ಪ್ರಕಾಶ್ ಪವಾಡಿ' ಮತ್ತು ಶ್ರುತಿಶ್ರೀ ಸಿ', 'ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ, ಕತ್ತಲಗೆರೆ, ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ, ಬಬ್ಲೂ ಫಾರ್ಮ್, ಹಿರಿಯೂರು
ಕರ್ನಾಟಕ ರಾಜ್ಯದಲ್ಲಿ ಸುಮಾರು 5.65 ಲಕ್ಷ ಹೆ. ನಿಂತ ನೀರಿನ ಜಲ ಸಂಪನ್ಮೂಲಗಳಿದ್ದು, 82 ದೊಡ್ಡ ಜಲಾಶಯಗಳು, 3906 ಇಲಾಖೆ ಕೆರೆಗಳು ಮತ್ತು 23767 ಗ್ರಾಮ ಪಂಚಾಯತಿ ಕೆರೆಗಳಿವೆ. ಇವುಗಳ ಜೊತೆಗೆ 9000 ಕಿ.ಮೀ. ನಷ್ಟು ನದಿ ಮತ್ತು ನಾಲೆಗಳು ಹಾಗೂ 8000 ಹೆ. ನಷ್ಟು ಹಿನ್ನೀರು ಆವರಿಸಿಕೊಂಡಿದೆ. ಇವುಗಳಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ಮೀನುಗಾರಿಕೆಗೆ ವಿಫುಲ ಅವಕಾಶಗಳಿವೆ. ಜಿಲ್ಲೆಯಲ್ಲಿ 40 ಹೆಕ್ಟೇರ್ಗಿಂತ ಹೆಚ್ಚಿನ ಅಚ್ಚುಕಟ್ಟು ವಿಸ್ತಾರವಿರುವ 448 ಇಲಾಖೆ ಕೆರೆಗಳು, 40 ಹೆಕ್ಟೇರ್ಗಿಂತ ಕಡಿಮೆ ಇರುವ ಗ್ರಾಮ ಪಂಚಾಯತಿಗೆ ಒಳಪಡುವ ಕೆರೆಗಳು, 9: ಜಲಾಶಯಗಳು, ಮೀನು ಸಾಕಾಣಿಕೆ ಕೊಳಗಳು ಮತ್ತು ಕೃಷಿ ಹೊಂಡಗಳು ಸೇರಿ ಒಟ್ಟು 50 ಸಾವಿರ ಹೆಕ್ಟೇರ್ ಪ್ರದೇಶವನ್ನು ಹೊಂದಿದೆ. ಜಿಲ್ಲೆಯಲ್ಲಿ 09 ನದಿ ಭಾಗಗಳು ಇದ್ದು, ಒಟ್ಟು 245 ಕಿಲೋಮೀಟರ್ ಉದ್ದವನ್ನು ಹೊಂದಿದೆ.
ವಾರ್ಷಿಕ ಜಿಲ್ಲೆಯಲ್ಲಿ 2300 ಲಕ್ಷ ಮೀನು ಮರಿಗಳು ಇಲಾಖಾ ಮೀನುಮರಿ ಉತ್ಪಾದನಾ ಮತ್ತು ಪಾಲನಾ ಕೇಂದ್ರಗಳಿಂದ ಉತ್ಪತ್ತಿಯಾಗುತ್ತವೆ. ಜಿಲ್ಲೆಯಲ್ಲಿರುವ ಇಲಾಖಾ ಹಾಗೂ ಗ್ರಾಮ ಪಂಚಾಯತ್ ಕೆರೆಗಳಿಗೆ ಒಟ್ಟು 320 ಲಕ್ಷ ಮೀನು ಮರಿಗಳು ಬಿತ್ತನೆಯಾಗುತ್ತದೆ ಹಾಗೂ ವಾರ್ಷಿಕ ಜಿಲ್ಲೆಯಲ್ಲಿ 23454 ಟನ್ ಮೀನು ಉತ್ಪಾದನೆಯಾಗುತ್ತದೆ. ಜಿಲ್ಲೆಯಲ್ಲಿ ಒಟ್ಟು 5735 ಪೂರ್ಣಕಾಲಿಕ ಮೀನುಗಾರರು ಹಾಗೂ 3501 ಅರೆಕಾಲಿಕ ಮೀನುಗಾರರಿರುತ್ತಾರೆ. 12 ಮೀನುಗಾರರ ಸಹಕಾರ ಸಂಘಗಳು ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಕೆರೆಗಳನ್ನು ನೀರಿನ ಲಭ್ಯತೆಗೆ ಅನುಗುಣವಾಗಿ ವರ್ಷದಲ್ಲಿ 6 ರಿಂದ 8 ತಿಂಗಳವರೆಗೆ ನೀರಿನಿಂದ ತುಂಬಿರುವ ಕೆರೆಗಳು ಮತ್ತು ವರ್ಷವಿಡೀ ನೀರನ್ನು ಹೊಂದಿರುವ ಕೆರೆಗಳು ಎಂದು ವಿಂಗಡಿಸಲಾಗಿದೆ.
