವ ಚೀನಿಯನಿದ್ದ ಬೋಗಿಯಲ್ಲಿ ಪ್ರಯಾಣಿಸುತ್ತಿದ್ದ. ಚೀನಿಯನ ಗಲ್ಲದ ಮೇಲೆ ಒಂದು ನೊಣ ಬಂದು ಕೂತಿತು. ಅವನು ಅದನ್ನು ಹಿಡಿದು ಅವನ ಬಾಯಿಯೊಳಗೆ ಹಾಕಿ ತಿಂದ. ಚೀನಿಯರಿಗೆ ನೊಣ, ಜಿರಲೆ, ಮಿಡತೆ, ಹಾವು, ಇಲಿಯಂತಹ ಪ್ರಾಣಿಗಳನ್ನು ತಿನ್ನುವ ರೂಢಿ ಇರುವವರಾದ್ದರಿಂದ ಅವನಿಗೆ ನೊಣ ತಿನ್ನುವುದು ಹೇಸಿಗೆಯೇ ಅಲ್ಲ. ಅವನು ನೊಣ ತಿಂದಿದ್ದನ್ನು ಕಂಡ ಶೆಟ್ಟಿಗೆ ಸ್ವಲ್ಪ ಸಮಯದ ನಂತರ ಅವನ ಗಲ್ಲದ ಮೇಲೂ ಸಹ ಒಂದು ನೊಣ ಬಂದು ಕೂತಾಗ “ಶೆಟ್ಟಿ ಆ ನೊಣವನ್ನು ಹಿಡಿದು ಚೀನಿಯನಿಗೆ ತೋರಿಸುತ್ತಾ ಈ ನೊಣವನ್ನು ಎಷ್ಟಕ್ಕೆ ಖರೀದಿಸ್ತೀಯಾ?’ ಎಂದನಂತೆ! ಇದು ಕೇವಲ ಹಾಸ್ಯ ಎನಿಸಿದರೂ, ವಾಸ್ತವವಾಗಿ ಎಂತಹ ವಸ್ತುವೇ ಆಗಲಿ ಕೊಳ್ಳುವವರು ಇರುವಾಗ ಮಾರುವವರು ಇರುತ್ತಾರೆ ಅಲ್ಲವೇ?. ಹಾಗೆಯೇ ಪೂಪ್ ಕಾಫಿ ಎನ್ನಬಹುದೇ?
ಭಾರತವು ಪ್ರಪಂಚದ 8ನೇ ಅತಿ ದೊಡ್ಡ ಕಾಫಿ ರಫಿಗೆ ಹೆಸರುವಾಸಿಯಾದ ದೇಶವಾಗಿದೆ. ಅನೇಕ ಪ್ರಾಣಿಗಳಾದ ಸಿವೆಟ್ ಬೆಕ್ಕು, ಆನೆ, ಜಾಕು ಪಕ್ಷಿ, ಬಾವಲಿ, ಕೋಟಿ ಬೆಕ್ಕು, ಬೊನೊಬೊ ಚಿಂಪಾಂಜಿ ಹಾಗೂ ಮಂಗಗಳನ್ನು ಬಳಸಿ ಪೂಪ್ ಕಾಫಿಯನ್ನು ಉತ್ಪಾದಿಸುವರು.
ಅವುಗಳಲ್ಲಿ ಸಿವೆಟ್ ಬೆಕ್ಕು ಮತ್ತು ಆನೆಗಳಿಂದ ಸಂಸ್ಕರಿಸಿದ ಕಾಫಿ ತುಂಬಾ ಪ್ರಸಿದ್ದಿಯಾಗಿದೆ. ನಮ್ಮ ರಾಜ್ಯದಲ್ಲಿ ಟಾಟಾ ಸಂಸ್ಥೆಯವರಿಂದ ಅಲ್ಪ ಪ್ರಮಾಣದಲ್ಲಿ ಸಿವೆಟ್(ಮನುಗು) ಬೆಕ್ಕುಗಳಿಗೆ ಕಾಫಿ ಹಣ್ಣುಗಳನ್ನು ತಿನ್ನಿಸಿ ಹೊರಹಾಕಿದ ಮಲದಲ್ಲಿನ ಕಾಫಿ ಬೀಜಗಳಿಂದ ತಯಾರಿಸಿದ ಕಾಫಿ ಬಗ್ಗೆ ಮಾಹಿತಿ ಇದೆ. ಹಾಗೆಯೇ ಆನೆಗಳನ್ನು ಬಳಸಿ ಕೆಲವೆಡೆ ಕಾಫಿ(ಐವರಿ ಕಾಫಿ) ತಯಾರಿಸುವ ಬಗ್ಗೆ ಕೊಡಗಿನ ಕೆಲ ಭಾಗಗಳಲ್ಲಿ ಮತ್ತು ಥೈಲಾಂಡಿನಲ್ಲಿ ಇರುವುದು ತಿಳಿದಿದೆ.
