- ಈ ಪ್ರಮಿಳ ಸಿ. ಕೆ., ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ, ಮೂಡಿಗೆರೆ
ನೀವು ಎಂದಾದರೂ ಒಂದು ವಿಲಾಸಿ ಉಪಾಹಾರ ಗೃಹಕ್ಕೆ ಹೋಗಿದ್ದಾಗ, ಅಲ್ಲಿ ಸುಂದರವಾದ ಹೂಗಳ ಪಕಳೆಗಳಿಂದ ಅಲಂಕರಿಸಲ್ಪಟ್ಟ ‘ಸಲಾಡ್’ ಸವಿದಿದ್ದೀರಾ? ಅಥವಾ ಹೂವಿನ ದಳಗಳಿಂದ ಕೂಡಿದ ಕೇಕ್‌ನ ರುಚಿ ನೋಡಿದ್ದೀರಾ? ನಗರದ ಯಾವುದಾದರೂ ಆಧುನಿಕ ಚಹಾದಂಗಡಿಯಲ್ಲಿ ಹೂಗಳ ‘ಸಿರಪ್ ‘ನಿಂದ ಮಾಡಿದ ಪಾನೀಯ ಗುಟುಕರಿಸಿದ್ದೀರಾ? ಆಹಾರ ಯೋಗ್ಯ ಹೂವುಗಳು ಇಂದಿನ ಅಡುಗೆಯ ಒಂದು ಅಂಗವಾಗಿವೆ. ಪಟ್ಟಣದ ನಾಗರಿಕರ ಜಿಹ್ವಾ ಚಾಪಲ್ಯ ತಣಿಸುವ ಸಾಧನವಾಗಿವೆ.
ಹೂವುಗಳನ್ನು ಆಹಾರವಾಗಿ ಬಳಸಬಹುದೆ೦ಬ ಕಲ್ಪನೆಯೇನೂ ಹೊಸದಲ್ಲ. ಅನಾದಿ ಕಾಲದಿಂದಲೂ ಸಸ್ಯದ ಇತರ ಭಾಗಗಳನ್ನು ಬಳಸಿದಂತೆಯೇ ಹೂವುಗಳನ್ನೂ ಮಾನವ ತನ್ನ ಆಹಾರವಾಗಿ ಬಳಸುತ್ತಾ ಬಂದಿದ್ದಾನೆ. ಹೂಗಳು ಅನೇಕ ಪೌಷ್ಟಿಕಾಂಶಗಳನ್ನು ಹೊಂದಿರುವುದಲ್ಲದೇ, ಹಲವು ಔಷಧೀಯ ಗುಣಗಳನ್ನೂ ತಮ್ಮೊಳಗೆ ಅಡಗಿಸಿಕೊಂಡಿವೆ. ಆಹಾರದ ಮುಖ್ಯ ಅಂಗವಾಗಿ ಅಲ್ಲದೇ ಹೋದರೂ, ಆಹಾರವನ್ನು ಅಲಂಕರಿಸಲು, ಮೌಲ್ಯವರ್ಧಿಸಲು, ರುಚಿ ಹೆಚ್ಚಿಸಲು ಪುಷ್ಪ ಪಕಳೆಗಳನ್ನು ಬಳಸಲಾಗುತ್ತದೆ. ಉತ್ತಮ ಪರಿಮಳ, ರುಚಿ, ರಚನೆ, ನೋಟಗಳು ಅಚ್ಚುಕಟ್ಟಾದ ಆಹಾರದ ಗುಣಲಕ್ಷಣಗಳು.
ಆಹಾರವಾಗಿ ಹೂಗಳ ಬಳಕೆ : ಜಠರದ ಸಮಸ್ಯೆಗಳಿಂದ ದೂರವಿರಲು ಮತ್ತು ಅಲರ್ಜಿ ಇತ್ಯಾದಿ ಖಾಯಿಲೆಗಳನ್ನು ವಾಸಿಪಡಿಸಲು ಹೂವುಗಳನ್ನು ತುಸುವೇ ಆಹಾರದಲ್ಲಿ ಬಳಸಬಹುದು. ಪಕಳೆಗಳು ಅಥವಾ ಪೂರ್ತಿ ಹೂಗಳನ್ನೇ ತಿನ್ನಲು ಉಪಯೋಗಿಸಬಹುದು. ತೊಟ್ಟು, ಪರಾಗ, ಇತ್ಯಾದಿ ಕಹಿಯೆನಿಸುವ ಭಾಗಗಳನ್ನು ಪ್ರತ್ಯೇಕಿಸಿಟ್ಟುಕೊಳ್ಳುವುದು ಉತ್ತಮ. ಕೀಟ ಹಾಗೂ ರೋಗಗಳಿಂದ ಮುಕ್ತವಾದ ಪುಷ್ಪಗಳನ್ನೇ ಬಳಸಬೇಕು.