ಕೆರೆಗಳ ನಿರ್ವಹಣೆ: ದೀರ್ಘಾವಧಿ ಕೆರೆಗಳಲ್ಲಿ ಜಲಸಸ್ಯ ಕಳೆಗಳು ಮತ್ತು ಅನಗತ್ಯ ಹಾಗೂ ಹಾನಿಕಾರಕ ಮೀನುಗಳ ಹತೋಟಿ ಮುಖ್ಯ. ಕಳೆಗಳನ್ನು ಕಾಲಕಾಲಕ್ಕೆ ಕಿತ್ತು ಹಾಕುವುದರಿಂದ, ಶಿಫಾರಸ್ಸಿನಂತೆ ಕಳೆನಾಶಕಗಳನ್ನು ಬಳಸಿ ಇಲ್ಲವೆ, ಜೈವಿಕ ವಿಧಾನದಲ್ಲಿ ಹುಲ್ಲುಗೆಂಡೆ ಮೀನುಗಳನ್ನು ಬಿತ್ತಿ ಬೆಳೆಯುವುದರಿಂದ ನಿಯಮಿತವಾಗಿಟ್ಟು ಕೊಳ್ಳಬಹುದು. ಅಲ್ಪಾವಧಿ ಕೆರೆಗಳಲ್ಲಿ ನೀರು ಬೇಸಿಗೆ ಕಾಲದಲ್ಲಿ ಸಂಪೂರ್ಣವಾಗಿ ಬತ್ತಿ ಹೋಗುವುದರಿಂದ ಜಲ ಸಸ್ಯಗಳ ಮತ್ತು ಅನಗತ್ಯ ಹಾಗೂ ಹಾನಿಕಾರಕ ಮೀನುಗಳ ತೊಂದರೆಗಳು ಇರುವುದಿಲ್ಲ. ಕೆರೆಯಿಂದ ವ್ಯವಸ್ಥಿತ ರೀತಿಯಲ್ಲಿ ನೀರು ಹೊರಹೋಗುವಂತೆ ಟೂಬುಗಳನ್ನು ಹಾಕಬೇಕು. ಅಲ್ಲದೆ ಟೂಬಿನ ಬಾಯಿಯನ್ನು ಮರಿಗಳು ಹೊರಹೋಗದಂತೆ ಜಾಲರಿ ಅಳವಡಿಸಬೇಕು. ಕೆರೆಯ ಏರಿಯ ಮೇಲೆ ಕಾವಲುಗಾರಿಕೆಗಾಗಿ ಗುಡಿಸಲು ನಿರ್ಮಿಸಿಕೊಳ್ಳಬಹುದು.
ಕೆರೆಗಳ ಫಲವತ್ತತೆ: ನೀರಿನ ಆತ್ಮೀಯತೆಗೆ ಅನುಗುಣವಾಗಿ ಎಕರೆಗೆ ಸುಮಾರು 200-400 ಕಿ.ಗ್ರಾಂ ನಷ್ಟು ಸುಣ್ಣವನ್ನು ಹಾಕಿ ಸರಿಪಡಿಸ ಬೇಕು. ಸಾಧ್ಯವಾದ ಕಡೆ ಕೆರೆಗೆ ಮೀನು ಮರಿಗಳನ್ನು ಬಿಡುವ 7 ದಿನಗಳ ಮುಂಚಿತವಾಗಿ ಹಸಿ ಸಗಣಿ ಗೊಬ್ಬರವನ್ನು 1-2 ಟನ್ನಂತೆ ಇಲ್ಲವೆ 500 ಕಿ.ಗ್ರಾಂ ಕೋಳಿಗೊಬ್ಬರ; 20 ಕಿ.ಗ್ರಾಂ ಸೂಪಫಾಸ್ಟೇಟ್ ಮತ್ತು 10 ಕಿ.ಗ್ರಾಂ ಯೂರಿಯ ಗೊಬ್ಬರಗಳನ್ನು ಬಗ್ಗಡದ ರೂಪದಲ್ಲಿ ಕೆರೆಗೆ ಹಾಕಬೇಕು. ಮೀನುಗಳ ನೈಸರ್ಗಿಕ ಆಹಾರ ಉತ್ಪಾದನೆ ನಿರಂತರವಾಗಿರಲು ಪ್ರತಿ ತಿಂಗಳು 500 ಕಿ.ಗ್ರಾಂ ಸಗಣಿಗೊಬ್ಬರ ಇಲ್ಲವೆ 100-150 ಕಿ.ಗ್ರಾಂ ಕೋಳಿಗೊಬ್ಬರ, 10 ಕಿ.ಗ್ರಾಂ ಸೂಪರ್ ಫಾಸ್ಟೇಟ್ ಹಾಗೂ 5 ಕಿ.ಗ್ರಾಂ ಯೂರಿಯ ಹಾಕುತ್ತಿರಬೇಕು. ಸಾರ್ವಜನಿಕ ಕೆರೆಗಳಲ್ಲಿ ಮೀನು ಸಾಕಣೆ ಮಾಡುವಾಗ ಗೊಬ್ಬರ ಹಾಕುವುದನ್ನು ಸೂಕ್ಷ್ಮವಾಗಿ ಕೈಗೊಳ್ಳಬೇಕು.
