ಭಾರತವು ಕೃಷಿ ಪ್ರಧಾನ ರಾಷ್ಟ್ರವಾಗಿದ್ದು, ದೇಶದ ಒಟ್ಟು ಆರ್ಥಿಕ ಉತ್ಪಾದನೆಯಲ್ಲಿ ಕೃಷಿಯ ಪಾಲು ಸುಮಾರು ಶೇಕಡಾ 18.00 ರಿಂದ 20.00 ರಷ್ಟಿದೆ. ದೇಶದ ಕಾರ್ಮಿಕ ಶಕ್ತಿಯ ಶೇಕಡಾ 45.00 ರಷ್ಟು ಜನರು ಕೃಷಿ ಕ್ಷೇತ್ರದ ಮೇಲೆ ಅವಲಂಬಿತರಾಗಿದ್ದಾರೆ. ಆಹಾರ ಭದ್ರತೆ, ಗ್ರಾಮೀಣ ಉದ್ಯೋಗ ಮತ್ತು ಜೀವನೋಪಾಯದ ದೃಷ್ಟಿಯಿಂದ ಕೃಷಿಯು ಪ್ರಮುಖ ಪಾತ್ರ ವಹಿಸುತ್ತದೆ. ಪ್ರಸ್ತುತ ಇಂತಹ ಮಹತ್ವದ ಕ್ಷೇತ್ರದಲ್ಲಿ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನಗಳ ಬಳಕೆ ಕೃಷಿಯನ್ನು ಇನ್ನಷ್ಟು ಸುಧಾರಿತ, ಪರಿಣಾಮಕಾರಿ ಹಾಗೂ ಲಾಭದಾಯಕವಾಗಿಸುತ್ತಿದ್ದು, ಆಧುನಿಕ ವಿಸ್ತರಣಾ ವ್ಯವಸ್ಥೆಗೆ ಹೊಸ ದಿಕ್ಕು ನೀಡುತ್ತಿದೆ.
ಡಿಜಿಟಲ್ ಕೃಷಿ ಸಲಹಾ ಸೇವೆಗಳು ಮತ್ತು ತಂತ್ರಜ್ಞಾನಗಳ ಪಾತ್ರ
ಇತ್ತೀಚಿನ ವರ್ಷಗಳಲ್ಲಿ ಮೊಬೈಲ್ ಫೋನ್, ಇಂಟರ್ನೆಟ್, ಕೃತಕ ಬುದ್ಧಿಮತ್ತೆ (AI), ಡೇಟಾ ವಿಶ್ಲೇಷಣೆ ಮತ್ತು ಡಿಜಿಟಲ್ ವೇದಿಕೆಗಳ ಬೆಳವಣಿಗೆಯಿಂದ ಕೃಷಿ ವಿಸ್ತರಣೆ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ ಕಂಡುಬಂದಿದೆ. ಈ ತಂತ್ರಜ್ಞಾನಗಳು ರೈತರಿಗೆ ಸಮಯಕ್ಕೆ ಸರಿಯಾಗಿ, ಅವರ ಪ್ರದೇಶ ಮತ್ತು ಅಗತ್ಯಗಳಿಗೆ ಅನುಗುಣವಾದ ಮಾಹಿತಿಯನ್ನು ಒದಗಿಸುತ್ತಿವೆ.
- ಸೇವೆಗಳ ವ್ಯಾಪ್ತಿ: ಹವಾಮಾನ ಮುನ್ಸೂಚನೆ, ಕೀಟ ಮತ್ತು ರೋಗ ನಿರ್ವಹಣೆ, ಮಣ್ಣು ಆರೋಗ್ಯ, ಬೆಳೆ ನಿರ್ವಹಣೆ, ಮಾರುಕಟ್ಟೆ ಬೆಲೆಗಳು ಹಾಗೂ ಸರ್ಕಾರದ ಯೋಜನೆಗಳ ಮಾಹಿತಿ ರೈತರಿಗೆ ವೇಗವಾಗಿ ತಲುಪುತ್ತಿದೆ.
- ಮಾಹಿತಿ ತಲುಪಿಸುವ ಮಾಧ್ಯಮಗಳು: ಮೊಬೈಲ್ ಅಪ್ಲಿಕೇಶನ್ಗಳು, ಎಸ್ಎಮ್ಎಸ್ ಸಂದೇಶಗಳು, ಐವಿಆರ್ಎಸ್ (ಧ್ವನಿ ಆಧಾರಿತ ಸೇವೆಗಳು), ವಾಟ್ಸಾಪ್ ಗುಂಪುಗಳು, ವೆಬ್ ಪೋರ್ಟಲ್ಗಳು ಮತ್ತು ಸಾಮಾಜಿಕ ಮಾಧ್ಯಮಗಳ ಮೂಲಕ ಮಾಹಿತಿ ನೀಡಲಾಗುತ್ತಿದೆ.