ಸಾಮಾನ್ಯವಾಗಿ ಸಲಾಡ್ ಹಾಗೂ ಅಲಂಕಾರಿಕ ಆಹಾರವಾಗಿ ಹೂಗಳನ್ನು ಬಳಸಬಹುದು. ಇತರೇ ಖಾದ್ಯಗಳಾದ ಬೇಕರಿ ಪದಾರ್ಥಗಳು, ಸಾಸ್, ಜೆಲ್ಲಿ, ಸಿರಪ್, ವಿನೆಗರ್, ಜೇನು, ಚಹಾ, ಸುಗಂಧಿತ ಸಕ್ಕರೆ, ಕ್ಯಾಂಡಿ, ವೈನ್ ಮತ್ತು ಸುವಾಸಿತ ಮದ್ಯಗಳಲ್ಲಿಯೂ ಹೂವುಗಳ ಸಾರವನ್ನು ಬಳಸಬಹುದು. ಹೂವುಗಳನ್ನು ತೊಳೆದು, ಬಟ್ಟೆಯ ಮಧ್ಯೆ ಇಟ್ಟು ಫ್ರಿಜ್‌ನಲ್ಲಿ ಇಟ್ಟುಕೊಂಡರೆ ಬೇಕಾದಾಗ ಬಳಸಬಹುದು. ಕೆಲವೊಂದು ಜಾತಿಯ ಹೂವುಗಳನ್ನು ಒಣಗಿಸಿಯೂ ಉಪಯೋಗಿಸಬಹುದು.
ಹೂಗಳ ಆಯ್ಕೆ, ಸಂಸ್ಕರಣೆ ಮತ್ತು ಶೇಖರಣೆ: ಮಾರುಕಟ್ಟೆಯಲ್ಲಿ ದೊರಕುವ ಹೆಚ್ಚಿನ ಹೂಗಳೆಲ್ಲವೂ ವಿಷಯುಕ್ತ ರಾಸಾಯನಿಕ (ಕೀಟನಾಶಕ)ಗಳಿಂದ ಸಿಂಪಡಿಸಿರುವುದರಿಂದ ಆಹಾರವಾಗಿ ಹೂಗಳನ್ನು ಆಯ್ಕೆ ಮಾಡುವಾಗ ಹೆಚ್ಚಿನ ಜಾಗರೂಕತೆ ಅತ್ಯಗತ್ಯ. ಈ ನಿಟ್ಟಿನಲ್ಲಿ ಸ್ವಂತ ಬೆಳೆಯುವುದೇ ಸೂಕ್ತ. ಇತ್ತೀಚೆಗೆ ಹಲವಾರು ಅಂಗಡಿಗಳಲ್ಲಿ ಖಾದ್ಯ ಪದಾರ್ಥಕ್ಕಾಗಿಯೇ ಮನೆಯಲ್ಲಿ ಬೆಳೆದ ಹೂವುಗಳು ಲಭ್ಯವಿರುತ್ತವೆ. ಅಂತಹ ಹೂವುಗಳನ್ನು ಕೊಳ್ಳುವುದೇ ಆದಲ್ಲಿ ಖಾದ್ಯ ಹೂವುಗಳ ಬಗ್ಗೆ ಸಂಪೂರ್ಣ ಮಾಹಿತಿ ತಿಳಿದಿರುವುದು ಕೂಡಾ ಆವಶ್ಯಕ. ಏಕೆಂದರೆ ಎಲ್ಲಾ ಹೂವುಗಳೂ ತಿನ್ನುವುದಕ್ಕೆ ಯೋಗ್ಯವಾಗುವುದಿಲ್ಲ.
ಖಾದ್ಯವಾಗಿ ಬಳಸಬಹುದಾದ ವಿವಿಧ ಸಸ್ಯಗಳ ಹೂವುಗಳು: ವಿವಿಧ ಅಲಂಕಾರಿಕ ಸಸ್ಯಗಳು, ತರಕಾರಿ ಗಿಡಗಳು, ಹಣ್ಣು ಹಾಗೂ ಔಷಧಿ ಮತ್ತು ಸುಗಂಧ ಸಸ್ಯಗಳಿಂದ ಆಹಾರವಾಗಿ ಹೂವುಗಳನ್ನು ಪಡೆಯಹುದು.