ಪೂಪ್ (ಮಲ)ದ ಕಾಫಿ ಬಗೆಗಳು
ಲುವಾಕ ಕಾಫಿ: ಇದನ್ನು ಸಿವೆಟ್ ಅಥವಾ ಪುನಗು ಬೆಕ್ಕು (ಪ್ಯಾರಾಡಾಕ್ಟರಸ್ ಹರ್ಮಾಫೋಡಿಟಿಸ್) ಎನ್ನುವ ಬೆಕ್ಕಿನ ಜಾತಿಗೆ ಸೇರಿದ ಪ್ರಾಣಿಗೆ, ಕಾಫಿ ಹಣ್ಣುಗಳನ್ನು ತಿನ್ನಿಸಿ ಅದರ ಮಲದಿಂದ ಹೊರಬಂದ ಪಚನವಾಗದ ಬೀಜಗಳಿಂದ ಮಾಡುವರು. ಈ ಕಾಫಿಯ ಬೆಲೆ ಅತ್ಯಂತ ದುಬಾರಿ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇದರ 100 ಗ್ರಾಂ ಪುಡಿಗೆ 12,000 ರೂ. ಗಳು “. ಈ ಕಾಫಿಯನ್ನು ಮುಖ್ಯವಾಗಿ ಇಂಡೋನೇಷ್ಯಾದ ದ್ವೀಪಗಳಾದ ಸುಮಾತ್ರ, ಜಾವಾ, ಬಾಲಿ, ಸುಲವೇಸಿ, ಮತ್ತು ಪೂರ್ವ ಟಿಮೋರ್ಗಳಲ್ಲಿ ಹಾಗೂ ಭಾರತದಲ್ಲಿ ಉತ್ಪಾದಿಸುತ್ತಾರೆ.
ಪುನುಗು ಬೆಕ್ಕಿನ ಇಷ್ಟವಾದ ಆಹಾರ, ಕಾಫಿ ಹಣ್ಣುಗಳು. ಈ ಪುನುಗು ಬೆಕ್ಕುಗಳು ಕಾಫಿ ತೋಟಗಳಿಗೆ ಲಗ್ಗೆಯಿಟ್ಟು ಅಲ್ಲಿ ಅತ್ಯುತ್ತಮವಾದ ಕಾಫಿ ಹಣ್ಣುಗಳನ್ನು ಆರಿಸಿ ತಿನ್ನುತ್ತವೆ. ಆದರೆ ಅದರ ಹೊಟ್ಟೆಯಲ್ಲಿ ಕಾಫಿ ಬೀಜಗಳು ಜೀರ್ಣವಾಗುವುದಿಲ್ಲ. ಆ ಬೀಜಗಳು ಮಲ ವಿಸರ್ಜನೆ ಮೂಲಕ ಹೊರಗೆ ಬರುತ್ತವೆ. ಅಂತಹ ಬೀಜಗಳನ್ನು ಸಂಗ್ರಹಿಸಿ ತೊಳೆದು ಶುಚಿ ಮಾಡಿ, ಹುರಿದು ಪುಡಿ ಮಾಡಿ, ನಂತರ ಮಾರಾಟ ಮಾಡಲಾಗುತ್ತದೆ. ಮನಗು ಬೆಕ್ಕುಗಳು ಕಾಫಿ ಬೀಜಗಳನ್ನು ತಿಂದಾಗ ಜೀರ್ಣಕ್ರಿಯೆಯಲ್ಲಿ ಕಾಫಿ ಬೀಜಗಳಲ್ಲಿನ ಆಮ್ಲದ ಅಂಶವನ್ನು ಬೇರ್ಪಡಿಸುತ್ತದೆ. ಉಪಯುಕ್ತವಾದ ಪ್ರೊಟೀನ್ಗಳು ಅದರಲ್ಲಿರುತ್ತವೆ. ಈ ಕಾಫಿಯಿಂದ ಅನೇಕ ಆರೋಗ್ಯಕರ ಪ್ರಯೋಜನಗಳಿವೆ ಎನ್ನುವುದು ವಿಜ್ಞಾನಿಗಳ ಅಭಿಪ್ರಾಯವಿದೆ. ಈ ಕಾಫಿಯನ್ನು ಕುಡಿಯುವುದರಿಂದ ಹಲ್ಲುಗಳು ಆರೋಗ್ಯಕರವಾಗಿರುತ್ತವೆ ಮತ್ತು ಶುಚಿಯಾಗಿರುತ್ತವೆ.