- ಸಂಪರ್ಕದ ಸುಲಭತೆ: ಭಾರತದಲ್ಲಿ ಒಂದು ವಿಸ್ತರಣಾಧಿಕಾರಿಗೆ ಸುಮಾರು 800-1000 ರೈತರಿರುವ ಪರಿಸ್ಥಿತಿಯಲ್ಲಿ, ಡಿಜಿಟಲ್ ವೇದಿಕೆಗಳು ಕನಿಷ್ಠ ವೆಚ್ಚದಲ್ಲಿ ಹೆಚ್ಚಿನ ರೈತರಿಗೆ ತಲುಪಲು ನೆರವಾಗುತ್ತವೆ.
ಭಾರತ ಮತ್ತು ಕರ್ನಾಟಕದಲ್ಲಿ ಡಿಜಿಟಲ್ ಸೇವೆಗಳ ಪ್ರವೇಶ ದರ (ಅಂಕಿಅಂಶಗಳು)
ಭಾರತ ಸರ್ಕಾರದ ವರದಿ (2023) ಹಾಗೂ ವಿವಿಧ ಅಧ್ಯಯನಗಳ ಪ್ರಕಾರ, ಭಾರತದ ಗ್ರಾಮೀಣ ಪ್ರದೇಶಗಳು ಮತ್ತು ಕರ್ನಾಟಕ ರಾಜ್ಯದಲ್ಲಿ ಮೊಬೈಲ್ ಹಾಗೂ ಇಂಟರ್ನೆಟ್ ಬಳಕೆ ಪ್ರಮಾಣ ಶರವೇಗದಲ್ಲಿ ಹೆಚ್ಚುತ್ತಿದೆ.
ಡಿಜಿಟಲ್ ಸೇವೆಗಳ ಪ್ರವೇಶ - ಗ್ರಾಮೀಣ ಭಾರತ ಹಾಗೂ ಕರ್ನಾಟಕ
ಪ್ರದೇಶ | ಮೊಬೈಲ್ ಬಳಕೆ (%) | ಇಂಟರ್ನೆಟ್ ಬಳಕೆ (%) |
ಗ್ರಾಮೀಣ ಭಾರತ | 72.00 | 48.00 |
ಕರ್ನಾಟಕ (ಒಟ್ಟು) | 78.00 | 58.00 |
ಗ್ರಾಮೀಣ ಕರ್ನಾಟಕ | 75.00 | 52.00 |
ಗ್ರಾಮೀಣ ಕರ್ನಾಟಕದಲ್ಲಿ ಡಿಜಿಟಲ್ ಪ್ರವೇಶದ ಮಟ್ಟ ಹೆಚ್ಚುತ್ತಿರುವುದು ಕೃಷಿ ಕ್ಷೇತ್ರದಲ್ಲಿ ಡಿಜಿಟಲ್ ಸಲಹಾ ಸೇವೆಗಳ ವಿಸ್ತರಣೆಗೆ ಅನುಕೂಲಕರ ವಾತಾವರಣವನ್ನು ನಿರ್ಮಿಸುತ್ತಿದೆ.
ಡಿಜಿಟಲ್ ಕೃಷಿ ಸಲಹೆಗಳಿಂದ ರೈತರಿಗೆ ಸಿಗುವ ಪ್ರಯೋಜನಗಳು
ಅಧ್ಯಯನಗಳ ಪ್ರಕಾರ, ಡಿಜಿಟಲ್ ಕೃಷಿ ಸಲಹೆಗಳನ್ನು ಬಳಸುವ ರೈತರಲ್ಲಿ ಉತ್ಪಾದನೆ ಮತ್ತು ಆದಾಯದಲ್ಲಿ ಗಣನೀಯ ಸುಧಾರಣೆ ಕಂಡುಬಂದಿದೆ. ಭಾರತದಲ್ಲಿ ಶೇಕಡಾ 86.00 ರಷ್ಟು ರೈತರು ಸಣ್ಣ ಮತ್ತು ಕಡಿಮೆ ಭೂಮಿ ಹೊಂದಿರುವುದರಿಂದ, ಸೂಕ್ತ ಸಲಹೆಗಳು ಅವರ ಕೃಷಿ ವೆಚ್ಚವನ್ನು ತಗ್ಗಿಸಿ ಲಾಭ ಹೆಚ್ಚಿಸುತ್ತವೆ.