ಅಲಂಕಾರಿಕ ಸಸ್ಯಗಳು: ಗುಲಾಬಿ, ಕಾರ್ನೆಶನ್, ಸೇವಂತಿಗೆ, ದಾಸವಾಳ, ಮಲ್ಲಿಗೆ, ಚೆಂಡುಹೂ, ‘ಇಂಪೇಶಿಯನ್ಸ್’, ‘ಕಾಲೆಂಡುಲಾ’, ರುದ್ರಾಕ್ಷಿ ಹೂವು (ಬ್ಯಾಚುಲರ್ಸ್ ಬಟನ್’), ಲಿಲ್ಲಿ, ಬೆಂಡೆ ಹೂವು (‘ಹಾಲಿಹಾಕ್’), ‘ಪ್ಯಾನ್ಸಿ’, ‘ಬೆಗೋನಿಯ’, ‘ನಾಸ್ಪರ್ಶಿಯಂ’, ‘ವರ್ಬೆನಾ’ ಮುಂತಾದವುಗಳು.
ತರಕಾರಿಗಳು: ಬೆಳ್ಳುಳ್ಳಿ, ಬೆಂಡೆ, ಬಟಾಣಿ, ಮೂಲಂಗಿ, ಕುಂಬಳ ಇತ್ಯಾದಿ.
ಹಣ್ಣುಗಳು: ನಿಂಬೆ, ಸೀಬೆ
ಔಷಧಿ ಮತ್ತು ಸುಗಂಧ ಸಸ್ಯಗಳು: ತುಳಸಿ, ಪನ್ನೀರು ಪತ್ರೆ, ಲ್ಯಾವೆಂಡರ್, ‘ಅನೀಸ್’, ‘ಡಿಸ್ಕ್’, ‘ರೋಸ್‌ಮೆರಿ’ ‘ಥೈಮ್’, ‘ಚಮೊಮಿಲ್’ ಇತ್ಯಾದಿ.
ವಿಷಕಾರಿ ಸಸ್ಯಗಳ ಹೂವುಗಳು: ಗೊತ್ತು ಪರಿಚಯವಿಲ್ಲದ ಹೊಸ ಹೂವುಗಳನ್ನು ತಿನ್ನುವುದು ಸುರಕ್ಷಿತವಲ್ಲ. ‘ಅನಿಮೋನ್ ‘ , ಅಝೇಲಿಯ’, ಬಟರ್‌ಕಪ್, ಕ್ಯಾಲಾಲಿಲ್ಲಿ, ಡ್ಯಾಫೋಡಿಲ್, ಹಯಾಸಿಂಥ್, ಫಾಕ್ಸ್‌ಗ್ಲೋವ್, ಐರಿಸ್, ಮಾರ್ನಿಂಗ್‌ಗ್ಲೋರಿ, ಓಲಿಯಾಂಡರ್, ಪಾಯಿನ್‌ಸೆಟ್ಟಿಯ, ವಿಸ್ಟೀರಿಯ ಇತ್ಯಾದಿ ಹೂವುಗಳು ಮಾನವ ಜೀರ್ಣಾಂಗಕ್ಕೆ ಪಥ್ಯವೆನಿಸದೇ ಹೋಗಬಹುದು.
ಹೂವುಗಳ ಉತ್ಪನ್ನಗಳು: ಮಾರುಕಟ್ಟೆಯಲ್ಲಿ ಹಲವಾರು ವಿಧಗಳ ಖಾದ್ಯ ಹೂವುಗಳ ಉತ್ಪನ್ನಗಳು ಲಭ್ಯವಿದೆ. ಕ್ಯಾಂಡಿ (ಸಕ್ಕರೆಯಲ್ಲಿ ಅದ್ದಿದ) ಹೂವುಗಳು, ಹೂವುಗಳ ಸಲಾಡ್, ಗುಲಾಬಿಯ ಪನ್ನೀರು, ಗುಲ್ಕಂದ್ ಹೂವಿನ ವೈನ್, ಬೀರ್, ಜೆಲ್ಲಿ, ಜ್ಯಾಮ್, ಸಿರಪ್, ಎಸ್ಸೆನ್ಸ್, ಚೆಂಡುಹೂವಿನ ಕಸ್ಟರ್ಡ್ ಇತ್ಯಾದಿಗಳು ಅವುಗಳಲ್ಲಿ ಬಹು ಮುಖ್ಯವಾದವುಗಳು.