ದೇಹದ ಚರ್ಮದ ಕ್ಯಾನ್ಸರ್ ಬರುವುದನ್ನು ಶೇ. 17 ರಷ್ಟು ಕಡಿಮೆ ಮಾಡುತ್ತದೆ. ಸಕ್ಕರೆ ಖಾಯಿಲೆಯನ್ನು ಕಡಿಮೆ ಮಾಡುವುದು. ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ. ಜೀರ್ಣ ಕ್ರಿಯೆಗೂ ಕೂಡ ಹೆಚ್ಚಿನ ನೆರವನ್ನು ನೀಡುತ್ತದೆ. ವ್ಯಾಯಾಮದ ನಂತರ ಈ ಕಾಫಿಯನ್ನು ಕುಡಿಯುವುದರಿಂದ ಮಾಂಸ ಖಂಡಗಳ ನೋವು ಶೇ. 50 ರಷ್ಟು ಕಡಿಮೆಯಾಗುತ್ತದೆ. ನರಗಳಿಗೆ ಸಂಬಂಧಿಸಿದ ರೋಗಗಳನ್ನು ಕೂಡ ಇದು ತಡೆಯಲು ಸಹಕರಿಸುತ್ತದೆ. ಇಷ್ಟೆಲ್ಲಾ ಪ್ರಯೋಜನಗಳು ಇವೆ ಎಂಬುದನ್ನು ವಿಜ್ಞಾನಿಗಳು ದೃಢಪಡಿಸಿದ್ದಾರೆ. ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ಬಯಲು ಪ್ರದೇಶಗಳಲ್ಲಿ ಈ ಪುನುಗು ಬೆಕ್ಕುಗಳು ಕಾಣಸಿಗುತ್ತವೆ. ಕರ್ನಾಟಕದಲ್ಲಿ ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ ಕೊಡಗು ಜಿಲ್ಲೆಗಳಲ್ಲಿ ಹೆಚ್ಚಾಗಿ ಕಂಡುಬರುತ್ತವೆ.