ಡಿಜಿಟಲ್ ಕೃಷಿ ಸಲಹೆಗಳ ಪರಿಣಾಮ (ಪ್ರಮಾಣ ಶೇಕಡಾವಾರು)
ಕ್ರ.ಸಂ. | ಅಂಶ | ಪ್ರಮಾಣ (%) |
1 | ಬೆಳೆ ಉತ್ಪಾದನೆ ಹೆಚ್ಚಳ | 10.00 – 25.00 |
2 | ಉತ್ಪಾದನಾ ವೆಚ್ಚದ ಕಡಿತ | 15.00 – 20.00 |
3 | ಲಾಭದ ಹೆಚ್ಚಳ | 12.00 – 20.00 |
4 | ಬೆಳೆ ನಷ್ಟ ಕಡಿತ (ಹವಾಮಾನ ಆಧಾರಿತ ಸಲಹೆಗಳು) | ಸುಮಾರು 18.00 |
ಇದರೊಂದಿಗೆ, ಹವಾಮಾನ ಆಧಾರಿತ ಕೃಷಿ ಸಲಹೆಗಳು (IMD ಮತ್ತು ICAR ಮೂಲಕ) ಬೆಳೆ ಉತ್ಪಾದನೆಯನ್ನು 10.00-25.00% ಹೆಚ್ಚಿಸಿ, ಒಳಹರಿವಿನ ವೆಚ್ಚವನ್ನು 10.00-15.00% ನಷ್ಟು ಕಡಿಮೆ ಮಾಡಿವೆ. eNAM ಮುಂತಾದ ಡಿಜಿಟಲ್ ಮಾರುಕಟ್ಟೆ ವೇದಿಕೆಗಳು ಬೆಳೆ ಮಾಹಿತಿಯನ್ನು ಪಾರದರ್ಶಕವಾಗಿಸಿ ರೈತರಿಗೆ ಸರಿಯಾದ ಮಾರಾಟ ನಿರ್ಧಾರ ತೆಗೆದುಕೊಳ್ಳಲು ನೆರವಾಗುತ್ತಿವೆ. ರಿಮೋಟ್ ಸೆನ್ಸಿಂಗ್ ಮೂಲಕ ರಸಗೊಬ್ಬರ ಮತ್ತು ಕೀಟನಾಶಕ ಬಳಕೆಯನ್ನು 15.00-20.00% ನಷ್ಟು ಕಡಿಮೆ ಮಾಡಲು ಸಾಧ್ಯವಾಗಿದೆ.
ಡಿಜಿಟಲ್ ಅಳವಡಿಕೆಯಲ್ಲಿರುವ ಆಡಚಣೆಗಳು ಮತ್ತು ಪರಿಹಾರ ಕ್ರಮಗಳು
ಡಿಜಿಟಲ್ ಸೇವೆಗಳು ವಿಸ್ತರಣೆಯಾಗುತ್ತಿದ್ದರೂ, ಗ್ರಾಮೀಣ ಪ್ರದೇಶಗಳಲ್ಲಿ ಇಂಟರ್ನೆಟ್ ಕೊರತೆ, ವಿದ್ಯುತ್ ಸಮಸ್ಯೆ, ಕಡಿಮೆ ಡಿಜಿಟಲ್ ಮೂಲಸೌಕರ್ಯ ಮತ್ತು ಭಾಷಾ ಆಡಚಣೆಗಳು ಪ್ರಮುಖ ಸವಾಲುಗಳಾಗಿವೆ. ಗ್ರಾಮೀಣ ರೈತರಲ್ಲಿ ಕೇವಲ 35.00% ಜನರಿಗೆ ಮಾತ್ರ ಡಿಜಿಟಲ್ ಸಾಧನಗಳ ಪರಿಣಾಮಕಾರಿ ಬಳಕೆ ತಿಳಿದಿದ್ದು, ಮಹಿಳಾ ರೈತರಲ್ಲಿ ಈ ಪ್ರಮಾಣ ಸುಮಾರು 22.00% ರಷ್ಟಿದೆ.
ಡಿಜಿಟಲ್ ಬಳಕೆಯ ಆಡಚಣೆಗಳು
ಕ್ರ.ಸಂ. | ಸಮಸ್ಯೆ | ಪ್ರಮಾಣ (%) |
1 | ಡಿಜಿಟಲ್ ಅಜ್ಞಾನ | 40 |
2 | ಸಂಪರ್ಕದ ಕೊರತೆ | 32 |
3 | ಭಾಷಾ ಸಮಸ್ಯೆ | 18 |
4 | ಆರ್ಥಿಕ ಆಡಚಣೆ | 10 |
ಪರಿಹಾರ ಕ್ರಮಗಳು:
- ಗ್ರಾಮೀಣ ಪ್ರದೇಶಗಳಲ್ಲಿ ಇಂಟರ್ನೆಟ್, ವಿದ್ಯುತ್ ಮತ್ತು ಮೊಬೈಲ್ ನೆಟ್ವರ್ಕ್ ಮೂಲಸೌಕರ್ಯವನ್ನು ವೃದ್ಧಿಸುವುದು.