ದಶ ಸೂತ್ರಗಳು
- ಹೂವುಗಳು ತಿನ್ನಲು ಯೋಗ್ಯವೆಂದು ಖಚಿತಪಡಿಸಿಕೊಂಡ ನಂತರವೇ ಮುಂದುವರೆಯಿರಿ. ಹೊಸ ಹೂವುಗಳ ಬಗ್ಗೆ ಸರಿಯಾದ ಪುಸ್ತಕ ಅಥವಾ ಇತರೆ ಮೂಲಗಳಿಂದ ಮಾಹಿತಿ ಸಂಗ್ರಹಿಸಿದ ನಂತರವೇ ತಿನ್ನಲು ಮುಂದಾಗುವುದು ಒಳ್ಳೆಯದು.
- ಅಲಂಕರಿಸಿದ ಎಲ್ಲಾ ಹೂವುಗಳೂ ಖಾದ್ಯವೇ ಆಗಬೇಕಿಲ್ಲ. ಸಾಕಷ್ಟು ಹೂವುಗಳು ಕೇವಲ ಸೌಂದರ್ಯವರ್ಧನೆಗಾಗಿ ಮಾತ್ರ ಬಳಕೆಯಾಗಿರುತ್ತವೆ.
- ಹೂವ ಬೆಳೆಯಲು ಕೀಟ ನಾಶಕಗಳ ಬ ಳ ಕೆ ಅನಿವಾರ್ಯವೆನಿಸಿದಲ್ಲಿ, ಕಡಿಮೆ ಪ್ರಮಾಣದಲ್ಲಿ ಧೃಡೀಕರಿಸಿದ ಕೀಟ ನಾಶಕಗಳನ್ನು ಮಾತ್ರ ಬಳಸಿ.
- ಹೂವಿನ ಅಂಗಡಿ, ನರ್ಸರಿ, ಹೂವು ತೋಟಗಳಿಂದ ನೇರವಾಗಿ ಹೂಗಳನ್ನು ಕಿತ್ತು ತಿನ್ನಬೇಡಿ, ಅವುಗಳ ಮೇಲೆ ರಾಸಾಯನಿಕಗಳ ಸಿಂಪಡಣೆಯಾಗಿರಲೂಬಹುದು.
- ರಸ್ತೆ ಬದಿಯಲ್ಲಿ ಬೆಳೆದ ಹೂವುಗಳು ಬಳಕೆಗೆ ಅಷ್ಟೊಂದು ಸೂಕ್ತವಲ್ಲ. ವಿಷಯುಕ್ತ ಹೊಗೆ ಮತ್ತಿತರ ಮಾಲಿನ್ಯಗಳಿಂದಾಗಿ ಅವು ಕಲುಷಿತಗೊಂಡಿರಬಹುದು.
- ಹೂವುಗಳ ಪರಾಗ, ಕೇಸರ ಇತ್ಯಾದಿ ಭಾಗಗಳನ್ನು ತೆಗೆದು ಕೇವಲ ದಳ (ಪಕಳೆ) ಗಳನ್ನು ಮಾತ್ರ ಬಳಸಿ, ಹೂವುಗಳ ಸುವಾಸನೆ, ರುಚಿ, ಬಣ್ಣಗಳು ಸ್ಥಳದಿಂದ ಸ್ಥಳಕ್ಕೆ ವ್ಯತ್ಯಾಸವಾಗುತ್ತವೆ ಮತ್ತು ವಿವಿಧ ಋತುಗಳಲ್ಲಿಯೂ ಬದಲಾಗುತ್ತಿರುತ್ತವೆ.
- ಮೊದಲ ಬಾರಿಗೆ ಬಳಸುವಾಗ ಮಿತ ಪ್ರಮಾಣದಲ್ಲಿ ಬಳಸಿ. ತುಸುವೇ ಹೂಗಳನ್ನು ಆಹಾರ ಕ್ರಮದಲ್ಲಿ ಅಳವಡಿಸುವುದು ಒಳ್ಳೆಯದು.ಅಲರ್ಜಿ ಇತ್ಯಾದಿ ತೊಂದರೆಯುಳ್ಳವರು ತುಂಬಾ ಜಾಗರೂಕರಾಗಿರುವುದು ಅಗತ್ಯ. ವಿವಿಧ ಬಣ್ಣ, ರುಚಿಯುಳ್ಳ ಹೂಗಳನ್ನು ತಮ್ಮ ತಮ್ಮ ಅಭಿರುಚಿಗೆ ತಕ್ಕಂತೆ ಆಹಾರದಲ್ಲಿ ಪ್ರಯೋಗ ಮಾಡಲೂಬಹುದು.