ಮೀನು ಮರಿಗಳ ಬಿತ್ತನೆ: ಮೀನು ಮರಿಗಳ ಲಭ್ಯತೆಗೆ ಅನುಗುಣವಾಗಿ ಕಾಟ್ಲಿ, ರೋಹು, ಮೃಗಾಲ್ ಮೀನು ಮರಿಗಳನ್ನು 4:3:3 ರ ಅನುಪಾತದಲ್ಲಿ ಬಿತ್ತಬೇಕು. ಕೆರೆಯಲ್ಲಿ ಜಲಸಸ್ಯಗಳ ಲಭ್ಯತೆ ಇದ್ದಲ್ಲಿ ಮತ್ತು ನೀರು ಹಸಿರು ಬಣ್ಣವಿದ್ದಲ್ಲಿ ಬೆಳ್ಳಿಗೆಂಡೆ, ಹುಲ್ಲುಗೆಂಡೆ, ಸಾಮಾನ್ಯಗೆಂಡೆ ಮೀನುಮರಿಗಳನ್ನು ಸಹ ಕಾಟ, ರೋಹು, ಮೃಗಾಲ್ ಮೀನು ಮರಿಗಳ ಜೊತೆ 2,5:1,5:10:2.0:1.0:2.0 ರ ಅನುಪಾತದಲ್ಲಿ ಬಿತ್ತಬಹುದು. ಕೇವಲ ನೈಸರ್ಗಿಕ ಆಹಾರದ ಲಭ್ಯತೆಗೆ ಅನುಗುಣವಾಗಿ ಸಾಕಣೆ ಮಾಡುವುದಾದರೆ ಎಕರೆಗೆ 1500-2000 ಮರಿಗಳನ್ನು ಆಹಾರವನ್ನು ಒದಗಿಸುವುದಾದರೆ ಎಕರೆಗೆ 3000 ಮೀನುಮರಿಗಳವರೆಗೆ ಬಿತ್ತನೆ ಮಾಡಬಹುದು. ದೊಡ್ಡ ಗಾತ್ರದ ಮೀನು ಮರಿಗಳು ಹಾಗೂ ಬೆಳವಣಿಗೆ ಕುಂಠಿತ ಮೀನು ಮರಿಗಳನ್ನು ಬಿತ್ತುವುದು ಉತ್ತಮ. ಸಾಮಾನ್ಯವಾಗಿ ಕೆರೆಯಲ್ಲಿ ಹೆಚ್ಚು ನೀರು ತುಂಬಿದ ನಂತರ (ಆಗಸ್ಟ್ ಅಕ್ಟೋಬರ್) ಮೀನು ಮರಿಗಳನ್ನು ಬಿತ್ತನೆ ಮಾಡುವುದು ಸೂಕ್ತ.