- ರೈತರಿಗಾಗಿ ಸಮಗ್ರ ಡಿಜಿಟಲ್ ತರಬೇತಿ ಕಾರ್ಯಕ್ರಮಗಳನ್ನು ರೂಪಿಸುವುದು.
- ಸ್ಥಳೀಯ ಭಾಷೆಗಳಲ್ಲಿ ಸಲಹೆಗಳನ್ನು ಅಭಿವೃದ್ಧಿಪಡಿಸುವ ಮೂಲಕ ಭಾಷಾ ಆಡಚಣೆ ಕಡಿಮೆ ಮಾಡುವುದು.
- ಖಾಸಗಿ ಸಂಸ್ಥೆಗಳು ಮತ್ತು ಸರ್ಕಾರಿ ಸಂಸ್ಥೆಗಳ ನಡುವೆ ದೀರ್ಘಾವಧಿ ಸಹಭಾಗಿತ್ವವನ್ನು ಬಲಪಡಿಸುವುದು.
ಮುಖ್ಯ ಅಂಶಗಳು
- ಭಾರತದ ಶೇಕಡಾ 45.00 ರಷ್ಟು ಕಾರ್ಮಿಕ ಶಕ್ತಿ ಕೃಷಿ ಕ್ಷೇತ್ರವನ್ನು ಅವಲಂಬಿಸಿದೆ.
- ಗ್ರಾಮೀಣ ಕರ್ನಾಟಕದಲ್ಲಿ ಮೊಬೈಲ್ ಬಳಕೆ ಶೇಕಡಾ 75.00 ಹಾಗೂ ಇಂಟರ್ನೆಟ್ ಬಳಕೆ ಶೇಕಡಾ 52.00 ರಷ್ಟಿದೆ.
- ಡಿಜಿಟಲ್ ಸಲಹೆಗಳಿಂದ ಬೆಳೆ ಉತ್ಪಾದನೆ 10.00-25.00% ಹೆಚ್ಚಲಿದ್ದು, ಉತ್ಪಾದನಾ ವೆಚ್ಚ 15.00-20.00% ಕಡಿತಗೊಳ್ಳುತ್ತದೆ.
- ಹವಾಮಾನ ಆಧಾರಿತ ಸಲಹೆಗಳಿಂದ ಬೆಳೆ ನಷ್ಟವನ್ನು ಸುಮಾರು 18.00% ನಷ್ಟು ಕಡಿಮೆ ಮಾಡಬಹುದು.
- ಗ್ರಾಮೀಣ ಪ್ರದೇಶಗಳಲ್ಲಿ ಶೇಕಡಾ 40 ರಷ್ಟು ಡಿಜಿಟಲ್ ಅಜ್ಞಾನ ಮತ್ತು ಶೇಕಡಾ 32 ರಷ್ಟು ಸಂಪರ್ಕದ ಕೊರತೆ ಪ್ರಮುಖ ಆಡಚಣೆಗಳಾಗಿವೆ.
ಸಮಾರೋಪ
ಡಿಜಿಟಲ್ ಕೃಷಿ ವಿಸ್ತರಣಾ ಸೇವೆಗಳು ಉತ್ಪಾದನೆ ಹೆಚ್ಚಿಸಲು, ವೆಚ್ಚ ಕಡಿಮೆ ಮಾಡಲು ಮತ್ತು ರೈತರ ಆದಾಯ ಸುಧಾರಿಸಲು ಪ್ರಬಲ ಸಾಧನಗಳಾಗಿವೆ. ಸೂಕ್ತ ತರಬೇತಿ, ಮೂಲಸೌಕರ್ಯ ವೃದ್ಧಿ ಮತ್ತು ಸ್ಥಳೀಯ ಭಾಷೆಗಳಲ್ಲಿ ಮಾಹಿತಿ ಲಭ್ಯತೆಯ ಮೂಲಕ ಈ ತಂತ್ರಜ್ಞಾನಗಳನ್ನು ಸಮಗ್ರವಾಗಿ ಅನುಷ್ಠಾನಗೊಳಿಸಿದರೆ, ಕೃಷಿಯನ್ನು ಹೆಚ್ಚು ಲಾಭದಾಯಕ, ಸ್ಥಿರ ಹಾಗೂ ಹವಾಮಾನ ಬದಲಾವಣೆಗೆ ಪ್ರತಿರೋಧಕವಾಗಿಸಲು ಸಾಧ್ಯವಿದೆ.
ಇನ್ನಷ್ಟು ಉಪಯುಕ್ತ ಕೃಷಿ ಮಾಹಿತಿ ಹಾಗೂ ತಜ್ಞರ ಸಲಹೆಗಳಿಗಾಗಿ ನಮ್ಮ ವೆಬ್ಸೈಟ್ಗೆ ಭೇಟಿ ನೀಡಿ.