ಇವು ಮರವಾಸಿಗಳು, ಬಹುತೇಕ ತಾಳೆ ಮರ, ಮಾವಿನ ಮರ ಮುಂತಾದ ಮರಗಳಲ್ಲಿ ಈ ಬೆಕ್ಕುಗಳು ವಾಸಿಸುತ್ತವೆ. ಈ ಬೆಕ್ಕಿನ ತೂಕ 2 ರಿಂದ 4 ಕೆಜಿವರೆಗೆ ಇರುತ್ತದೆ. ಅಂದರೆ ಮನೆಯ ಬೆಕ್ಕುಗಳಿಗಿಂತ ಸ್ವಲ್ಪ ದೊಡ್ಡವು. ತಲೆ ನೀಳ ಮತ್ತು ಮೂತಿ ಚೂಪಾಗಿದ್ದು, 40 ಹಲ್ಲುಗಳಿರುತ್ತವೆ. ಇವು ವರ್ಷದ ಎಲ್ಲಾ ಕಾಲದಲ್ಲಿ ಮರಿಗಳನ್ನು ಹಾಕುತ್ತವೆ. ಗಂಡು ಮತ್ತು ಹೆಣ್ಣು ಜನನೇಂದ್ರಿಯಗಳ ಬಳಿ ಸುಗಂಧ ಗ್ರಂಥಿಗಳಿವೆ. ಇವು ದೊಡ್ಡ ಚೀಲಗಳಂತಿದ್ದು, ಅದನ್ನು ಮುಚ್ಚುವ ಮತ್ತು ತೆರೆಯುವ ರೋಮ ಭರಿತ ತುಟಿಗಳಿವೆ. ಭಾರತದಲ್ಲಿ ಮನುಗಿನ ಸುಗಂಧ ದ್ರವ್ಯವನ್ನು ವಾರಕ್ಕೊಮ್ಮೆ ದೊಡ್ಡ ದೊಡ್ಡ ದೇವಾಲಯಗಳಲ್ಲಿ ದೇವರ ಪ್ರತಿಮೆಗಳಿಗೆ ಲೇಪಿಸಲು ಬಳಸುತ್ತಾರೆ. ಈ ದ್ರವ್ಯವನ್ನು ದೇವರ ಪ್ರತಿಮೆಗೆ ಲೇಪನ ಮಾಡಿದಾಗ ಸುಗಂಧ ಪರಿಮಳ ಪಸರಿಸಿ ಅನೇಕ ಹುಳುಗಳು, ಕೀಟಗಳು, ಇಲಿಗಳು, ಹೆಗ್ಗಣಗಳು ಮತ್ತು ಹಾವುಗಳೂ ಸಹ ಬರುವುದಿಲ್ಲ. ಮಾಹಿತಿ ಪ್ರಕಾರ ಈ ಮನುಗಿನ ದ್ರವ್ಯದಲ್ಲಿ 64 ಹೂಗಳ ಪರಿಮಳ ಇರುತ್ತದಂತೆ. ಒಮ್ಮೆ ಈ ತೈಲವನ್ನು ಲೇಪಿಸಿದರೆ 64 ಹೂಗಳನ್ನು ದೇವರಿಗೆ ಅರ್ಪಿಸಿದಂತೆ ಎನ್ನುವ ನಂಬಿಕೆ ಇದೆ. ಸುಗಂಧ ದ್ರವ್ಯವು ಈ ಬೆಕ್ಕಿನ ದೇಹದಿಂದ ಉತ್ಪತ್ತಿಯಾಗುವುದು ವಿಶೇಷ ಗ್ರಂಥಿಗಳಿಂದ, ಬೆಕ್ಕಿನ ದೇಹದ ಉಷ್ಣತೆ ಹೆಚ್ಚಾದಾಗ ಈ ದ್ರವ್ಯ ಪಸರಿಸುತ್ತದೆ ಎನ್ನಲಾಗಿದೆ. ಮನುಷ್ಯನ ಕೆಲವು ಶಾರೀರಿಕ
ತೊಂದರೆಗಳನ್ನು ಸರಿಪಡಿಸಲು ಈ ದ್ರವ್ಯವನ್ನು “ಆರೋಮ ಥೆರಪಿ”ಗಳಲ್ಲಿ ಬಳಸುತ್ತಾರೆ. ಸುಗಂಧ ದ್ರವ್ಯವನ್ನು ಪಡೆಯಲು ಊದಿನ ಕಡ್ಡಿ ತಯಾರಕರು ಈ ಬೆಕ್ಕುಗಳನ್ನು ಸಾಕುವ ಬಗ್ಗೆ ಮಾಹಿತಿ ಇದೆ. ಆದರೆ ಭವಿಷ್ಯದಲ್ಲಿ ಈ ರೀತಿ ಸಾಕುವವರಿಗೆ “ವನ್ಯ ಜೀವಿ ರಕ್ಷಣಾ ಕಾಯ್ದೆ-1972″. ಅಡ್ಡಿಯಾದೀತು !.