ಹೂವುಗಳ ಉತ್ಪಾದನೆ: ನಾವು ನೆನಪಿನಲ್ಲಿಡಬೇಕಾದ ಅಂಶವೇನೆಂದರೆ, ಖಾದ್ಯ ಹೂಗಳನ್ನು ಮಾತ್ರವೇ ಬೆಳೆದು ಯಶಸ್ಸುಗಳಿಸುವುದು ಸಧ್ಯದ ಪರಿಸ್ಥಿತಿಯಲ್ಲಿ ಅಸಾಧ್ಯದ ಮಾತು. ಇತರೇ ಹೂವುಗಳು, ಸುಗಂಧ ದ್ರವ್ಯಗಳ ಸಸ್ಯಗಳೊಂದಿಗೆ ಖಾದ್ಯಹೂವುಗಳನ್ನೂ ಬೆಳೆದು, ಮಾರುಕಟ್ಟೆಯನ್ನು ಪ್ರವೇಶಿಸುವ ಪ್ರಯತ್ನ ಮಾಡಬೇಕು. ಖಾದ್ಯ ಹೂವುಗಳ ಮೌಲ್ಯವರ್ಧಿತ ಉತ್ಪನ್ನಗಳ ತಯಾರಿ ಈ ನಿಟ್ಟಿನಲ್ಲಿ ಸಹಕಾರಿಯಾಗಬಹುದು. ರಾಸಾಯನಿಕ ಬಳಸದೇ ವಿಷರಹಿತ ಹೂವುಗಳನ್ನು ಬೆಳೆಸುವುದೂ ಅತ್ಯಗತ್ಯ. ಸಾವಯವ ಕೃಷಿಕರಿಗೆ ಇದು ಸುಲಭ ಸಾಧ್ಯ.
ಮಾರುಕಟ್ಟೆ: ಯಾವುದೇ ಹೊಸ ಸಾಹಸಕ್ಕೆ ಕೈಹಾಕುವ ಮೊದಲು ಮಾರುಕಟ್ಟೆಯಲ್ಲಿನ ಬೇಡಿಕೆ, ಬೆಲೆ, ಲಭ್ಯತೆಗಳ ಏರಿಳಿತ ಇತ್ಯಾದಿ ಸ್ಥಿತಿಗತಿಗಳನ್ನು ಸೂಕ್ಷ್ಮವಾಗಿ ಗಮನಿಸಿ, ಅಧ್ಯಯನ ನಡೆಸುವುದು ಅತಿಮುಖ್ಯ. ಸಾಮಾನ್ಯವಾಗಿ ಹೊರನೋಟಕ್ಕೆ, ಮಾರುಕಟ್ಟೆಯಲ್ಲಿ ಖಾದ್ಯಹೂವುಗಳಿಗೆ ಯಾವುದೇ ಬೇಡಿಕೆ ಕಾಣಿಸದೇ ಇದ್ದರೂ ಕೆಲವೊಂದು ‘ವಿಶಿಷ್ಟ’ ಗ್ರಾಹಕರು ಈ ಉತ್ಪನ್ನಗಳನ್ನು ಖರೀದಿಸುತ್ತಾರೆ. ತಾರಾ ಹೋಟೆಲುಗಳ ಪಾಕತಜ್ಞರು, ಆಹಾರ ಶಾಸ್ತ್ರಜ್ಞರು ತಾವು ತಯಾರಿಸುವ ತಿಂಡಿತಿನಿಸುಗಳಲ್ಲಿ ಹೂವುಗಳನ್ನು ಬಳಸುವುದಕ್ಕೆ ಉತ್ಸುಕರಾಗಿರುತ್ತಾರೆ. ಅಂತಹ ವ್ಯಕ್ತಿಗಳೊಂದಿಗೆ ಸಂಪರ್ಕ ಸಾಧಿಸಿದರೆ ಸುಲಭವಾಗಿ ಮಾರುಕಟ್ಟೆಯ ಪ್ರವೇಶ ಸಾಧ್ಯ.
