ಜಾಗತಿಕ ತಾಪಮಾನ ಏರಿಕೆ, ಅತಿವೃಷ್ಟಿ, ಅನಾವೃಷ್ಟಿ, ಅಸ್ಥಿರ ಮಳೆ ಹಾಗೂ ತಾಪಮಾನದಲ್ಲಿನ ತೀವ್ರ ಏರಿಳಿತಗಳು ಭಾರತೀಯ ಕೃಷಿಯ ಮೇಲೆ ನೇರ ಪರಿಣಾಮ ಬೀರುತ್ತಿವೆ. ಮಳೆಯನ್ನೇ ಹೆಚ್ಚಾಗಿ ಅವಲಂಬಿಸಿರುವ ಕೃಷಿ ವ್ಯವಸ್ಥೆಯಲ್ಲಿ ಇಂತಹ ಹವಾಮಾನ ವೈಪರೀತ್ಯಗಳು ಬೆಳೆ ಇಳುವರಿ ಮತ್ತು ರೈತರ ಆದಾಯದ ಮೇಲೆ ಪರಿಣಾಮ ಬೀರುತ್ತಿವೆ. ಈ ಸವಾಲುಗಳನ್ನು ಎದುರಿಸಲು ಭಾರತೀಯ ಕೃಷಿ ಅನುಸಂಧಾನ ಪರಿಷತ್ತು (ICAR) 2011ರಲ್ಲಿ ಹವಾಮಾನ ಸ್ಥಿತಿಸ್ಥಾಪಕ ಕೃಷಿಯ ರಾಷ್ಟ್ರೀಯ ಉಪಕ್ರಮ (NICRA) ಯೋಜನೆಯನ್ನು ಆರಂಭಿಸಿತು
ನಿಕ್ರಾ ಯೋಜನೆಯ ಉದ್ದೇಶವೇನು?
ಹವಾಮಾನ ಬದಲಾವಣೆಗೆ ಹೊಂದಿಕೊಳ್ಳುವ ಕೃಷಿ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುವುದು, ನೈಸರ್ಗಿಕ ಸಂಪನ್ಮೂಲಗಳನ್ನು ಸಂರಕ್ಷಿಸುವುದು ಮತ್ತು ರೈತರನ್ನು ಹವಾಮಾನ ಅಪಾಯಗಳಿಗೆ ಸನ್ನದ್ಧಗೊಳಿಸುವುದು ನಿಕ್ರಾ ಯೋಜನೆಯ ಪ್ರಮುಖ ಉದ್ದೇಶಗಳಾಗಿವೆ. ಬರ ಅಥವಾ ಅತಿವೃಷ್ಟಿಯಂತಹ ಪರಿಸ್ಥಿತಿಗಳಲ್ಲಿಯೂ ಬೆಳೆ ಉತ್ಪಾದನೆಯನ್ನು ಸಾಧ್ಯವಾದಷ್ಟು ಸ್ಥಿರವಾಗಿಡಲು ಸುಧಾರಿತ ಬೆಳೆ ತಳಿಗಳು, ನೀರು ಸಂರಕ್ಷಣೆ ಹಾಗೂ ಸಮಗ್ರ ಕೃಷಿ ಪದ್ಧತಿಗಳಿಗೆ ಒತ್ತು ನೀಡಲಾಗುತ್ತದೆ.
ಕೃಷಿ ವಿಜ್ಞಾನ ಕೇಂದ್ರಗಳ ಪ್ರಮುಖ ಪಾತ್ರ
ನಿಕ್ರಾ ಯೋಜನೆಯ ಅನುಷ್ಠಾನದಲ್ಲಿ ಕೃಷಿ ವಿಜ್ಞಾನ ಕೇಂದ್ರಗಳು ಪ್ರಮುಖ ಪಾತ್ರ ವಹಿಸುತ್ತವೆ. ಆಯ್ದ ಗ್ರಾಮಗಳಲ್ಲಿ ಸ್ಥಳೀಯ ಹವಾಮಾನ ಸಮಸ್ಯೆಗಳನ್ನು ಗುರುತಿಸಿ, ಬೆಳೆ ಉತ್ಪಾದನೆ, ನೈಸರ್ಗಿಕ ಸಂಪನ್ಮೂಲ ನಿರ್ವಹಣೆ ಮತ್ತು ಪಶುಸಂಗೋಪನೆಗೆ ಸಂಬಂಧಿಸಿದ ತಂತ್ರಜ್ಞಾನಗಳನ್ನು ರೈತರ ಹೊಲಗಳಲ್ಲಿ ಪ್ರಾಯೋಗಿಕವಾಗಿ ಅಳವಡಿಸಲಾಗುತ್ತದೆ
ಚಿತ್ರದುರ್ಗ ಜಿಲ್ಲೆಯ ಚೆಳ್ಳಕೆರೆ ತಾಲೂಕಿನ ಯಲಗಟ್ಟು ಗ್ರಾಮ ಇದಕ್ಕೆ ಉತ್ತಮ ಉದಾಹರಣೆಯಾಗಿದೆ. ಅಸ್ಥಿರ ಮಳೆ ಮತ್ತು ಒಣ ಹವಾಮಾನದ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಇಲ್ಲಿ ಬರಸಹನಶೀಲ ಬೆಳೆ ತಳಿಗಳು, ಅಂತರ ಬೆಳೆ ಪದ್ಧತಿ, ಕೃಷಿ ಹೊಂಡಗಳು, ಮಣ್ಣಿನ ತೇವಾಂಶ ಸಂರಕ್ಷಣೆ ಮತ್ತು ಸಮಗ್ರ ಕೃಷಿ ವ್ಯವಸ್ಥೆಗಳನ್ನು ಉತ್ತೇಜಿಸಲಾಗಿದೆ.