ಮೀನು ಮರಿ ಬಿತ್ತನೆಯ ನಂತರದ ನಿರ್ವಹಣೆ: ಸಾಧ್ಯವಾದ ಕಡೆ ಕೆರೆಗಳಿಗೆ ಕಡಿಮೆ ಪ್ರಮಾಣದಲ್ಲಿ ಸಗಣಿ/ಕೊಟ್ಟಿಗೆ ಗೊಬ್ಬರವನ್ನು ಎಕರೆಗೆ ಪ್ರತಿ ತಿಂಗಳು 200-500 ಕೆ.ಜಿ. ಯಂತ ಹಾಕುವುದು. ಮೀನಿನ ಉತ್ತಮ ಬೆಳವಣಿಗೆಗೆ ಪೋಷಕ ಆಹಾರವಾಗಿ ಶೇಂಗಾ ಹಿಂಡಿ ಹಾಗೂ ಅಕ್ಕಿತೌಡನ್ನು 1:1 ರ ಪ್ರಮಾಣದಲ್ಲಿ ಬೆರೆಸಿ ಮೀನುಮರಿ ಬಿತ್ತನೆ ಮಾಡಿದ 2-3 ತಿಂಗಳ ನಂತರ ಪ್ರತಿ ದಿನ ನೀಡುವುದು ಉತ್ತಮ. ಒಂದು ಎಕರೆಗೆ ಪ್ರತಿ ದಿನ 2 ಕಿ.ಗ್ರಾಂ ನಂತೆ ಆಹಾರವನ್ನು ಕೊಡಬೇಕು. ಉತ್ತಮ ಬೆಳವಣಿಗೆಗೆ ಪ್ರತಿ ತಿಂಗಳು 1 ಕಿ.ಗ್ರಾಂ ನಂತೆ ಆಹಾರದ ಪ್ರಮಾಣವನ್ನು ಹೆಚ್ಚಿಸಬಹುದು.
ಮೀನುಗಳ ಬೆಳವಣಿಗೆ ಮತ್ತು ಮೀನು ಹಿಡಿಯುವುದು: ಕೆರೆಯಲ್ಲಿ ಸುಮಾರು 8 ರಿಂದ 10 ತಿಂಗಳು ಪಾಲನೆ ಮಾಡಿದ ಮೀನುಗಳು 0.6-0.75 ಕಿ.ಗ್ರಾಂ ನಿಂದ 1-1.25 ಕಿ.ಗ್ರಾಂ ವರೆಗೂ ಬೆಳೆಯಬಲ್ಲವು. ಬೇಸಿಗೆ ಕಾಲದಲ್ಲಿ ಕೆರೆಯಲ್ಲಿ ನೀರಿನ ಪ್ರಮಾಣ ಇಳಿಮುಖವಾಗುತ್ತಿರುವಾಗ ಮಾರುಕಟ್ಟೆಯ ಬೇಡಿಕೆಗೆ ಅನುಗುಣವಾಗಿ ಮೀನುಗಳನ್ನು ಹಿಡಿದು ಮಾರಾಟ ಮಾಡುವುದು ಸೂಕ್ತ. ಎಳೆ ಬಲೆ, ಬಿಡು ಬಲೆ ಹಾಗೂ ಬೀಸು ಬಲೆಗಳನ್ನು ಉಪಯೋಗಿಸಿ ಮೀನುಗಳನ್ನು ಹಿಡಿಯಬಹುದು. ಮೀನುಗಳ ಗುಣಮಟ್ಟ ಕೆಡದಂತೆ ವಿವಿಧ ಸಂಸ್ಕರಣಾ ವಿಧಾನಗಳಲ್ಲಿ ಸಂರಕ್ಷಿಸಿ ತಾಜಾತನದೊಂದಿಗೆ ಮಾರುಕಟ್ಟೆಗಳಿಗೆ ರವಾನಿಸುವುದು ಯೋಗ್ಯಕರ ಹಾಗೂ ಉತ್ತಮ ಬೆಲೆಗೆ ಮಾರಾಟವಾಗುತ್ತವೆ. ಗೊಬ್ಬರ ಆಧಾರಿತ ಮೀನು ಸಾಕಣೆಯಲ್ಲಿ ಉತ್ಪಾದನೆ ಕಡಿಮೆ (ಪ್ರತಿ ಎಕರೆಗೆ 400-600 ಕಿ.ಗ್ರಾಂ) ಮಾಡಬಹುದು. ಕೆರೆಯಲ್ಲಿ ಮೀನು 200-300 ಗ್ರಾಂ ತೂಕದಷ್ಟು ಬೆಳೆದ ನಂತರ ಕಾವಲು ವ್ಯವಸ್ಥೆ ಮಾಡಬೇಕಾಗುತ್ತದೆ. ಗೊಬ್ಬರ ಮತ್ತು ಆಹಾರವನ್ನು ನೀಡಿದ ಕೆರೆಗಳಲ್ಲಿ ಪ್ರತಿ ಎಕರೆಗೆ 800- 1000 ಕಿ.ಗ್ರಾಂ ಮೀನು ಉತ್ಪನ್ನ ಪಡೆಯಬಹುದಾಗಿದೆ.