ಔಷಧೀಯ ಗುಣಗಳು: ಹಿಂದೆಲ್ಲಾ ಔಷಧೀಯ ಗುಣಗಳಿಗಾಗಿ ಹೂವುಗಳನ್ನು ಆಹಾರದಲ್ಲಿ ಬಳಸುತ್ತಿದ್ದರು. ಹೂವುಗಳು ಹಾಗೂ ಅವುಗಳ ವಿವಿಧ ಉತ್ಪನ್ನಗಳು ಹಲವಾರು ರೋಗಗಳನ್ನು ಗುಣಪಡಿಸುವ ಸಾಮರ್ಥ್ಯ ಹೊಂದಿವೆ. ಉದಾಹರಣೆಗೆ, ಗುಲಾಬಿಯ ಗುಲ್ಕಂದ್ ಒಂದು ಉತ್ತಮ ಟಾನಿಕ್ ಮತ್ತು ಸಾರಕ, ಜೀರ್ಣಕಾರಿ ಗುಣಗಳನ್ನು ಪಡೆದುಕೊಂಡಿದೆ. ಚೆಂಡುಹೂವಿನ ದಳಗಳು ಚರ್ಮವ್ಯಾಧಿಗೆ ಅತ್ಯುತ್ತಮ ಔಷಧ.
ಹೂವುಗಳ ತಾಜಾತನದ ಸಂರಕ್ಷಣೆ: ಹೂವುಗಳನ್ನು ಪ್ಲಾಸ್ಟಿಕ್ ಅಥವಾ ಪಾಲಿಥಿನ್ ಟ್ರೇಗಳಲ್ಲಿ ಇಟ್ಟು ನೀರನ್ನು ಚಿಮುಕಿಸಬೇಕು. ಪ್ಲಾಸ್ಟಿಕ್ ಹಾಳೆಯಿಂದ ಮುಚ್ಚಿ ಶೀತಲಗೃಹದಲ್ಲಿಟ್ಟು ತಾಜಾತನ ಉಳಿಸಿಕೊಳ್ಳಬಹುದು. ಈ ಟ್ರೇಗಳನ್ನು ಕಾರ್ಡ್‌ಬೋರ್ಡ್ ಪೆಟ್ಟಿಗೆಗಳಲ್ಲಿಟ್ಟು ದೂರದ ಊರುಗಳಿಗೆ ಸಾಗಿಸಬಹುದು. ಪೇಪರ್ ಟವಲ್‌ಗಳನ್ನೂ ಪ್ಯಾಕ್ ಮಾಡಲು ಬಳಸಿಕೊಳ್ಳುತ್ತಾರೆ. ಇತ್ತೀಚಿಗಿನ ತಂತ್ರಜ್ಞಾನ ಬಳಸಿ ಇಂಗಾಲದ ಡೈ ಆಕ್ಸೆಡ್ ಅನ್ನು ಪೆಟ್ಟಿಗೆಯೊಳಗೆ ತುಂಬಿ ಹೂವುಗಳ ಆಯುಷ್ಯಾಭಿವೃದ್ಧಿಯ ಯತ್ನವೂ ನಡೆದಿದೆ.
ಭವಿಷ್ಯದ ಬಗ್ಗೆ
ಖಾದ್ಯ ಹೂವುಗಳ ಜನಪ್ರಿಯತೆ ಇತ್ತೀಚೆಗೆ ಹೆಚ್ಚಾಗುತ್ತಾ ಬರುತ್ತಿದೆ. 1980ರ ದಶಕದ ನಂತರ ದೊಡ್ಡ ದೊಡ್ಡ ನಗರಗಳ ಉಪಹಾರ ಗೃಹಗಳು, ತಾರಾ ಹೋಟೆಲುಗಳು ತಮ್ಮ ಆಹಾರ, ತಿಂಡಿತಿನಿಸುಗಳನ್ನು ಅಲ೦ಕರಿಸಲು ಹೂವುಗಳನ್ನು ಬಳಸಲಾರಂಭಿಸಿದವು. ಮುಂದಿನ ದಿನಗಳಲ್ಲಿ ಖಾದ್ಯಹೂವುಗಳಿಗೆ ಇನ್ನೂ ಹೆಚ್ಚಿನ ಬೇಡಿಕೆ, ಜನಪ್ರಿಯತೆ ಸೃಷ್ಟಿಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಜುಟ್ಟಿನ ಮಲ್ಲಿಗೆಯೇ ಹೊಟ್ಟೆಗೆ ಹಿಟ್ಟಾಗುವ ದಿನ ದೂರವಿಲ್ಲ.