ನೀರು ಮತ್ತು ಮಣ್ಣಿನ ಸಂರಕ್ಷಣೆಗೆ ಆದ್ಯತೆ
ಮಳೆನೀರನ್ನು ಸಂಗ್ರಹಿಸಲು ಕೃಷಿ ಹೊಂಡಗಳನ್ನು ನಿರ್ಮಿಸುವುದು, ಅಗತ್ಯವಿದ್ದಲ್ಲಿ ಪ್ಲಾಸ್ಟಿಕ್ ಲೈನಿಂಗ್ ಅಳವಡಿಸುವುದು ಹಾಗೂ ಮಣ್ಣಿನ ತೇವಾಂಶ ಉಳಿಸಲು ಬಂಡು ನಿರ್ಮಾಣ ಮಾಡುವುದು ಪ್ರಮುಖ ಕ್ರಮಗಳಾಗಿವೆ. ಮಣ್ಣಿನ ಆರೋಗ್ಯ ಕಾರ್ಡ್ ಮೂಲಕ ಮಣ್ಣಿನ ಪೋಷಕಾಂಶಗಳನ್ನು ಪರೀಕ್ಷಿಸಿ, ಅಗತ್ಯಕ್ಕೆ ತಕ್ಕಂತೆ ರಸಗೊಬ್ಬರ ಬಳಕೆಗೆ ರೈತರಿಗೆ ಮಾರ್ಗದರ್ಶನ ನೀಡಲಾಗುತ್ತಿದೆ.
ಇದರ ಜೊತೆಗೆ ಹವಾಮಾನ ಮುನ್ಸೂಚನೆ ಆಧಾರಿತ ಕೃಷಿ ಸಲಹೆಗಳನ್ನು ರೈತರಿಗೆ SMS ಮೂಲಕ ನೀಡಲಾಗುತ್ತಿದ್ದು, ಬಿತ್ತನೆ, ನೀರಾವರಿ, ರಸಗೊಬ್ಬರ ಮತ್ತು ಬೆಳೆ ಸಂರಕ್ಷಣೆಯ ಕುರಿತು ಸಮಯೋಚಿತ ನಿರ್ಧಾರ ಕೈಗೊಳ್ಳಲು ಸಹಾಯವಾಗುತ್ತಿದೆ.
ರೈತರ ಆದಾಯ ಮತ್ತು ಕೃಷಿಯ ಸ್ಥಿತಿಸ್ಥಾಪಕತ್ವ
ಸುಧಾರಿತ ತಳಿಗಳು, ನೀರು ನಿರ್ವಹಣೆ, ಕೃಷಿ ಯಾಂತ್ರೀಕರಣ, ಪಶುಸಂಗೋಪನೆ ಹಾಗೂ ತರಬೇತಿಗಳ ಸಮನ್ವಯದಿಂದ ರೈತರ ಉತ್ಪಾದಕತೆ ಮತ್ತು ಆದಾಯದಲ್ಲಿ ಸುಧಾರಣೆ ಕಂಡುಬಂದಿದೆ. ಬೀಜ ಮತ್ತು ಮೇವು ಬ್ಯಾಂಕುಗಳು ಬರದ ಸಂದರ್ಭಗಳಲ್ಲಿ ರೈತರಿಗೆ ಅಗತ್ಯ ಸಂಪನ್ಮೂಲಗಳನ್ನು ಒದಗಿಸುವಲ್ಲಿ ಸಹಕಾರಿಯಾಗಿವೆ.
ಹವಾಮಾನ ಬದಲಾವಣೆ ಕೇವಲ ಪರಿಸರದ ಸಮಸ್ಯೆಯಲ್ಲ; ಅದು ರೈತರ ಬದುಕು ಮತ್ತು ಆಹಾರ ಭದ್ರತೆಯ ಪ್ರಶ್ನೆಯೂ ಹೌದು. ಆದ್ದರಿಂದ ವಿಜ್ಞಾನ, ಸ್ಥಳೀಯ ಜ್ಞಾನ ಮತ್ತು ರೈತರ ಅನುಭವಗಳನ್ನು ಒಟ್ಟುಗೂಡಿಸುವ ನಿಕ್ರಾ ಯೋಜನೆಯಂತಹ ಹವಾಮಾನ ಸ್ಥಿತಿಸ್ಥಾಪಕ ಕೃಷಿ ಮಾದರಿಗಳನ್ನು ಮತ್ತಷ್ಟು ವಿಸ್ತರಿಸುವುದು ಭವಿಷ್ಯದ ಸುಸ್ಥಿರ ಕೃಷಿಗೆ ಅತ್ಯಂತ ಅಗತ್ಯವಾಗಿದೆ.
ಹವಾಮಾನ ಬದಲಾವಣೆಗೆ ತಕ್ಕ ಕೃಷಿ ಪದ್ಧತಿಗಳು ಮತ್ತು ಆಧುನಿಕ ಕೃಷಿ ತಂತ್ರಜ್ಞಾನಗಳ ಕುರಿತು ಇನ್ನಷ್ಟು ತಿಳಿದುಕೊಳ್ಳಿ.








