ಸೂರ್ಯಕಾಂತಿಯು ಕರ್ನಾಟಕ ರಾಜ್ಯದ ಪ್ರಮುಖ ಎಣ್ಣೆಕಾಳು ಬೆಳೆಯಾಗಿದ್ದು, ಕರ್ನಾಟಕವನ್ನು “ಸೂರ್ಯಕಾಂತಿ ರಾಜ್ಯ” ಎಂದು ಕರೆಯಲಾಗುತ್ತದೆ. ಸೂರ್ಯಕಾಂತಿಯು ವರ್ಷದ ಮೂರು – ಹಂಗಾಮಿನಲ್ಲಿ ಬೆಳೆಯಬಹುದಾದ, ಅಲ್ಪಾವಧಿಯ ಕಡಿಮೆ ಖರ್ಚಿನಲ್ಲಿ ಅಧಿಕ ಲಾಭವನ್ನು ತರಬಹುದಾದ ಬೆಳೆ ಆಗಿರುವುದರಿಂದ, ಪ್ರಸ್ತುತ ರಾಜ್ಯದಲ್ಲಿ ಸೂರ್ಯಕಾಂತಿ ಬೆಳೆಯನ್ನು 1.89 ಲಕ್ಷ ಹೆ. ಪ್ರದೇಶದಲ್ಲಿ ಬೆಳೆದು 0.99 ಲಕ್ಷ ಟನ್ಗಳಷ್ಟು ಸೂರ್ಯಕಾಂತಿಯನ್ನು ಉತ್ಪಾದಿಸಲಾಗುತ್ತಿದೆ. ಸೂರ್ಯಕಾಂತಿ ಬೀಜದಲ್ಲಿ ಶೇ. 40-45 ರಷ್ಟು ಎಣ್ಣೆ ಅಂಶವಿದ್ದು, ಸೂರ್ಯಕಾಂತಿ ಎಣ್ಣೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಆರೋಗ್ಯಕ್ಕೆ ಪೂರಕವಾದ ಬಹು ಅಪರ್ಯಾಪ್ತ ಕೊಬ್ಬಿನಾಮ್ಲ ಇರುವುದರಿಂದ ಸೂರ್ಯಕಾಂತಿ ಎಣ್ಣೆಯು ಆರೋಗ್ಯಕ್ಕೆ ಹೆಚ್ಚು ಉಪಯೋಗಕಾರಿ ಎನಿಸಿಕೊಂಡಿದೆ.
ಕರ್ನಾಟಕ ರಾಜ್ಯಕ್ಕೆ ಶಿಫಾರಸ್ಸು ಮಾಡಿರುವ ತಳಿಗಳು
ಕ್ರ.ಸಂ. | ಸಂಕರಣ ತಳಿಗಳು | ಕಾಲಾವಧಿ (ದಿವಸಗಳು) | ಎಣ್ಣೆಯ ಪ್ರಮಾಣ (ಶೇ.) |
|---|---|---|---|
1 | ಕೆ.ಬಿ.ಎಸ್.ಹೆಚ್-1 | 90–92 | 42–44 |
2 | ಕೆ.ಬಿ.ಎಸ್.ಹೆಚ್-42 | 90–95 | 40–42 |
3 | ಕೆ.ಬಿ.ಎಸ್.ಹೆಚ್-44 | 95–100 | 38–40 |
4 | ಕೆ.ಬಿ.ಎಸ್.ಹೆಚ್-53 | 95–100 | 42–44 |
5 | ಕೆ.ಬಿ.ಎಸ್.ಹೆಚ್-78 | 80–85 | 39–41 |
6 | ಕೆ.ಬಿ.ಎಸ್.ಹೆಚ್-90 | 80–82 | 9.0–9.4 |
7 | ಆರ್.ಎಸ್.ಎಫ್.ಹೆಚ್-1 | 95–100 | 38–40 |
8 | ಆರ್.ಎಸ್.ಎಫ್.ಹೆಚ್-130 | 95–100 | 39–43 |
9 | ಆರ್.ಎಸ್.ಎಫ್.ಹೆಚ್-1887 | 95–100 | 39–40 |
ಸೂರ್ಯಕಾಂತಿ ಬೆಳೆಯ ನಿರ್ವಹಣಾ ಕ್ರಮಗಳು
ಭೂಮಿ ಹದಗೊಳಿಸುವಿಕೆ: ನೀರು ಸರಾಗವಾಗಿ ಹರಿದುಹೋಗುವ ಮಣ್ಣು ಸೂರ್ಯಕಾಂತಿಗೆ ಸೂಕ್ತ. ಬಿತ್ತನೆಗೂ ಮುನ್ನ ಭೂಮಿಯನ್ನು ಆಳವಾಗಿ ಉಳುಮೆ ಮಾಡಿ, ನಂತರ ಎರಡು ಬಾರಿ ಉಳುಮೆ ಮಾಡಬೇಕು. ಸಾಲಿನಿಂದ ಸಾಲಿಗೆ 60 ಸೆಂ.ಮೀ. ಹಾಗೂ ಬೀಜದಿಂದ ಬೀಜಕ್ಕೆ 30 ಸೆಂ.ಮೀ. ಅಂತರದಲ್ಲಿ 2–5 ಸೆಂ.ಮೀ. ಆಳದಲ್ಲಿ ಬಿತ್ತನೆ ಮಾಡಬೇಕು.
ಬೀಜೋಪಚಾರ: ಬಿತ್ತನೆಗೂ ಮುನ್ನ ಅಜಟೋಬ್ಯಾಕ್ಟರ್ ಜೈವಿಕ ಗೊಬ್ಬರ ಅಥವಾ ಶಿಫಾರಸ್ಸಿನ ಥೈರಾಮ್, ಮ್ಯಾಂಕೋಜೆಬ್, ಮೆಟಾಲಾಕ್ಸಿಲ್ ಹಾಗೂ ಇಮಿಡಾಕ್ಲೋಪ್ರಿಡ್ ಬಳಸಿ ಬೀಜೋಪಚಾರ ಮಾಡುವುದರಿಂದ ಬೀಜಜನಿತ ರೋಗ ಹಾಗೂ ಕೀಟಗಳ ನಿಯಂತ್ರಣಕ್ಕೆ ಸಹಕಾರಿಯಾಗುತ್ತದೆ.
ಗೊಬ್ಬರ ನಿರ್ವಹಣೆ: ಬಿತ್ತನೆಗೂ ಮುನ್ನ ಎಕರೆಗೆ 7.5–10 ಟನ್ ಕೊಳೆತ ಕೊಟ್ಟಿಗೆ ಗೊಬ್ಬರ ಅಥವಾ ಕಾಂಪೋಸ್ಟ್ ಹಾಕಬೇಕು. ನೀರಾವರಿ ಮತ್ತು ಮಳೆಯಾಶ್ರಿತ ಬೆಳೆಗೆ ಶಿಫಾರಸ್ಸಿನ ಪ್ರಮಾಣದಲ್ಲಿ ಯೂರಿಯಾ, ಡಿ.ಎ.ಪಿ., ಎಂ.ಒ.ಪಿ. ಹಾಗೂ ಅಗತ್ಯ ಸೂಕ್ಷ್ಮ ಪೋಷಕಾಂಶಗಳನ್ನು ನೀಡಬೇಕು.
ಸಸಿ ಮತ್ತು ನೀರು ನಿರ್ವಹಣೆ: ಬಿತ್ತನೆಯ 10–15 ದಿನಗಳೊಳಗೆ ಪ್ರತಿ ಗುಂಪಿನಲ್ಲಿ ಆರೋಗ್ಯಕರ ಒಂದು ಸಸಿಯನ್ನು ಮಾತ್ರ ಉಳಿಸಿ, ಉಳಿದವುಗಳನ್ನು ಕಿತ್ತುಹಾಕಬೇಕು. ಕೆಂಪು ಮಣ್ಣಿನಲ್ಲಿ 8–10 ದಿನಗಳಿಗೊಮ್ಮೆ ಹಾಗೂ ಕಪ್ಪು ಮಣ್ಣಿನಲ್ಲಿ 15–20 ದಿನಗಳಿಗೊಮ್ಮೆ, ಹವಾಮಾನಕ್ಕೆ ಅನುಗುಣವಾಗಿ ನೀರು ನೀಡಬೇಕು. ಕಳೆ ನಿಯಂತ್ರಣಕ್ಕೆ ಶಿಫಾರಸ್ಸಿನ ಕ್ರಮಗಳನ್ನು ಅನುಸರಿಸಬೇಕು.
ರೋಗ–ಕೀಟ ನಿರ್ವಹಣೆ: ಹಕ್ಕು ರೋಗ, ಬೂದಿ ರೋಗ, ಎಲೆಚುಕ್ಕೆ ರೋಗ ಹಾಗೂ ರಸ ಹೀರುವ ಕೀಟಗಳು ಪ್ರಮುಖ ಸಮಸ್ಯೆಗಳಾಗಿವೆ. ಶಿಫಾರಸ್ಸಿನ ಔಷಧಿ ಮತ್ತು ಬೀಜೋಪಚಾರ ಕ್ರಮಗಳನ್ನು ಅನುಸರಿಸಬೇಕು. ಸೂರ್ಯಕಾಂತಿ ಜೊತೆಗೆ ಶೇಂಗಾ, ರಾಗಿ ಅಥವಾ ತೊಗರಿಯನ್ನು ಅಂತರ ಬೆಳೆಯಾಗಿ ಬೆಳೆಯಬಹುದು.
ಕೊಯ್ಲು: ತೆನೆಯ ಹಿಂಭಾಗ ಹಳದಿ ಬಣ್ಣಕ್ಕೆ ತಿರುಗಿದಾಗ ಕೊಯ್ಲು ಮಾಡಬೇಕು. ತೆನೆಗಳನ್ನು 2–3 ದಿನ ಒಣಗಿಸಿ ನಂತರ ಒಕ್ಕಣೆ ಮಾಡಬೇಕು. ಸೂಕ್ತ ನಿರ್ವಹಣೆಯಿಂದ ಎಕರೆಗೆ ಸುಮಾರು 8–10 ಕ್ವಿಂಟಾಲ್ ಇಳುವರಿ ಪಡೆಯಬಹುದು.








